ಬೆಂಗಳೂರು
ಪಿಸ್ತೂಲ್ ಹಾಗು ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಚಿತ್ರನಟ ಜಗದೀಶ್ ಹೊಸ್ಮಠ ಅಲಿಯಾಸ್ ಜಾಗ್ವರ್ ಜಗ್ಗ ಸೇರಿ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿ 1 ಪಿಸ್ತೂಲ್ ಹಾಗೂ 11 ಜೀವಂತ ಗುಂಡುಗಳನ್ನು ವಶಪಡಿಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಜಗದೀಶ್ ಹೊಸ್ಮಠ ಅಲಿಯಾಸ್ ಜಾಗ್ವರ್ ಜಗ್ಗ(31) ಹೆಚ್.ಎ.ಎಲ್‍ನ ಇಸ್ಲಾಂಪುರದ ಮೊಹಮ್ಮದ್ ನಿಜಾಮ್(25), ನ್ಯೂತಿಪ್ಪಸಂದ್ರದ ಜಿ.ಎಂ ಪಾಳ್ಯದ ಜಿ ಸತೀಶ್ ಕುಮಾರ್(44)ಹಾಗೂ ಕೊತ್ತನೂರಿನ ಕೆ.ನಾರಾಯಣಪುರದ ಸೈಯದ್ ಸಮೀರ್ ಆಹಮದ್(32)ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಜಗದೀಶ್ ಹೊಸ್ಮಠ ಕನ್ನಡ ಚಲನಚಿತ್ರ ನಟನಾಗಿದ್ದು, ಸರ್ಕಾರ್ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿರುವುದಲ್ಲದೇ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಹೆಚ್‍ಎಎಲ್‍ನ ಜಗದೀಶ್ ನಗರದ ಬೆಮಲ್ ಬಳಿ ಅಕ್ರಮವಾಗಿ ಪಿಸ್ತೂಲು ಇಟ್ಟುಕೊಂಡಿದ್ದ ಮೊಹಮ್ಮದ್ ನಿಜಾಮ್ ಮತ್ತು ಜಗದೀಶ್ ಹೊಸ್ಮಠನನ್ನು ಬಂಧಿಸಿ ವಿಚಾರಣೆ ನಡೆಸಿ ಮಾಹಿತಿ ಪಡೆದು ಮತ್ತಿಬ್ಬರನ್ನು ಬಂಧಿಸಲಾಯಿತು.ಬಂಧಿತರಿಂದ ಒಂದು ಪಿಸ್ತೂಲ್ ಮತ್ತು 10 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆಆರೋಪಿಗಳಲ್ಲಿ ಸೈಯದ್ ಸುಮಾರು 1 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಸಾಲ ನೀಡಿದ್ದ ವ್ಯಕ್ತಿ ಹಣ ಕೊಡುವಂತೆ ಪದೇ ಪದೇ ಕೇಳುತ್ತಿದ್ದು ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು ಇದರಿಂದ ಹೆದರಿದ ಸೈಯದ್ ಬಿಹಾರದಿಂದ 3 ಲಕ್ಷಕ್ಕೆ ಪಿಸ್ತೂಲ್ ತರಿಸಿಕೊಂಡು ಚಿತ್ರ ನಟ ಜಗದೀಶ್ ಹುಬ್ಬಳ್ಳಿಯಿಂದ ವಾಪಾಸ್ ಬರುವಾಗ ಈ ಪಿಸ್ತೂಲ್‍ನನ್ನು ಬೆಂಗಳೂರಿಗೆ ಕಾರ್‍ನಲ್ಲಿ ತಂದಿದ್ದಾರೆ.ಪ್ರಕರಣದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನವಿದ್ದು ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಗಿರೀಶ್ ತಿಳಿಸಿದ್ದಾರೆ.