ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಮರು ಪ್ರಸ್ತಾವನೆ:ತಮ್ಮಣ್ಣ

ಬೆಂಗಳೂರು

        ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ಸುಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಮುಖ್ಯಮಂತ್ರಿಗಳಿಗೆ ಮರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

         ಕೆಲ ದಿನಗಳ ಹಿಂದೆ ಬಸ್ ಪ್ರಯಾಣ ದರಗಳನ್ನು ಶೇಕಡಾ 18ರಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಇದನ್ನು ತಡೆಹಿಡಿದಿದ್ದರು.ಆದರೆ ಡೀಸೆಲ್ ದರ ಲೀಟರ್‍ಗೆ ಐವತ್ಮೂರು ರೂಪಾಯಿ ಇದ್ದ ಕಾಲದಲ್ಲಿ ಬಸ್ ಪ್ರಯಾಣ ದರಗಳನ್ನು ಹೆಚ್ಚಳ ಮಾಡಲಾಗಿತ್ತು. (2013) ಇದಾದ ನಂತರ ಹೆಚ್ಚಳ ಮಾಡಲಾಗಿಲ್ಲ ಎಂದು ಹೇಳಿದರು.

         ಸುದ್ದಿಗಾರರ ಜತೆ ಮಾತನಾಡಿದ ಅವರು, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆರು ನೂರಾ ಎಂಭತ್ತೇಳು ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದ ಅವರು, ಈ ಹಿಂದೆ ನಾವು ಪ್ರಸ್ತಾವನೆ ಕಳಿಸಿದಾಗ ಡೀಸೆಲ್ ದರ ಎಪ್ಪತ್ನಾಲ್ಕು ರೂಪಾಯಿಗಳಷ್ಟಿತ್ತು. ಆದರೆ ಈಗ ಎಪ್ಪತ್ತು ರೂಪಾಯಿಗಿಳಿದಿದೆ.ಆದರೂ ನಷ್ಟ ಹೆಚ್ಚುತ್ತಲೇ ಇದೆ ಎಂದರು.

          ಹೀಗಾಗಿ ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.ಶೇಕಡಾ ಹದಿನೆಂಟರಷ್ಟಲ್ಲದಿದ್ದರೂ ನಿಮ್ಮ ವಿವೇಚನೆಯನ್ನು ಬಳಸಿ ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿಕೊಳ್ಳಲಾಗುವುದು ಎಂದರು.

          ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳ ಜತೆ ಖಾಸಗಿ ಬಸ್ಸುಗಳಿಗೂ ಜಿಪಿಎಸ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದ್ದು ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳು ನಿರ್ದಿಷ್ಟ ಮಾರ್ಗದಲ್ಲಿ ಪ್ರಯಾಣಿಸುವಾಗ ಹಲವು ಕಡೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

          ಹೀಗಾಗಿ ನಿರ್ದಿಷ್ಟ ಮಾರ್ಗದಲ್ಲಿ ಪ್ರಯಾಣಿಸುವ ಬಸ್ಸುಗಳು ಎಲ್ಲೆಲ್ಲಿ ನಿಲ್ಲುತ್ತವೆ.ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ.ಲಗೇಜ್ ಅನ್ನು ತುಂಬಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳಲು ಜಿಪಿಎಸ್‍ನಿಂದ ಸಾಧ್ಯವಾಗಲಿದೆ ಎಂದರು.

          ಏಕಾಏಕಿಯಾಗಿ ಇಂತಹ ಬಸ್ಸುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ.ಆದರೂ ಹಲವು ಕಡೆ ಧಾಳಿ ನಡೆಸಿ ಇದಕ್ಕೆ ಪೂರಕವಾದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ