ಶಿರಾ:
ರಾಜ್ಯದ 156 ತಾಲ್ಲೂಕುಗಳಲ್ಲಿ ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದು ಈವರೆಗೂ ಬರ ಪೀಡಿತ ಪ್ರದೇಶಗಳಿಗೆ ಒಂದು ನಯಾ ಪೈಸೆಯ ಅನುದಾನವನ್ನೂ ಬಿಡುಗಡೆ ಮಾಡದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದ್ದು ರೈತರ ಬದುಕನ್ನು ಸಂಕಷ್ಟದತ್ತ ತಳ್ಳಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಇಳಿಸಿದರು.
ಚಿತ್ರದುರ್ಗ ಮಾರ್ಗವಾಗಿ ಬರಗಾಲ ವೀಕ್ಷಣೆಗೆಂದು ಭಾನುವಾರ ಸಂಜೆ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮಕ್ಕೆ ಆಗಮಿಸಿದ ಅವರು ಡಾ.ಶಿವಣ್ಣ ಅವರ ಒಣಗಿದ ಅಡಿಕೆ ತೋಟ ಸೇರಿದಂತೆ ವಿವಿಧ ಜಮೀನುಗಳ ರೈತರ ಬೆಳೆಗಳ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳ ವೀಕ್ಷಣೆ ಮಾಡುವುದರ ಜೊತೆಗೆ ರಾಜ್ಯದ ಐದು ಜಿಲ್ಲೆಗಳ ಪ್ರವಾಸ ಮಾಡಿದ್ದು ಆ ಭಾಗದ ರೈತರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಚಿತ್ರದುರ್ಗದಲ್ಲಿ ತೆಂಗು, ಬಾಳೆ, ಅಡಿಕೆ, ದಾಳಿಂಬೆ ಬೆಳೆಗಳು ಅಂತರ್ಜಲವಿಲ್ಲದೆ ಬತ್ತಿ ಹೋಗಿವೆ ಎಂದರು.
ನರೇಗಾ ಯೋಜನೆಯಡಿಯಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಿದ್ದನ್ನು ಮಾತ್ರಾ ಖರ್ಜು ಮಾಡುತ್ತಿರುವ ಈ ಸರ್ಕಾರ ಬಜೆಟ್‍ನಲ್ಲಿ ಮೀಸಲಿಟ್ಟ 2 ಲಕ್ಷ 20 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡದೆ ಕೂತಿದೆ. ಭದ್ರ ಮೇಲ್ದಂಡೆ, ರೈಲ್ವೆ ಯೋಜನೆಯ ಕಾಮಗಾರಿಗಳೆಲ್ಲವೂ ಸ್ಥಗಿತಗೊಂಡಿದ್ದು ಈ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದರು.
156 ತಾಲ್ಲೂಕುಗಳಲ್ಲಿ ತೀವ್ರವಾದ ಬರಗಾಲವಿರುವುದರ ಅರಿವಿದ್ದರೂ ಪ್ರಸ್ತುತ ಸರ್ಕಾರದ ಸಚಿವರುಗಳು ತಮ್ಮದೇ ಕ್ಷೇತ್ರಗಳ ಬಗ್ಗೆ ಕಿಂಚಿತ್ತೂ ಗಮನಹರಿಸದಂತಾಗಿದ್ದಾರೆ. ಸದ್ಯಕ್ಕೆ ಈ ಸರ್ಕಾರ ರೈತರ ಕಷ್ಟಕ್ಕೆ ಸ್ಪಂಧಿಸುವಂತೆ ಕಾಣುತ್ತಿಲ್ಲ. ಬರುವ ಅಧಿವೇಶನದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಸುವುದು ಖಚಿತ. ಬರ ಪೀಡಿತ ಪ್ರದೇಶಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದೆಲ್ಲಡೆ ನಮ್ಮ ಪಕ್ಷದ ಶಾಸಕರು, ಪಕ್ಷದ ವರಿಷ್ಠರು ಬರಗಾಲ ಪೀಡಿತ ತಾಲ್ಲೂಕುಗಳ ವೀಕ್ಷಣೆಯನ್ನು ಮಾಡುತ್ತಿದ್ದು ಈ ವೀಕ್ಷಣೆಯು ಮುಗಿದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಮಗ್ರವಾದ ವರದಿಯನ್ನು ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಶಾಸಕರಾದ ಜ್ಯೋತಿ ಗಣೇಶ್, ಮಾಧುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಡಾ.ಹುಲಿನಾಯ್ಕರ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ನಗರ ಬಿ.ಜೆ.ಪಿ. ಅಧ್ಯಕ್ಷ ಬಿ.ಗೋವಿಂದಪ್ಪ, ಗ್ರಾ. ಅಧ್ಯಕ್ಷ ಮಾಲಿ ಮರಿಯಪ್ಪ, ತರೂರು ಬಸವರಾಜು, ರಂಗಸ್ವಾಮಿ, ಕೃಷ್ಣಮೂರ್ತಿ, ವಿಜಯರಾಜ್, ನೇರಲಗುಡ್ಡ ಶಿವಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು