ಬೆಂಗಳೂರು:
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಅಭಿನಂದಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಗಮ ಆಯ್ಕೆಗೆ ಸಹಕರಿಸಿದ ಬಿಜೆಪಿ ನಾಯಕರಿಗೆ ಕೃತಜ್ಞತೆಗಳು ಮತ್ತು ಧನ್ಯವಾದಗಳು ಎಂದರು.
ನಿಮ್ಮ ತಂತ್ರಗಾರಿಕೆಗೆ ಹೆದರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೆ ಎನ್ನುವ ಪ್ರಶ್ನೆಗೆ ಪ್ರತಿಕ್ರಯಿಸಲು ಕುಮಾರ ಸ್ವಾಮಿ ನಿರಾಕರಿಸಿದರು. ಬಿಜೆಪಿ ನಾಯಕರಿಗೆ ಅಭಿನಂದನೆಗಳನ್ನಷ್ಟೇ ಹೇಳುತ್ತೇನೆ ಎಂದು ಹೇಳಿದರು.
ಸರ್ಕಾರಿ ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು. ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಒಳಪಟ್ಟು ಈ ಕಾಯ್ದೆ ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಪ್ರಸ್ತಾಪಿಸಿದ್ದಾರೆ. ಕಾಯ್ದೆ ಜಾರಿ ಮಾಡುವ ಬಗ್ಗೆ ಗೊಂದಲಗಳು ಇದ್ದುದರಿಂದ ತೀರ್ಮಾನ ಕೈಗೊಳ್ಳುವುದು ತಡವಾಗಿದೆ. ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.