ಬೆಂಗಳೂರು:
ವಿಶ್ವ ಹಿರಿಯ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಒಳಿತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರಾದ ಸಮಾಜ ಸೇವಕಿ ಡಾ. ವಿಜಯಲಕ್ಷ್ಮಿ ದೇಶಮಾನೆ, ಕಲಾವಿದ ಚಂದೋಡಿ ಬಂಗಾರೇಶ್ ಸೇರಿದಂತೆ 8 ಮಂದಿ ವ್ಯಕ್ತಿಗಳನ್ನು ಹಾಗೂ ಒಂದು ಸಂಸ್ಥೆಯನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಕಲಬುರಗಿಯ ಡಾ. ಪಿ.ಎಸ್. ಶಂಕರ್, ಸಮಾಜ ಸೇವೆ ಕ್ಷೇತ್ರದಲ್ಲಿ ಡಾ. ವಿಜಯಲಕ್ಷ್ಮಿ ದೇಶಮಾನೆ, ಮಹದೇವಿ ಹುಲ್ಲೂರ್, ಜಗದಾಂಬೆ, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಡಾ. ಬಿ.ವಿ. ಕೆರೆ ಮಾರ್ತಾಂಡೆ, ಕಲಾಕ್ಷೇತ್ರದಲ್ಲಿ ದಾವಣಗೆರೆ ಜಿಲ್ಲೆಯ ಚಂದೋಡಿ ಬಂಗಾರೇಶ್, ಕ್ರೀಡಾ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಡಿ.ಎಸ್. ಸಂಪತ್, ಕಾನೂನು ಕ್ಷೇತ್ರದಲ್ಲಿ ಬಾಗಲಕೋಟೆ ಜಿಲ್ಲೆಯ ಸದಾಶಿವ ಸಿದ್ಧಪ್ಪ ಬೆಳಗಲಿ ಪ್ರಶಸ್ತಿಗೆ ಪಾತ್ರವಾಗಿದ್ದರೆ, ಸಾಂಸ್ಥಿಕ ಪ್ರಶಸ್ತಿಗೆ ಮಂಗಳೂರಿನ ಯನಪೋಯ ಮೆಡಿಕಲ್ ಕಾಲೇಜು ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿ ತಲಾ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದು ಅಕ್ಟೋಬರ್ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10-30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕತಿ ಸಚಿವೆ ಜಯಮಾಲ ತಿಳಿಸಿದ್ದಾರೆ.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯದ ಎರಡು ಸಂಸ್ಥೆಗಳು ಹಾಗೂ ಇಬ್ಬರು ಗಣ್ಯರು ಕೇಂದ್ರದ ಹಿರಿಯ ನಾಗರಿಕರ ರಾಷ್ಟ್ರಪ್ರಶಸ್ತಿಗೆ ಬಾಜನರಾಗಿದ್ದು, ಇದಕ್ಕೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವೆ ಜಯಮಾಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಪ್ರಶಸ್ತಿಗೆ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಖಾಸಗಿ ಸಂಸ್ಥೆ ಬ್ಯಾಪ್ಟಿಸ್ಟ್ ಆಸ್ಪತ್ರೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಾದರಿ ತಾಯಿ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಮುನಿಯಮ್ಮ ಹಾಗೂ ಸೃಜನಶೀಲ ಕಲೆಗೆ ಬಳ್ಳಾರಿ ಜಿಲ್ಲೆಯ ಬೆಳಗಲ್ಲು ವೀರಣ್ಣ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿವೆ ಜಯಮಾಲ ಅವರು ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿಗಳು ಕರ್ನಾಟಕಕ್ಕೆ ಲಭಿಸಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
