ಬೆಂಗಳೂರು
ಅದು ಯಾವುದಾದರೂ ಚುನಾವಣೆಯೇ ಇರಲಿ, ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಮಾಡುವ ತಂತ್ರಗಳು, ಪಕ್ಷದತ್ತ ಜನರನ್ನು ಸೆಳೆಯಲು ರೂಪಿಸುವ ಕಾರ್ಯಕ್ರಮಗಳು ಹಲವಾರು. ಅದು ಸಮಾಜಸೇವೆಯ ಹೆಸರಿನಲ್ಲಿಯೇ ಇರಬಹುದು, ಅಥವಾ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳೇ ಇರಬಹುದು. ಇಂತಹದ್ದೊಂದು ಚರ್ಚೆಗೆ ಗ್ರಾಸ ಒದಗಿಸಿದ್ದು ಬಿಜೆಪಿಯ ಮಾಜಿ ಶಾಸಕ ನಂದೀಶ ರೆಡ್ಡಿ.ಕೆ.ಆರ್.ಪುರಂ ಕ್ಷೇತ್ರದ ಮಾಜಿ ಶಾಸಕ ನಂದೀಶ ರೆಡ್ಡಿ ಅವರೀಗ ಜನರನ್ನು ಪಕ್ಷದತ್ತ ಆಕರ್ಷಿಸಲು ಸಿನಿಮಾದ ಮೊರೆ ಹೋಗಿದ್ದಾರೆ.
ಹೌದು, ಕೆ.ಆರ್.ಪುರಂ ಕ್ಷೇತ್ರದ ಚಿತ್ರಪ್ರೇಮಿಗಳಿಗೆ ಇವರು ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಉಚಿತ ವಿಕ್ಷಣೆ ಆಯೋಜಿಸಿದ್ದಾರೆ. ಫೆ.5 ರ ಮಂಗಳವಾರದಿಂದ ಒಂದುವಾರಗಳ ಕಾಲ ಮಾರತ್ತಹಳ್ಳಿ ವರ್ತುಲ ರಸ್ತೆಯ ದೊಡ್ಡನೆಕ್ಕುಂದಿ ‘ಅರೆನಾ ಮಾಲ್’ ನಲ್ಲಿ ಚಿತ್ರರಸಿಕರಿಗಾಗಿ ಉಚಿತ ಬೆಳಗಿನ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.
”ನಾನು ನಿಮ್ಮ ನಂದೀಶ ರೆಡ್ಡಿ.. ‘ಉರಿ? ದ ಸರ್ಜಿಜ್ ಸ್ಟ್ರೈಕ್’ ಕೆ ಆರ್ ಪುರ ಕ್ಷೇತ್ರದ ಪ್ರೇಕ್ಷಕರಿಗೆ ಫ್ರೀ ಶೋ ಆಯೋಜಿಸಿಲಾಗಿದೆ. ರಾಷ್ಟ್ರೀಯತೆ ಮತ್ತು ದೇಶ ಪ್ರೇಮ ಸಾರುವ ಉರಿ ? ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಸಾರ್ವಜನಿಕರು ಉಚಿತವಾಗಿ ನೋಡಲು ನಮ್ಮ ಕ್ಷೇತ್ರದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.”ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡಿದ್ದಾರೆ.
‘ಉರಿ’ ಸರ್ಜಿಕಲ್ ಸ್ಟ್ರೈಕ್ ಕಥಾಹಂದರವುಳ್ಳ ಚಿತ್ರ. ಸೆ.18, 2016 ರಂದು ಜಮ್ಮು-ಕಾಶ್ಮೀರದ ಸಮೀಪ ‘ಉರಿ’ ಭಾರತೀಯ ಸೇನಾ ಶಿಬಿರದ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ನಡೆದಿದ್ದು, ಸುಮಾರು 18 ಯೋಧರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಪಾಕ್ ಬೆಂಬಲಿತ ಉಗ್ರರ ಕ್ಯಾಂಪಿಗೆ ನುಗ್ಗಿ 38 ಭಯೋತ್ಪಾದಕರನ್ನು ಹಾಗೂ ಇಬ್ಬರು ಪಾಕ್ ಸೈನಿಕರನ್ನು ಭಾರತ ಯೋಧರು ಹತ್ಯೆಗೈದಿದ್ದರು.
ಉರಿ ಪ್ರದೇಶದಲ್ಲಿ ಭಾರತದ ಸೈನಿಕರನ್ನು ಹತ್ಯೆಗೈದ ಸೇಡನ್ನು ಭಾರತ ತೀರಿಸಿಕೊಂಡಿದೆ. ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಶಾಂತಿ ಭಂಗಕ್ಕೆ ಯತ್ನಿಸಿದರೆ ತಿರುಗೇಟು ನೀಡುವುದರಿಂದ ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದರು.
ಸರ್ಜಿಕಲ್ ಸ್ಟ್ರೈಕ್ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸರ್ಜಿಕಲ್ ಸ್ಟ್ರೈಕ್ ಮೋದಿಯ ಹೆಮ್ಮೆಗೆ ಕಿರೀಟ ಎಂದು ಬಿಜೆಪಿ ದೇಶಾದ್ಯಂತ ಪ್ರಚಾರ ಅಭಿಯಾನ ನಡೆಸಿತ್ತು.
ಚಿತ್ರವನ್ನು ಕೇಂದ್ರ ಸಚಿವ ಪಿಯೂಷ್ ಗೊಯಲ್ ಶುಕ್ರವಾರ ಬಜೆಟ್ ಮಂಡಿಸುವಾಗ ಅದ್ಭುತವಾದ ಸಿನಿಮಾ ಎಂದು ಕೊಂಡಾಡಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಬಿಜೆಪಿ ನಾಯಕರು ಚಿತ್ರಮಂದಿರದಲ್ಲಿ ಚಿತ್ರವೀಕ್ಷಣೆ ಮಾಡಿದ್ದರು.
ಒಂದು ಕಡೆ ದೇಶದ ರೈತರಂತೆ ಸೈನಿಕರನ್ನು ಕೇಂದ್ರದ ಬಿಜೆಪಿ ನಿರ್ಲಕ್ಷಿಸುತ್ತಿದೆ. ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ, ಸುಳ್ಳು ಸೃಷ್ಟಿ ಎಂದು ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳು ಟೀಕೆ ಮಾಡಿದ್ದವು.