ದಾವಣಗೆರೆ:
ಗೊತ್ತಿಲ್ಲದಂತೆ ರೈತರು ವಿಷ ಸೇವಿಸಿದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಏನೂ ಮಾಡಲಾಗುವುದಿಲ್ಲ. ಮರಣಪತ್ರವೇ ಅಂತಿಮವಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಹೊರ ವಲಯದ ಕುಂದುವಾಡ ಕೆರೆ ಸಮೀಪದಲ್ಲಿ ನಿರ್ಮಾಣ ಆಗುತ್ತಿರುವ ಗಾಜಿನ ಮನೆ ಕಾಮಗಾರಿ ವೀಕ್ಷಿಸಿ ಪರಿಶೀಲನೆ ಮಾಡಿದ ಬಳಿಕ ¸ಮಂಡ್ಯದ ರೈತ ಕುಟುಂಬ ಆತ್ಮಹತ್ಯೆ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸುತ್ತೇನೆ. ಗೊತ್ತಿಲ್ಲದೇ ಆತ್ಮಹತ್ಯೆ ಮಾಡಿಕೊಂಡರೆ, ಸಿಎಂ ಏನು ಮಾಡಲಾಗುವುದಿಲ್ಲ. ಮರಣಪತ್ರವೇ ಅಂತಿಮವಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನು ಕಾರಣ ಎಂಬುದು ತಿಳಿಯಬೇಕು. ಇದಕ್ಕಾಗಿ ಪೊಲೀಸ್ ಇಲಾಖೆ ಇದೆ. ತನಿಖೆ ಮಾಡಲಿದೆ ಎಂದರು.
ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ, ಎಫ್‍ಐಆರ್, ತನಿಖೆಯ ನಂತರ ನಿಖರವಾದ ಮಾಹಿತಿ ದೊರೆಯುತ್ತದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಸರ್ಕಾರ ನೀಡಲಿದೆ ಎಂದರು.
ನಗರದಲ್ಲಿ ನಿರ್ಮಾಣವಾಗಿರುವ ಗ್ಲಾಸ್‍ಹೌಸ್ ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ 5.28 ಕೋಟಿ ರೂ.ಗಳಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಕ್ಯಾಬಿನೆಟ್‍ನಲ್ಲಿ ಚರ್ಚಿಸಿದ ನಂತರ ಅನುದಾನ ನೀಡಲಾಗುವುದು. ಗ್ಲಾಸ್‍ಹೌಸ್‍ನಲ್ಲಿ ಇನ್ನೂ ಕೆಲವು ಬಾಕಿ ಕೆಲಸಗಳು ಉಳಿದಿವೆ. ಲೈಟಿಂಗ್ಸ್, ಮ್ಯೂಸಿಕಲ್ ಫೌಂಟೇನ್, ಪಾರ್ಕಿಂಗ್, ಕ್ಯಾಂಟಿನ್ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳಿಗಾಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ಗಾಜಿನ ಮನೆಗೆ ಇದುವರೆಗೂ 26 ಕೋಟಿ ಹಣ ಖರ್ಚು ಮಾಡಲಾಗಿದೆ. ಕೆಆರ್‍ಐಡಿಎಲ್‍ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಶೇ.90ರಷ್ಟು ಕೆಲಸ ಮುಗಿದಿದೆ. ಕೇವಲ ಶೇ.10ರಷ್ಟು ಕೆಲಸ ಬಾಕಿ ಇದೆ. ಇದಕ್ಕಾಗಿ 5 ಕೋಟಿ ಹಣಕ್ಕಾಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ತೋಟಗಾರಿಕೆ, ಲೈಟಿಂಗ್, ನಿರ್ವಹಣೆ ವೆಚ್ಚ, 125 ಕೆವಿ ಜನರೇಟರ್, 10 ಗಾರ್ಡ್‍ನಿಂಗ್, 6 ಸೆಕ್ಯೂರಿಟಿ ನೇಮಕ, ತಾರಸಿ ತೋಟಗಾರಿಕೆಗೆ ಆದ್ಯತೆ, ಪಾಲಿಹೌಸ್‍ನಲ್ಲಿ ತರಕಾರಿ ಬೆಳೆ, ಕೃಷಿ ಹೊಂಡ ಹೇಗೆ ನಿರ್ವಹಣೆ, ಜಲ ಕೃಷಿ ಬಗ್ಗೆ ಡೆಮೋ ನೀಡುವ ಕೆಲಸ ನಡೆಯಲಿದೆ ಎಂದರು.
ಅಮೃತಯೋಜನೆಯಡಿ ಉದ್ಯಾನವನಕ್ಕೆ 90 ಲಕ್ಷ ಬಿಡುಗಡೆಯಾಗಿದ್ದು, ಜಿಮ್ ಸಾಮಾಗ್ರಿಗಳನ್ನು ಅಳವಡಿಸಲಾಗುವುದು. ಡಿಸೆಂಬರ್ 25ಕ್ಕೆ ದ್ರಾಕ್ಷಿ ಮೇಳ, ವೈನ್ ಮೇಳ, ಜನವರಿ 26ಕ್ಕೆ ಫಲಪುಷ್ಟ ಪ್ರದರ್ಶನವನ್ನು ಇಲ್ಲಿ ಆಯೋಜಿಸಲಾಗುವುದು. ಮಾತ್ರವಲ್ಲದೇ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಚೇರಿ ಗಾಜಿನ ಮನೆಬಳಿ ಶಿಫ್ಟ್ ಮಾಡಲಾಗುವುದು. ಕೆಆರ್‍ಡಿಎಲ್ ನಮ್ಮ ಸುಪರ್ದಿಗೆ ನೀಡಿದ ನಂತರ ನಿರ್ವಹಣೆ ಜವಾವ್ದಾರಿ ನಮ್ಮದಾಗಿದ್ದು, ಇಡೀ ರಾಜ್ಯದಲ್ಲಿಯೇ ಮಾದರಿ ಗಾಜಿಮನೆಯನ್ನಾಗಿ ಮಾಡಿ, ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಯತೀರಾಜ್, ಶ್ರೀಕಾಂತ್, ಶಶಿಕಲಾ, ರೇಖ್ಯಾನಾಯ್ಕ್, ರೇಖಾ, ಜಯಶೀಲರೆಡ್ಡಿ, ಮಂಜುನಾಯ್ಕ್, ಮಂಜುನಾಥ್, ಲೋಕೇಶಪ್ಪ, ಶೃತಿನಾಯಕ್, ಸುನಿಲ್, ವೆಂಕಟೇಶ್‍ಮೂರ್ತಿ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ