ದಾವಣಗೆರೆ:
ಬಾಕಿ ಇರುವ 8 ತಿಂಗಳ ಶಿಷ್ಯ ವೇತನಕ್ಕಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯ ಕಿರಿಯ ವೈದ್ಯರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಭಾನುವಾರ 7ನೇ ದಿನಕ್ಕೆ ಕಾಲಿರಿಸಿದ್ದು, ಧರಣಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ನಡೆಸಿ, ಬಳಿಕ ರಕ್ತ ದಾನ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಿಂದ ಬೈಕ್ ರ್ಯಾಲಿಯ ಮೂಲಕ ಚಾಮರಾಜ್ ಪೇಟೆ ವೃತ್ತದ ಬಳಿಯಲ್ಲಿರುವ ಹೆರಿಗೆ ಆಸ್ಪತ್ರೆಗೆ ತೆರಳಿದ ಸರ್ಕಾರಿ ಆಸ್ಪತ್ರೆಗಳ ಗೃಹ ವೈದ್ಯರು ಹಾಗೂ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು, ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಕೆಲ ಹೊತ್ತು ಶ್ರಮಧಾನ ನಡೆಸಿ, ಬಳಿಕ ರಕ್ತ ದಾನ ಮಾಡುವ ಮೂಲಕ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ವೈದ್ಯ ಸಂಘದ ಡಾ.ಅಭಿಲಾಶ್, ನಾವು ಶಿಷ್ಯ ವೇತನವನ್ನೇ ನೆಚ್ಚಿಕೊಂಡು ಕೆಸಿಇಟಿ ಪರೀಕ್ಷೆ ಬರೆದು ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಕಳೆದ 8 ತಿಂಗಳಿಂದ ಶಿಷ್ಯ ವೇತನ ನಿಲ್ಲಸಿರುವುದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲದೆ, ಕೆಲವರು ವೈದ್ಯಕೀಯ ಶಿಕ್ಷಣ ಮುಂದುವರೆಸುವುದು ಸಹ ಕಷ್ಟವಾಗಿದೆ ಎಂದು ಅಲವತ್ತುಕೊಂಡರು.
ಸುಮಾರು 235 ಜನ ಗೃಹ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಶಿಷ್ಯ ವೇತನದಿಂದ ವಂಚಿತರಾಗಿದ್ದೇವೆ. ಶಿಷ್ಯ ವೇತನಕ್ಕಾಗಿ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಲವು ಹೋರಾಟ ನಡೆಸಲಾಗಿದೆ. ಆದರೂ, ಸಹ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಆದರಿಂದ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದೇವೆ.
ನಮ್ಮ ಧರಣಿಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಸಹ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಪರದಾಡುತ್ತಿದ್ದಾರೆ. ಇಲ್ಲಿ ರೋಗಿಗಳಿಗೆ ತೊಂದರೆ ಮಾಡುವುದು ನಮ್ಮ ಉದ್ದೇಶವಲ್ಲ. ನಮ್ಮ ಶಿಷ್ಯ ವೇತನ ನಮಗೆ ಸಿಕ್ಕರೆ, ನಾವು ವ್ಯಾಸಂಗ ಮುಂದುವರೆಸಿ, ರೋಗಿಗಳ ಸೇವೆ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಹೋರಾಟದ ಹಾದಿ ಹಿಡಿದಿದ್ದೇವೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ವೈದ್ಯರಿಗೆ ನೀಡುವ ಮಾಸಿಕ ವೇತನ 20 ಸಾವಿರ ರು., ಮೊದಲನೇ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ 30 ಸಾವಿರ ರು., 2ನೇ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ 35 ಹಾಗೂ 3ನೇ ವರ್ಷದ ವಿದ್ಯಾರ್ಥಿಗಳಿಗೆ 40 ಸಾವಿರ ರು. ನೀಡುವ ಶಿಷ್ಯವೇತನವನ್ನು ಕಳೆದ 8 ತಿಂಗಳಿಂದ ನೀಡಿಲ್ಲ. ಹೀಗಾದರೆ, ಶಿಷ್ಯ ವೇತನವನ್ನೇ ನೆಚ್ಚಿ ಸರ್ಕಾರಿ ಸೀಟು ಪಡೆದಿರುವ ನಾವು ಹೇಗೆ ಶಿಕ್ಷಣ ಮುಂದುವರೆಸಬೇಕು. ತಕ್ಷಣವೇ ನಮ್ಮ ಸಮಸ್ಯೆಯನ್ನು ಅರಿತು ಸರ್ಕಾರ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆ ಮಾಡಿ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ಚಂದನ್, ಡಾ. ಮನು, ಡಾ. ಚೈತನ್ಯ, ಡಾ. ಮನೀಷ್ ಸೇರಿದಂತೆ ಗೃಹವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
![](https://prajapragathi.com/wp-content/uploads/2018/10/doctors-protest-1.gif)