ಹೊನ್ನಾಳಿ:
ಮಕ್ಕಳು ಮುಂದಿನ ಹಂತದ ಶಿಕ್ಷಣ ವ್ಯವಸ್ಥೆಗೆ ಒಗ್ಗಿಕೊಳ್ಳಲು ಪೂರ್ವ ಪ್ರಾಥಮಿಕ ಶಿಕ್ಷಣ ಸಹಕಾರಿ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಗ್ರಾಮದಲ್ಲಿ ಬುಧವಾರ ಎರಡನೇ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ, ಗ್ರಾಪಂ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿ ಉದ್ದೇಶಕ್ಕಾಗಿ ಸರಕಾರ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಗ್ರಾಪಂ ಚುನಾಯಿತ ಸದಸ್ಯರು ಗ್ರಾಮದ ಕೆಲಸ-ಕಾರ್ಯಗಳನ್ನು ವಾರ್ಡ್ ಸಭೆ, ಗ್ರಾಮಸಭೆಗಳಲ್ಲಿ ಚರ್ಚಿಸಿ ಅನುಮೋದನೆ ಪಡೆದು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಜಿ. ವೀರಶೇಖರಪ್ಪ ಮಾತನಾಡಿ, ಸರಕಾರದ ಒಂದಿಲ್ಲೊಂದು ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕೇಶವಲಿಂಗಪ್ಪ ಮಾತನಾಡಿ, ತಾಲೂಕಿನಲ್ಲಿ 295 ಕಾರ್ಯನಿರತ ಅಂಗನವಾಡಿ ಕೇಂದ್ರಗಳಿದ್ದು, 195 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ 100 ಅಂಗನವಾಡಿಗಳ ಪೈಕಿ 55 ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಕಾಮಗಾರಿ ವಿವಿಧ ಯೋಜನೆಗಳಡಿ ಪ್ರಗತಿ ಹಂತದಲ್ಲಿವೆ. ಇನ್ನುಳಿದ 45 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದ ಕಾರಣ ಶಾಲಾ ಕಟ್ಟಡ, ದೇವಸ್ಥಾನ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ವಿವರಿಸಿದರು.
ತಾಪಂ ಅಧ್ಯಕ್ಷೆ ಸುಲೋಚನಮ್ಮ, ಸದಸ್ಯ ಕೆ.ಎಲ್. ರಂಗನಾಥ್, ಎಪಿಎಂಸಿ ನಿರ್ದೇಶಕ ಜಿ.ವಿ. ರಾಜು, ಗ್ರಾಪಂ ಅಧ್ಯಕ್ಷೆ ಸುಮಾ ಕೃಷ್ಣಮೂರ್ತಿ, ಉಪಾಧ್ಯಕ್ಷ ರವಿ ಪ್ರಕಾಶ್, ಸದಸ್ಯರಾದ ಡಿ.ಬಿ. ರಮೇಶ್, ಮೈತ್ರ ರಾಜಪ್ಪ, ಬಸವರಾಜ್, ಸುಮಾ ಸತೀಶ್, ಎ.ಎಸ್. ಹಾಲೇಶಪ್ಪ, ಹನುಮಂತಪ್ಪ, ರತ್ನಮ್ಮ, ಗಿರಿಜಮ್ಮ ಇತರರು ಉಪಸ್ಥಿತರಿದ್ದರು.
ನಂತರ ಶಾಸಕ ಎಂ.ಪಿ. ರೇಣುಕಾಚಾರ್ಯ ಕ್ಯಾಸಿನಕೆರೆ, ಹುಣಸಘಟ್ಟ, ಹೊಸಹಳ್ಳಿ 2ನೇ ಕ್ಯಾಂಪ್, ಚನ್ನೇನಹಳ್ಳಿ ಹಾಗೂ ಹುರುಳೇಹಳ್ಳಿ ಗ್ರಾಮಗಳಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ