ಕಾಡುಗೊಲ್ಲ ಅಭಿವೃದ್ಧಿ ನಿಗಮ ತಪ್ಪಿಸಿದ್ದು ಹಿರಿಯೂರು ಶಾಸಕರು : ಆರೋಪ

ಶಿರಾ

    ಇಡೀ ರಾಜ್ಯದಲ್ಲಿ ಶೇ.80 ರಷ್ಟು ಕಾಡು ಗೊಲ್ಲರಿದ್ದು, ಕೇವಲ ಶೇ.20 ರಷ್ಟು ಗೊಲ್ಲ ಸಮುದಾಯವಿದೆ. ಈ ಹಿಂದೆ ಕಾಡುಗೊಲ್ಲರ ಹೆಸರಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದ ಹೆಸರನ್ನು ಬದಲಾಯಿಸಿ ಗೊಲ್ಲ ಅಭಿವೃದ್ಧಿ ನಿಗಮ ಎಂದು ರಾಜ್ಯ ಸರ್ಕಾರ ಆದೇಶ ಮಾಡಲು ನೇರವಾದ ಕಾರಣವೇ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಎಂದು ಕಾಡು ಗೊಲ್ಲ ಸಮುದಾಯದ ಮುಖಂಡ ಹಾಗೂ ಜಿಲ್ಲಾ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸತೀಶ್ ಸಾಸಲು ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶಿರಾ ತಾಲ್ಲೂಕಿನ ಕಾಡು ಗೊಲ್ಲ ಸಮುದಾಯದ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಡುಗೊಲ್ಲ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಈ ಹಿಂದಿನ ಸರ್ಕಾರಕ್ಕೆ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದರು. ಆ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿತ್ತು. ಆದರೆ ಹಿರಿಯೂರು ಶಾಸಕರು ಕಾಡುಗೊಲ್ಲ ಎಂಬ ಹೆಸರನ್ನು ತೆಗೆಸಿ ಕೇವಲ ಗೊಲ್ಲ ಅಭಿವೃದ್ಧಿ ನಿಗಮ ಎಂಬ ಹೆಸರನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿ ಸಫಲರೂ ಆದ ಪರಿಣಾಮ, ಕಳೆದ ಎರಡು ದಿನಗಳಿಂದ ರಾಜ್ಯದ ಕಾಡುಗೊಲ್ಲ ಸಮುದಾಯ ರಾಜ್ಯ ಸರ್ಕಾರದÀ ವಿರುದ್ಧ ತಿರುಗಿ ಬೀಳುವಂತಾಗಿದೆ ಎಂದರು.

    ನಾನು ಈ ಸುದ್ದಿಗೋಷ್ಠಿಗೆ ಒಂದು ಪಕ್ಷದ ಮುಖಂಡನಾಗಿ ಬಂದಿಲ್ಲ. ಒಂದು ಸಮುದಾಯದ ಮುಖಂಡನಾಗಿ ನಮಗಾಗಿರುವ ಅನ್ಯಾಯದ ವಿರುದ್ಧ ಸರ್ಕಾರವನ್ನು ನ್ಯಾಯ ಕೇಳಲು ಬಂದಿದ್ದೇನೆ. ಕಾಡುಗೊಲ್ಲ ಸಮುದಾಯವು ಅತ್ಯಂತ ಕಡು ಬಡತನದ ಸಮುದಾಯವಾಗಿದ್ದು, ಇಲ್ಲಿ ಅಲೆಮಾರಿಗಳು, ಅರೆ ಅರೆಮಾರಿಗಳೂ ಇದ್ದಾರೆ. ಈ ಸಮುದಾಯವನ್ನು ಪ.ಪಂಗಡಕ್ಕೆ ಸೇರ್ಪಡೆಗೊಳಿಸಿ ಎಂಬ ವ್ಯಾಪಕ ಒತ್ತಡವನ್ನು ಸರ್ಕಾರಗಳಿಗೆ ಹಾಕುತ್ತಲೆ ಬಂದಿದ್ದೇವೆ. ಆದರೆ ಈತನಕ ನಮ್ಮಗಳ ಈ ಬೇಡಿಕೆ ಈಡೇರಿಯೇ ಇಲ್ಲ ಎಂದರು.
ಹಿರಿಯೂರು ಶಾಸಕರು ತಮ್ಮ ಸರ್ಕಾರವನ್ನು ಗೊಲ್ಲ ಅಭಿವೃದ್ಧಿ ಮಂಡಳಿಗಾಗಿ ಮನವಿ ಸಲ್ಲಿಸಲಿ.

    ಅದು ಒಂದು ಪ್ರತ್ಯೇಕ ನಿಗಮವಾಗಿ ಅಸ್ತಿತ್ವಕ್ಕೆ ತಂದರೆ ನಮ್ಮ ಅಭ್ಯಂತರವಿಲ.್ಲ ಆದರೆ ನೆಲೆಯನ್ನೇ ಕಾಣದ ಕಾಡುಗೊಲ್ಲ ಸಮುದಾಯದ ಅನ್ನವನ್ನು ಕಿತ್ತುಕೊಂಡು ಬದುಕುವಂತಹ ಕೆಲಸವನ್ನು ಹಿರಿಯೂರು ಶಾಸಕರು ಮಾಡಿರುವುದನ್ನು ಕಾಡುಗೊಲ್ಲ ಸಮುದಾಯ ಎಂದೂ ಕ್ಷಮಿಸುವುದಿಲ್ಲ. ನಿಮಗೆ ಕಾಡುಗೊಲ್ಲರ ಬಗ್ಗೆ ವಿಶ್ವಾಸವಿದ್ದರೆ ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದ್ದು ಕಾಡುಗೊಲ್ಲರನ್ನು ಪ.ಪಂಗಡಕ್ಕೆ ಸೇರ್ಪಡೆ ಮಾಡಿಸಲು ಒತ್ತಡ ತನ್ನಿ ಎಂದು ಸತೀಶ್ ಸಾಸಲು ಹೇಳಿದರು. ಕಾಡುಗೊಲ್ಲ ಮುಖಂಡರ ಒತ್ತಡಗಳು ಹೆಚ್ಚಾದ ಕೂಡಲೇ ರಾಜ್ಯ ಸರ್ಕಾರ ಮತ್ತೊಂದು ಆದೇಶವನ್ನು ಹೊರಡಿಸಿ ಒಂದೇ ದಿನದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಆದೇಶ ಹೊರಡಿಸಿದೆ ಎಂಬ ಮಾಹಿತಿ ಇದೀಗ ತಾನೆ ನಮಗೆ ಬಂದಿದ್ದು ಸರ್ಕಾರದ ಈ ಆದೇಶಕ್ಕೆ ನಾವು ಕೃತಜ್ಷತೆ ಸಲ್ಲಿಸುತ್ತೇವೆ ಎಂದರು.

     ರಾಜ್ಯ ಕಾಡುಗೊಲ್ಲ ಹಿತ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಹಾರೋಗೆರೆ ಮಹೇಶ್ ಮಾತನಾಡಿ, ಕಾಡುಗೊಲ್ಲ ಸಮುದಾಯದ ಸಮಸ್ಯೆಗಳನ್ನು ಕುರಿತಂತೆ ಸರ್ಕಾರಗಳಿಗೆ ಎಲ್ಲಾ ಪಕ್ಷದ ಮುಖಂಡರು ಕೂಡ ಒಗ್ಗೂಡಿ ಮನವಿ ಸಲ್ಲಿಸಿದ್ದೇವೆ. ಬಹು ಸಂಖ್ಯೆಯಲ್ಲಿರುವ ನಮ್ಮ ಸಮುದಾಯದ ಹೆಸರಲ್ಲಿ ನಿಗಮ ಮಂಡಳಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದ ಮುಖಂಡರ ಶ್ರಮವೂ ಇದೆ. ಸಮುದಾಯದ ಸಮಸ್ಯೆಗಳಿದ್ದಲ್ಲಿ ನಾವು ಪಕ್ಷಾತೀತ ಹೋರಾಟಕ್ಕೂ ಸಿದ್ದರಿದ್ದೇವೆ ಎಂದರು.

    ರಾಜ್ಯ ಕಾಡುಗೊಲ್ಲರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಗೌ.ಅಧ್ಯಕ್ಷ ಕೂನಿಕೆರೆ ರಾಮಣ್ಣ, ಸಂಚಾಲಕ ರಾಜಣ್ಣ, ಮಾಗಡಿ ಜಯರಾಂ, ಹಿರಿಯೂರು ಜಿ.ಪಂ. ಸದಸ್ಯ ಪಾಪಣ್ಣ, ಗೋಪಿ ಯಾದವ್, ಕೊಟ್ಟ ಅಶೋಕ್, ತಾ.ಪಂ. ಮಾಜಿ ಸದಸ್ಯ ಸುದರ್ಶನ್, ಹನುಮಂತರಾಯಪ್ಪ, ಗೌಡಗೆರೆ ಚಂದ್ರು ಸೇರಿದಂತೆ ಕಾಡುಗೊಲ್ಲ ಸಮುದಾಯದ ಅನೇಕ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link