ಮಾ.31ರಂದು ‘ನಾನೂ ಚೌಕಿದಾರ್’ ಸಂವಾದ

ದಾವಣಗೆರೆ:

      ಪ್ರಧಾನಿ ನರೇಂದ್ರ ಮೋದಿಯವರು ಮಾ.31ರಂದು ಸಂಜೆ 4 ಗಂಟೆಗೆ ದೇಶದ 500 ಸ್ಥಳಗಳಲ್ಲಿ ಏಕಕಾಲಕ್ಕೆ ‘ನಾನೂ ಚೌಕಿದಾರ್’ ವಿಡಿಯೋ ಸಂವಾದ ನಡೆಸಲಿದ್ದಾರೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ನಡೆಯಲಿರುವ ಸಂವಾದದ ವೀಕ್ಷಣೆಗೆ ನಗರದ ಪಿಬಿ ರಸ್ತೆಯ ಹಳೇ ವಾಣಿಹೊಂಡ ಶೋ ರೂಂ ಆವರಣಲದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಸಂವಾದ ವೀಕ್ಷಣೆಯಲ್ಲಿ ಭಾಗವಹಿಸುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂವಾದದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

      ಬಿಜೆಪಿ ಮುಖಂಡರು, ವೈದ್ಯರು, ವಕೀಲರು, ಅಕೌಂಟೆಂಟ್‍ಗಳು, ಐಟಿ ವೃತ್ತಿಪರರು ಹೊಸ ಮತದಾರರು, ರೈತರು, ಮಾಜಿ ಸೈನಿಕರು, ವ್ಯಾಪಾರಿಗಳು ಹಾಗೂ ಉದ್ಯಮಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಲಿದ್ದಾರೆಂದು ಹೇಳಿದರು.

       ಮಾ.16ರಂದು ನಾನೂ ಚೌಕಿದಾರ್ ಕಾರ್ಯಾಚರಣೆಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು ‘ಬಡತನ, ಭ್ರಷ್ಟಾಚಾರ, ಕೊಳಕು, ಭಯೋತ್ಪಾದನೆ ಮತ್ತು ಇತರೆ ಸಾಮಾಜಿಕ ದುಷ್ಕೃತ್ಯಗಳನ್ನು ಎದುರಿಸುವ ಪ್ರತಿಯೊಬ್ಬರೂ ಚೌಕಿದಾರರೇ ಯಾಗಿದ್ದಾರೆಂದು ಮರು ವ್ಯಾಖ್ಯಾನಿಸಿದ್ದು, ಈ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿಸಿದೆ. ಸುಮಾರು 30 ಲಕ್ಷ ಜನರು ನಾನೂ ಚೌಕಿದಾರ್ ಎಂಬುದಾಗಿ ಹ್ಯಾಶ್ ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ 16.80 ಕೋಟಿ ಭಾರತೀಯರು ಅನಿಸಿಕೆ ವ್ಯಕ್ತಪಡಿಸಿದ್ದು, ಇದೊಂದು ದೊಡ್ಡ ಚಳವಳಿಯ ರೂಪದಲ್ಲಿ ಬೆಳೆಯುತ್ತಿದೆ ಎಂದರು.

       ಈ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪರ ಮತಯಾಚಿಸಲಿದ್ದಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಎನ್. ರಾಜಶೇಖರ್ , ಖಜಾಂಚಿ ಕೆ.ಹೇಮಂತಕುಮಾರ್, ದಕ್ಷಿಣ ಮಂಡಲದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link