ತುರುವೇಕೆರೆ
ತಾಲ್ಲೂಕಿನ ಮಾಯಸಂದ್ರದ ಗ್ರಾಮ ಪಂಚಾಯ್ತಿಯಲ್ಲಿ ಎಸಿಬಿ ಡಿವೈಎಸ್ಪಿ ವಿ.ರಘು ಕುಮಾರ್ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ದಬ್ಬೇಘಟ್ಟ ಪಂಚಾಯಿತಿ ಉಪಾಧ್ಯಕ್ಷ ಬೋರೇಗೌಡ ಮಾತನಾಡಿ, ರೈತರ ಖಾತೆ ತಿದ್ದುಪಡಿ ಮಾಡಲು 5 ರಿಂದ 8 ಸಾವಿರ ರೂಪಾಯಿಗಳವರೆಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯಾಧಿಕಾರಿಗಳಿಗೆ ನೀಡಬೇಕು. ಅಲ್ಲದೆ ಇದೇ ಹೋಬಳಿಯ ಗಂಗಮ್ಮ ಮತ್ತು ಮಂಜುಳ ಸೇರಿದಂತೆ ಇನ್ನೂ ಅನೇಕ ಅರ್ಹ ಫಲಾನುಭವಿ ವೃದ್ಧರು ಮಾಸಾಶನ ಮತ್ತು ಸಂಧ್ಯಾ ಸುರಕ್ಷತಾ ಯೋಜನೆಗೆ ಅರ್ಜಿ ಹಾಕಿದ್ದರೂ ಅಧಿಕಾರಿಗಳು ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆರ್.ಐ. ರಂಗಸ್ವಾಮಿಯನ್ನು ಕರೆಯಿಸಿ ಸರಿಯಾಗಿ ತಮ್ಮ ಕೆಲಸ ಮಾಡಿ ಇಲ್ಲವಾದರೆ ಕೆಲಸದಿಂದ ವಜಾಗೊಳಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು. ಅರ್ಹರಿಗೆ ಸರ್ಕಾರದ ಸವಲತ್ತು ಸಿಗುವಂತೆ ಮಾಡಿ. ನಿಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಎಚ್ಚರವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.
ಸೊಂಡೆಮಾರ್ಗೋನಹಳ್ಳಿಯ ಗೋವಿಂದರಾಜು ಮತ್ತು ತಿಮ್ಮಯ್ಯನವರ ಭೂ ಗಲಾಟೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ತಂದೆ, ತಾಯಿ ಮತ್ತು ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ ಎಂದು ಸ್ಥಳದಲ್ಲಿದ್ದ ಪಿಎಸ್‍ಐ ರಾಜು ಅವರಿಗೆ ರಘುಕುಮಾರ್ ಸೂಚಿಸಿದರು.
ಅಂಬೇಡ್ಕರ್ ಆವಾಜ್ ಯೋಜನೆಯಡಿ ಮನೆ ಮಂಜೂರಾದರೂ ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ ಎಂಬ ನೇತ್ರಾವತಿ ದೂರಿಗೆ ಸ್ಪಂದಿಸಿದ ರಘುಕುಮಾರ್ ಮಾಯಸಂದ್ರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ಪೊಲೀಸ್ ಇಲಾಖೆಗೆ 2, ನಾಡಕಚೇರಿಗೆ 4 ಮತ್ತು ಮಣೆಚೆಂಡೂರು ಪಂಚಾಯಿತಿಗೆ ಸಂಬಂಧಿಸಿದಂತೆ ಒಂದು. ಒಟ್ಟು 7 ಅರ್ಜಿಗಳು ಬಂದಿದ್ದವು.
ಈ ಸಂದರ್ಭದಲ್ಲಿ ರೈತ ಸಂಘದ ಕಣಕೂರುಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಜವರೇಗೌಡ, ಕಾರ್ಯದರ್ಶಿ ಸುರೇಶ್, ದಬ್ಬೇಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋರೇಗೌಡ, ಪಿಎಸ್‍ಐ.ರಾಜು, ಮಾಯಸಂದ್ರ ಹೋಬಳಿ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ