ಪ್ರಕೃತಿ ನಾಶವಾದರೆ ಮಾನವ ಕುಲಕ್ಕೆ ಪೆಟ್ಟು

ಚಿತ್ರದುರ್ಗ :  

    ಮರಗಳಿಗೆ ಮಾನವ ಬೇಕಿಲ್ಲ ಆದರೆ ಮರಗಳು ನರನಿಗೆ ವರವಿದ್ದ ಹಾಗೆ. ಮರವಿಲ್ಲದ ನಾಡು ನರಕ ಸದೃಶವಾದುದು. ಪರಿಸರ ನಾಶವಾದರೆ ಅದು ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಲಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬಸವಕೇಂದ್ರ ಶ್ರೀ ಮುರುಘಾಮಠ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಇವರ ಸಹಯೋಗದಲ್ಲಿ ನಡೆದ ಶರಣಸಂಗಮ ಮತ್ತು ಪೆರಿಯಾರ್ ಚಿಂತನೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಾಗತಿಕ ತಾಪಮಾನ ಮತ್ತು ಜನಜೀವನ ವಿಷಯ ಕುರಿತು ಶ್ರೀಗಳು ಮಾತನಾಡಿದರು

       ಜಗತ್ತು ಇಂದು ಹೆಚ್ಚಿನ ಉಷ್ಣತೆಗೆ ಒಳಗಾಗಿ ಅಪಾಯದ ಕಡೆಗೆ ವಾಲುತ್ತಿದೆ. ಪಕೃತಿಮಾತೆ ನಮ್ಮನ್ನು ರಕ್ಷಿಸುತ್ತಾಳೆ. ಪ್ರಕೃತಿ ಎಂದರೆ ಪಂಚಭೂತಗಳು. ಮಾನವ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ. ಅಂತರ್ಜಲಕ್ಕೆ ಕೈಹಾಕುತ್ತಿದ್ದಾನೆ. ಮಕ್ಕಳ ಸಂತಾನದ ಜೊತೆಗೆ ವೃಕ್ಷಸಂತಾನವೂ ಬೇಕು.

         ಗಿಡ ಮರಗಳು ಇಲ್ಲದೇ ಹೋದರೆ ಮಾನವ ತುಂಬ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ಅಭಿವದ್ಧಿ ಹೆಸರಿನಲ್ಲಿ ನಗರಗಳ ವಿಸ್ತರಣೆ ಆಗುತ್ತಿದೆ. ಇಂದು ಅತ್ಯಲ್ಪ ಅರಣ್ಯ ಸಂಪತ್ತು ಇದೆ. ವಾತಾವರಣದಲ್ಲಿ ಅತಿಯಾದ ಕಾರ್ಬನ್ ಡೈಆಕ್ಸೈಡ್‍ನಿಂದಾಗಿ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಲಕ್ಷಣವಾಗಿದ್ದು ನಾವು ಪ್ರಕೃತಿ ಪ್ರೀತಿಯನ್ನು ತಾಳಬೇಕಿದೆ. ನಮಗೆ ಜಲಸಂಪತ್ತು, ವನಸಂಪತ್ತು ಬೇಕು. ಹೊರರಾಷ್ಟ್ರಗಳು ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿವೆ.

        ಹಾಗೆಯೇ ಸ್ವಚ್ಛತೆ ಮತ್ತು ಪರಿಸರ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಪೆರಿಯಾರ್ ಪ್ರಕಾರ ಮೊದಲು ಮಾನವ, ಆನಂತರ ದೇವರು. ಮಾನವ ದೇವರನ್ನು ಸೃಷ್ಟಿ ಮಾಡಿದ ಎಂದು ಹೇಳಿದ್ದಾರೆ. ಬಸವಣ್ಣನವರು ಕೂಡ ದೇವರಿಗಿಂತ ಕಾಯಕವೇ ಮುಖ್ಯವೆಂದಿದ್ದಾರೆ ಎಂದರು.

          ಪೆರಿಯಾರ್ ಚಿಂತನೆ ಕೃತಿ ಲೇಖಕ ಹಾಗು ಸಹಪ್ರಾಧ್ಯಾಪಕ ಡಾ. ಸಿ. ಚಂದ್ರಪ್ಪ ಮಾತನಾಡಿ, ಬಸವಣ್ಣನವರ ಸಿದ್ಧಾಂತವನ್ನು ಪೆರಿಯಾರ್ ಅವರು ಯಥಾವತ್ತಾಗಿ ಮುಂದುವರಿಸಿದ್ದಾರೆ. ದೇವರ ಅಸ್ತಿತ್ವದಿಂದ ಮೋಕ್ಷವನ್ನು ಕಾಣಲು ಸಾಧ್ಯವಾಗುವುದಿಲ್ಲವೆಂದು ವೈದಿಕ ಸಂಪ್ರದಾಯಗಳನ್ನು ಪ್ರಶ್ನಿಸಿದವರು ಪೆರಿಯಾರ್. ಅವರು ಮೂಢನಂಬಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಯಾವುದೇ ರಾಹುಕಾಲ ಇಲ್ಲ ಎಂಬುದನ್ನು ಪೆರಿಯಾರ್ ಹೇಳಿದ್ದಾರೆ. ಸಮಾಜದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಹೋರಾಡಿದರು ಎಂದು ಸ್ಮರಿಸಿದರು.

       ವಿಷಯಾವಲೋಕನ ಮಾಡಿದ  ಪ್ರಾಂಶುಪಾಲರಾದ ಹೆಚ್. ಲಿಂಗಪ್ಪ, ಭೂಮಿಯ ಮೇಲಿರುವ ಸಂಪತ್ತನ್ನು ಬಳಕೆ ಮಾಡಿಕೊಳ್ಳುವವನು ಮಾನವ. ಆದರೆ ಅದರ ಉಪಯೋಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಬರಡಾಗಿರುವ ಭೂಮಿಯನ್ನು ಫಲವತ್ತತೆ ಮಾಡಬೇಕಿದೆ.

        ಇಂದು ಪ್ರಾಣಿಗಳು ಅಳಿವಿನಂಚಿಗೆ ಸರಿಯುತ್ತಿವೆ, ವಾಯುಮಾಲಿನ್ಯ, ಜಲಮಾಲಿನ್ಯವಾಗುತ್ತಿದೆ. ಅತಿಯಾದ ವಾಹನಗಳಿಂದಾಗಿ ಹೊಗೆ ಪ್ರಮಾಣ ಜಾಸ್ತಿಯಾಗಿ ಜನರ ಮೇಲೆ, ವಾತಾವರಣದ ಮೇಲೆ ಪ್ರಭಾವ ಬೀರುತ್ತಿದೆ. ನಮ್ಮಲ್ಲಿ ಅರಣ್ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸರವನ್ನು ನಾಶ ಮಾಡುವ ಜೀವಿ ಎಂದರೆ ಮಾನವ. ದುರಾಸೆಯಿಂದ ಬುದ್ಧ, ಬಸವ, ಅಂಬೇಡ್ಕರ್ ಮೊದಲಾದವರು ಬಹಳ ದೂರವಿದ್ದರು.

        ಕಳೆದ ಮೂರ್ನಾಲ್ಕು ದಶಕಗಳಿಂದ ಭೂಮಿಯ ತಾಪಮಾನ ಜಾಸ್ತಿಯಾಗುತ್ತಿದೆ. ಔಷಧೋಪಕರಣಗಳು, ಕೈಗಾರಿಕೀಕರಣ, ತ್ಯಾಜ್ಯವಸ್ತುಗಳು ಮೊದಲಾದವು ತಾಪಮಾನ ಬದಲಾವಣೆಗೆ ಮುಖ್ಯ ಕಾರಣವಾಗಿವೆ. ಪೆರಿಯಾರ್ ಅವರು ಬ್ರಾಹ್ಮಣತ್ವವನ್ನು ವಿರೋಧಿಸಿದವರು. ಕೊನೆಯವರೆಗೂ ಬಡವರ ಅಭ್ಯುದಯಕ್ಕಾಗಿ ಶ್ರಮಿಸಿದರು. ಪೆರಿಯಾರ್‍ಗೆ ಪೆರಿಯಾರೇ ಸಮ ಎಂದು ನುಡಿದರು.

         ಕಾರ್ಯಕ್ರಮದಲ್ಲಿ ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಎಸ್‍ಜೆಎಂ ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಂಜ್ಯೋತಿ, ಪ್ರೊ.ಶಿವಲಿಂಗಪ್ಪ, ಡಾ. ಮಂಜಣ್ಣ, ಪ್ರೊ. ಪರಮೇಶ್ವರಪ್ಪ, ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap