ಬರ ಪೀಡಿತ ಎಂದು ಘೋಷಣೆಯಾದರು ಸಿಗದ ಪರಿಹಾರ

ಹೊನ್ನಾಳಿ:

         ಬರಪೀಡಿತ ತಾಲೂಕು ಎಂದು ಹೊನ್ನಾಳಿ ತಾಲೂಕನ್ನು ಘೋಷಣೆ ಮಾಡಿದ್ದರೂ ಈವರೆಗೂ ಬರ ಪರಿಹಾರ ಕಾಮಗಾರಿಗಳಾಗಲಿ, ಯಾವುದೇ ರೀತಿಯ ನೆರವಿನ ಹಸ್ತವಾಗಲೀ ತಾಲೂಕಿನ ಯಾವುದೇ ರೈತರಿಗೆ ದೊರೆತಿಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಬೇಸರ ವ್ಯಕ್ತಪಡಿಸಿದರು.

        ಇಲ್ಲಿನ ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬರ ಪರಿಹಾರದ ಕಾಮಗಾರಿಗಳಿಗೆ ಸರಕಾರ ಬಿಡುಗಡೆಗೊಳಿಸಲಿರುವ ಹಣವನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತವು ರೈತ ಪರವಾದ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.

           ಬೆಳೆ ಹಾನಿಯಿಂದ ಕಂಗಾಲಾಗಿರುವ ಜನತೆಗೆ ರಾಜ್ಯ ಸರಕಾರ ಬರ ಪರಿಹಾರ ಕಾಮಗಾರಿಗಳ ಮೂಲಕ ನೆರವು ನೀಡಬೇಕು. ಹೊನ್ನಾಳಿ ಕಸಬಾ ಹಾಗೂ ಬೆಳಗುತ್ತಿ ಹೋಬಳಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಹಲವಾರು ಬಾರಿ ರೈತ ಸಂಘಗಳು ಮನವಿ, ಪ್ರತಿಭಟನೆ, ಹೋರಾಟಗಳನ್ನು ನಡೆಸಿದ್ದರೂ ಕೆರೆಗಳನ್ನು ತುಂಬಿಸುವ ಕಾರ್ಯ ಇಂದಿಗೂ ನೆನೆಗುದಿಗೆ ಬಿದ್ದಿದೆ. ಕೆರೆಗಳಿಗೆ ನೀರು ತುಂಬಿಸುವಲ್ಲಿ ಸರಕಾರಗಳು ಇದೇ ರೀತಿ ನಿರ್ಲಕ್ಷ ವಹಿಸಿದರೆ ರೈತ ಸಂಘವು ವಿವಿಧ ಸಂಘ-ಸಂಸ್ಥೆಗಳೊಂದಿಗೆ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.

            ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಾಸನದ ಓಂಕಾರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ವೀರಪ್ಪ, ಕಾರ್ಯದರ್ಶಿ ನರಸಿಂಹಪ್ಪ, ರೈತ ಮುಖಂಡರಾದ ಹನುಮಗೌಡ, ಶಂಕರಪ್ಪ, ನಂದ್ಯಪ್ಪ, ಸಣ್ಣಚೌಡಪ್ಪ, ಫಕೀರಪ್ಪ, ಜೀವೇಂದ್ರ, ಸುರೇಶನಾಯ್ಕ, ಯಲ್ಲಪ್ಪ, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap