ಅಧಿಕಾರಿಗಳ ಗೈರು: ಸದಸ್ಯರಿಂದ ಸಭಾತ್ಯಾಗ

ತುಮಕೂರು

     ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಕೆಲವು ಅಧಿಕಾರಿಗಳು ಗೈರುಹಾಜರಾದುದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡು ತಾ.ಪಂ. ಉಪಾಧ್ಯಕ್ಷ ಸೇರಿ ಹಲವು ಸದಸ್ಯರು ಸಭಾತ್ಯಾಗ ಮಾಡಿದ ಅಪರೂಪದ ಪ್ರಸಂಗ ಮಂಗಳವಾರ ಬೆಳಗ್ಗೆ ತುಮಕೂರು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ನಡೆಯಿತು.

      ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಬೇರಾವ ವಿಷಯವೂ ಚರ್ಚೆಗೆ ಬರದೆ ಅಧಿಕಾರಿಗಳ ಗೈರು ಹಾಜರಿಯೇ ಪ್ರಮುಖ ಚರ್ಚೆಗೆ ಕಾರಣವಾಯಿತು. ಸದಸ್ಯರು ತಮ್ಮ ಮಾತಿನಲ್ಲೇ ಕೆಂಡ ಕಾರಿದರು. ಸ್ವತಃ ಅಧ್ಯಕ್ಷ ಗಂಗಾಂಜನೇಯ ಸಹ ದನಿಗೂಡಿಸಿದರು. ಕೆಲಹೊತ್ತಿನ ಬಳಿಕ ಉಪಾಧ್ಯಕ್ಷ ಶಾಂತಕುಮಾರ್ ಸಹಿತ ಕೆಲವರು ಸಭೆಯಿಂದ ಎದ್ದು ಹೊರನಡೆದರು. ಜೊತೆಗೇ ಮತ್ತೆ ಕೆಲವರು ಎದ್ದು ಹೊರಟರು. ಈ ಬಹಿಷ್ಕಾರದೊಂದಿಗೆ ಸಭೆ ಸ್ಥಗಿತವಾಯಿತು.

      ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ನಡವಳಿಯನ್ನು ಸ್ಥಿರೀಕರಿಸುವಾಗ, ಗೊಂಚಲು ಗ್ರಾಮಗಳ ಆಯ್ಕೆ ಬಗ್ಗೆ ಕೆಲಸದಸ್ಯರು ಏರಿದ ದನಿಯಲ್ಲಿ ಆಕ್ಷೇಪಿಸತೊಡಗಿದರು. ಆ ವೇಳೆ ಸದಸ್ಯರಾದ ಕವಿತಾ ರಮೇಶ್ ಮತ್ತು ರೇಣುಕಮ್ಮ ‘ಇಂಥ ಸಭೆಗೆ ಅಧಿಕಾರಿಗಳು ಗೈರುಹಾಜರಾಗುತ್ತಿದ್ದಾರೆ. ಮೊದಲಿಗೆ ತಹಸೀಲ್ದಾರರನ್ನು ಕರೆಸಿ’ ಎಂದು ಏರಿದ ದನಿಯಲ್ಲಿ ಆಗ್ರಹಿಸಿದ್ದು ಮುಂದಿನ ಬೆಳವಣಿಗೆಗೆ ನಾಂದಿ ಹಾಡಿತು.

    ‘ಇದಂತೂ ಬೇಜವಾಬ್ದಾರಿಯಾದುದು. ಮೂರು ತಿಂಗಳ ಬಳಿಕ ನಡೆಯುತ್ತಿರುವ ಸಭೆಗೂ ಅಧಿಕಾರಿಗಳು ಗೈರಾಗುತ್ತಾರೆಂದರೆ ಏನರ್ಥ?’ ಎಂದು ಕವಿತಾ ರಮೇಶ್ ಪ್ರಶ್ನಿಸಿದಾಗ, ರೇಣುಕಮ್ಮ ದನಿಗೂಡಿಸಿ ಸಹಮತ ವ್ಯಕ್ತಪಡಿಸಿದರು. ‘ಗೂಳೂರಿನಲ್ಲಿ ಪಂಪು ಮೋಟಾರ್ ವಿತರಣೆಯ ಸಂರ್ದಭ ಸ್ಥಳೀಯ ಸದಸ್ಯರ ಗಮನಕ್ಕೇ ತಂದಿಲ್ಲ. ಆ ಇಲಾಖೆ ಅಧಿಕಾರಿಯೂ ಈ ಸಭೆಗೆ ಬಂದಿಲ್ಲ. ಮೊದಲು ಅವರನ್ನು ಕರೆಸಿ’ ಎಂದು ರೇಣುಕಮ್ಮ ಆಗ್ರಹಿಸಿದ್ದು, ಚರ್ಚೆಯ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿತು. ‘ಸಭೆ ಆರಂಭವಾಗುವ ಮೊದಲೇ ಅಧಿಕಾರಿಗಳು ಬಂದಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬೇಕು. ಈಗ ನೋಡಿದರೆ ಏನು ಪ್ರಯೋಜನ?’ ಎಂದು ಅವರು ಅಧ್ಯಕ್ಷರನ್ನು ಪ್ರಶ್ನಿಸಿದರು.

     ಚರ್ಚೆ ಹೀಗೆಯೇ ಸಾಗುತ್ತ ಹೋಯಿತು. ಸದಸ್ಯರಾದ ವಿಜಯಕುಮಾರ್, ರಂಗಸ್ವಾಮಿ, ಶಿವಕುಮಾರ್ ಮೊದಲಾದವರೂ ಅಧಿಕಾರಿಗಳ ಗೈರಿಗೆ ಅಸಮಾಧಾನ ವ್ಯಕ್ತಪಡಿಸುತ್ತ ಹೋದರು. ಈ ಹಂತದಲ್ಲಿ ತಾಳ್ಮೆ ತಪ್ಪಿದ ಅಧ್ಯಕ್ಷ ಗಂಗಾಂಜನೇಯ ಸಭೆಯಲ್ಲಿಲ್ಲದಿದ್ದ ಅಧಿಕಾರಿಯೊಬ್ಬರನ್ನು ಕುರಿತು ‘‘ಎನ್ ಮಾಡಿದ್ರೂ ಆ ಲೋಫರ್ ಫೋನ್ ಎತ್ತಲಿಲ್ಲ’’ ಎಂದು ಏರಿದ ದನಿಯಲ್ಲಿ ಅಬ್ಬರಿಸಿಬಿಟ್ಟರು. ಅವರ ಈ ಮಾತಿನಿಂದ ಸದಸ್ಯರೆಲ್ಲ ಕ್ಷಣಕಾಲ ಅವಾಕ್ಕಾದರು. ಬಳಿಕ ಮತ್ತೆ ಚರ್ಚೆ ಮುಂದುವರೆಯಿತು.

      ಸದಸ್ಯ ಶಿವಕುಮಾರ್ ‘ಅಧಿಕಾರಿಗಳಿಲ್ಲದೆ ಸಭೆ ನಡೆಸುವುದು ಉಪಯೋಗವಾಗದು’ ಎಂದರು. ಇತರರೂ ದನಿಗೂಡಿಸಿದರು. ಮಧ್ಯಾಹ್ನ 12-30 ರ ಸುಮಾರಿಗೆ ತಾ.ಪಂ. ಉಪಾಧ್ಯಕ್ಷ ಶಾಂತಕುಮಾರ್, ಸದಸ್ಯರಾದ ರವಿ, ಶಿವಕುಮಾರ್, ಶಿವಣ್ಣ ಮೊದಲಾದವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಇದರೊಂದಿಗೆ ಸಭೆ ಯಾವುದೇ ಕಲಾಪ ನಡೆಸದೆ ಸ್ಥಗಿತವಾಯಿತು.
ಸಭೆಯಿಂದ ಹೊರನಡೆಯುವಾಗ ಮಾಧ್ಯಮದವರೊಂದಿಗೆ ಮಾತನಾಡಿದ ಶಾಂತಕುಮಾರ್, ‘ತುಮಕೂರು ತಾಲ್ಲೂಕು ತಹಸೀಲ್ದಾರರಿಗೆ ಸಭೆಗೆ ಗೈರುಹಾಜರಾದ ಬಗ್ಗೆ 2 ಬಾರಿ ನೋಟೀಸ್ ಕಳುಹಿಸಲಾಗಿದೆ. ಆದರೂ ಅವರು ಇಂದಿನ ಸಭೆಗೆ ಬಂದಿಲ್ಲ.

     ಪ್ರಮುಖ ಇಲಾಖೆಗಳವರೂ ಬಂದಿಲ್ಲ. ಮೊದಲೇ ತಾ.ಪಂ.ಗೆ ಸರ್ಕಾರದಿಂದ ಬರುವ ಅನುದಾನ ಕಡಿಮೆ. ಹೀಗಿರುವಾಗ ಇನ್ನು ಇವರು ಗೈರುಹಾಜರಾದರೆ ಸದಸ್ಯರ ಪರಿಸ್ಥಿತಿ ಏನಾದೀತು? ಜನತೆಗೆ ಏನು ಉತ್ತರಿಸಬೇಕು? ಅಧಿಕಾರಿಗಳಿಗೆ ಒಂದು ಎಚ್ಚರಿಕೆ ಆಗಲೆಂದು ಸಭಾತ್ಯಾಗ ಮಾಡುತ್ತಿದ್ದೇವೆ’ ಎಂದು ಅಸಮಾ‘ಾನದಿಂದ ಹೇಳಿದರು.

     ‘ತಾ.ಪಂ.ವ್ಯಾಪ್ತಿಗೆ ಒಟ್ಟು 28 ಇಲಾಖೆಗಳು ಒಳಪಡುತ್ತವೆ. ಆದರೆ ಇಂದಿನ ಸ‘ೆಗೆ ತಹಸೀಲ್ದಾರ್, ನಿರ್ಮಿತಿ ಕೇಂದ್ರ, ಕೆ.ಆರ್.ಡಿ.ಎಲ್., ಸಣ್ಣನೀರಾವರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು 9 ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಅವರೆಲ್ಲರಿಗೂ ನೋಟೀಸ್ ನೀಡಲು ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ದರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

      ಇದಕ್ಕೂ ಮೊದಲು ನಡೆದ ಚರ್ಚೆಯ ಸಂದ‘ರ್ದಲ್ಲಿ ಸದಸ್ಯೆ ಕವಿತಾ ರಮೇಶ್ ಮಾತನಾಡಿ, ಗ್ರಾಮೀಣ ರೈತರಿಗೆ ಮನೆ ಕಟ್ಟಿಕೊಳ್ಳಲು ಸೌಲಭ್ಯ ಕೊಡುವುದಾಗಿ ‘ರವಸೆ ನೀಡಿದ್ದು, ಅವರುಗಳು ತಾವಿದ್ದ ಮನೆಗಳನ್ನು ಕೆಡವಿಕೊಂಡು ಬೇರೊಂದು ಜಾಗಕ್ಕೆ ತೆರಳಿದ್ದಾರೆ. ಜಾನುವಾರುಗಳು ಬೀದಿಪಾಲಾಗಿವೆ. ಆದರೆ ಈವರೆಗೆ ಅವರಿಗೆ ಮನೆಗಳ ನಿರ್ಮಾಣಕ್ಕೆ ನೆರವು ಕೊಟ್ಟಿಲ್ಲ. ಉಪಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರದಲ್ಲೇ ಈ ಸಮಸ್ಯೆ ಉಂಟಾಗುವುದಾದರೆ, ಬೇರೆ ಸ್ಥಳಗಳಲ್ಲಿ ಏನಾಗಿರಬಹುದು? ನೀವು ಮನೆ ಕಟ್ಟಲು ಆದೇಶ ಕೊಡುವಷ್ಟರಲ್ಲಿ ಆ ಬಡ ರೈತಾಪಿಗಳು ಸತ್ತೇ ಹೋಗಿರುತ್ತಾರೆ ಎಂದು ಆಕ್ರೋಶದಿಂದ ಹೇಳಿದರು.

      ಇವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸದಸ್ಯರಾದ ವಿಜಯಕುಮಾರ್ ಮತ್ತು ರಂಗಸ್ವಾಮಿ, ಈ ನಿಟ್ಟಿನಲ್ಲಿ ತಾ.ಪಂ.ವತಿಯಿಂದ ಉಪಮುಖ್ಯಮಂತ್ರಿಗಳು, ವಸತಿ ಸಚಿವರ ಬಳಿ ನಿಯೋಗ ಹೋಗಿ ಸಮಸ್ಯೆ ಬಗೆಹರಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಗೊಂಚಲು ಗ್ರಾಮಗಳ ಆಯ್ಕೆ ಬಗ್ಗೆ ಸದಸ್ಯೆ ವಿಶಾಲಾಕ್ಷಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

        ‘‘ಗೊಂಚಲು ಗ್ರಾಮಗಳ ಆಯ್ಕೆ ಬಗ್ಗೆ ಸದಸ್ಯರನ್ನು ಕೇಳಿಯೇ ಇಲ್ಲ. ಎಲ್ಲವನ್ನೂ ನೀವೆ ಆಯ್ಕೆ ಮಾಡಿಕೊಂಡಿದ್ದೀರಿ. ಹಾಗಾದರೆ ಸದಸ್ಯರಿಗೇನು ಬೆಲೆ ಇದೆ?’’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಸದಸ್ಯರುಗಳಾದ ಜಯಕೃಷ್ಣ, ಕವಿತಾ ರಮೇಶ್, ವಿಜಯಕುಮಾರ್ ಮೊದಲಾದವರು ದನಿಗೂಡಿಸಿದರು. ಆಗ ಅಧ್ಯಕ್ಷ ಗಂಗಾಂಜನೇಯ ‘‘ಇಲ್ಲಿ ಯಾವುದೇ ಪಕ್ಷಪಾತ ನಡೆದಿಲ್ಲ. ಸಮಾನವಾಗಿ ಗುರುತಿಸಲಾಗಿದೆ’’ ಎಂದು ಉತ್ತರಿಸಿದರು.

         ಈ ಮಧ್ಯ ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮಾತನಾಡಿ, ತಾವು ಹೊಸಬರಾಗಿದ್ದು, ತಾವು ಬಂದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಮುಂದಿನ ಸಭೆಗಳಲ್ಲಿ ಹೀಗಾಗದಂತೆ ಗಮನಿಸುವುದಾಗಿ ಸದಸ್ಯರಿಗೆ ‘ರವಸೆ ನೀಡಿದರು. ಮಾತಿನ ಮಧ್ಯ ಅಧ್ಯಕ್ಷ ಗಂಗಾಂಜನೇಯ ‘‘ಎಲ್ರೂ ಊಟ ಮಾಡ್ಕೊಂಡು ಹೋಗೋಣ’’ ಎಂದು ಪ್ರಕಟಿಸಿದರು. ಆಗ ವೇಳೆ 12-40 ಆಗಿತ್ತು. ಸಭೆಯ ಬಳಿಕ ತಾ.ಪಂ.ನ ಹಿಂದಿನ ಕಾರ್ಯನಿರ್ವಹಣಾಧಿಕಾರಿ ಡಾ.ನಾಗಣ್ಣ ಅವರಿಗೆ ಸಭಾಗಣದಲ್ಲೇ ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸನ್ಮಾನಿಸಿದರು.

                          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap