ಬೆಂಗಳೂರು
ಹಾಡಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನನ್ನು ಆಶೋಕನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಚೆನ್ನೈ ಮೂಲದ ಆರ್ಮುಗಂ(38)ಎಂದು ಗುರುತಿಸಲಾಗಿದೆ.ಈ ಘಟನೆ ಅಕ್ಟೋಬರ್ 26ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ಥ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಶೋಕ್‍ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಲ್ಸನ್‍ಗಾರ್ಡನ್ ನಿವಾಸಿ 20 ವರ್ಷದ ಯುವತಿ ಬ್ರಿಗೇಡ್ ರಸ್ತೆಯಲ್ಲಿರುವ ಶೋರೂಂವೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 26ರಂದು ಯುವತಿ ಊಟ ಮಾಡಲು ಮೆಗ್ರತ್ ರಸ್ತೆ ಮಾರ್ಗವಾಗಿ ಹೋಟೆಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಆರ್ಮುಗಂ ಎದುರಿಗೆ ಬಂದಿದ್ದಾನೆ. ಈ ವೇಳೆ ಆರೋಪಿ ಆರ್ಮುಗಂ ಯುವತಿಯ ಬಳಿ ಹೋಗಿ ಆಕೆಯ ಮೈ ಮುಟ್ಟಲು ಯತ್ನಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ ಕಾಮುಕನಿಂದ ಬಿಡಿಸಿಕೊಂಡು ಅದೇ ರಸ್ತೆಯಲ್ಲಿದ್ದ ಸಂಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಯುವತಿ ಪೊಲೀಸರ ಬಳಿ ಹೋಗುವುದನ್ನು ಆರೋಪಿ ಆರ್ಮುಗಂ ನೋಡಿದ್ದು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕೂಡಲೇ ಸಂಚಾರ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದ್ದಾರೆ. ಬಳಿಕ ಅಶೋಕ ನಗರ ಅಪರಾಧ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ