ದಾವಣಗೆರೆ:
ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಎರೆಹುಳು ಸೇರಿದಂತೆ ಸೂಕ್ಷ್ಮಜೀವಿಗಳು ನಶಿಸುತ್ತಿವೆ. ಇದರಿಂದ ಕೃಷಿ ಶಾಶ್ವತವಾಗಿ ಹಿಂದೆ ಹೋಗಿದೆ ಎಂದು ನಾಡೋಜ ನಾರಾಯಣರೆಡ್ಡಿ ಎಲ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿಂದು ಸಮಗ್ರ ಸುಸ್ಥಿರ ನೈಸರ್ಗಿಕ ಕೃಷಿ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರಗಳಿಂದ ಭೂಮಿ ಬಂಜರಾಗುತ್ತಿದೆ. ಮಣ್ಣಿನ ಫಲವತ್ತತೆ ಮಾಡಬೇಕಾಗಿದೆ. ರಾಸಾಯನಿಕ ಬಳಕೆಯಿಂದ ಕೋಟ್ಯಾಂತರ ಜೀವಿಗಳು ನಾಶವಾಗುತ್ತಿವೆ. ರೈತರಿಗೆ ಸಾಲಮನ್ನಾ ಎಂದುಹೇಳಿ ಸರ್ಕಾರಗಳು ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.
ರೈತರು ಸರ್ಕಾರದ ಮುಂದೆ ಸಾಲಮನ್ನಾ ಮಾಡಿ ಎಂಬ ಬೇಡಿಕೆ ಇಡಬಾರದು. ಸ್ವಾಭಿಮಾನದಿಂದಿರಬೇಕು. ಭಾರತ ಕೃಷಿ ಸಂಶೋಧನಾ ಸಂಸ್ಥೆ ಇದು ಯಾರ ಕೈಗೊಂಬೆಯಾಗಿರುವುದು ಎಂದು ಅರ್ಥವಾಗಿಲ್ಲ, ಇದರ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ, ಇದು ಮಾಡುತ್ತಿರುವ ಸಂಶೋಧನೆಗಳು ಯಾವುದೇ ರೈತರಿಗೂ ಪೂರಕವಾಗಿಲ್ಲ, ರೈತರಿಗೆ ಇಂದು ವಿಚಾರ ಸಂಕಿರಣ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಖಾಸಗಿ ಕಂಪನಿಗಳ ಪ್ರಾಯೋಜಕತೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆಯಿಂದ ನಾವು 50 ವರ್ಷಗಳ ಹಿಂದಕ್ಕೆ ಹೋಗಿದ್ದೇವೆ. ರಾಸಾಯನಿಕ ಗೊಬ್ಬರ ಬಳಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ನೀರಾವರಿ ಎನ್ನುವುದು ದೇಶಕ್ಕೆ ಒಂದು ಶಾಪ, ನೀರಾವರಿಯಿಂದ ಅನೇಕ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಇದರಿಂದ ಜೀವ ವೈವಿಧ್ಯಮಯ ನಾಶವಾಗುತ್ತಿದೆ. ಯಾರಿಗೋ ನೀರು ಕೊಡಿಸುವುದಕ್ಕಾಗಿ ಭೂಮಿ ಮುಳುಗಡೆ ಮಾಡುವುದು ಅವೈಜ್ಞಾನಿಕ ಎಂದು ಹೇಳಿದರು.
ಕಾರ್ಡಿಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಟಿ.ಸುದರ್ಶನ್ ಮಾತನಾಡಿ, ಪ್ರಸ್ತುತ ದಿನದಲ್ಲಿ ರಸಗೊಬ್ಬರಗಳು ಬಳಸುವುದರಿಂದ ಅನ್ನ ಕೊಡುವ ತಾಯಿಗೆ ವಿಷ ಕೊಡುವ ಕೆಲಸ ಮಾಡುತ್ತಿದ್ದೇವೆ. ಕೃಷಿಯಲ್ಲಿ ರಸಗೊಬ್ಬರ ಬಳಕೆಯಿಂದ ಆಹಾರ ವಿಷಮಯವಾಗಿದೆ. ನಾವು ವಿಷ ಸೇವನೆ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸಗೊಬ್ಬರ ಬಳಕೆ ನಿಲ್ಲಿಸಿದರೆ ಕೃಷಿ ಮತ್ತು ಆಹಾರದಲ್ಲಿರುವ ಸಮಸ್ಯೆಗಳು ಪರಿಹಾರವಾಗುತ್ತದೆ. ಪಶ್ಚಿಮ ಘಟ್ಟಗಳಲ್ಲಿ ಜೀವ ವೈವಿಧ್ಯಗಳಿವೆ. ಪ್ರಪಂಚದಲ್ಲಿ 34 ಜೀವ ವೈವಿಧ್ಯಮವಿದೆ. ನಮ್ಮ ದೇಶದಲ್ಲಿ ನಾಲ್ಕು ಜೀವ ಜೀವವೈವಿಧ್ಯಮ ಇರುವುದು ಹೆಮ್ಮೆಯ ವಿಷಯ. ಪಶ್ಚಿಮ ಘಟ್ಟದಲ್ಲಿ 5 ಸಾವಿರ ಸಸ್ಯಮಯ, ಅಪರೂಪದ ಸಸ್ಯಪ್ರಬೇಧ, ಜೀವವೈವಿಧ್ಯ, ಪಕ್ಷಿಪ್ರಬೇಧ ಇವೆಲ್ಲವೂ ಇವೆ.ಕನ್ಯಾಕುಮಾರಿಯಿಂದ ಗುಜರಾತ್ ನವರೆಗೂ ಹರಡಿಕೊಂಡಿದೆ. ಯಾವುದೇ ಹೊಸತಳಿ ಸಂಶೋಧನೆಯಾಗಬೇಕಾದರೆ ಪಶ್ಚಿಮಘಟ್ಟದಲ್ಲಾಗುತ್ತವೆ.
ಆದರಿಂದು ಪಶ್ಚಿಮಘಟ್ಟಗಳು ಅಪಾಯ ಎದುರಿಸುತ್ತಿವೆ. ಏಕೆಂದರೆ ಅರಣ್ಯ ನಾಶವಾಗುತ್ತಿದೆ. ಆದ್ದರಿಂದ ಇಡೀ ದಕ್ಷಿಣ ಭಾರತಕ್ಕೆ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್, ರೈತ ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್ ಕುರುಡಿ, ಮಂಜುಳಾ ಅಕ್ಕಿ,ಎಂ.ಜಿ.ಕರಿಬಸಪ್ಪ, ಲೇಖನಾಥ್ ಸೇರಿದಂತೆ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
