ಕಣ್ಣು ದಾನ ಮಾಡುವ ವಿಚಾರದಲ್ಲೂ ಮೌಢ್ಯ

ಚಿತ್ರದುರ್ಗ

       ಕಣ್ಣುಗಳನ್ನು ದಾನ ಮಾಡುವ ವಿಚಾರದಲ್ಲಿಯೂ ಮೂಢನಂಬಿಕೆ ಕಂದಾಚಾರಗಳನ್ನು ಅನುಸರಿಸಲಾಗುತ್ತಿದೆ. ಇವುಗಳ ಬಗ್ಗೆ ಜಗೃತಿ ಮೂಡಿಸಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

       ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ಬಸವೇಶ್ವರ ಐ ಬ್ಯಾಂಕ್, ಟಾರ್ಗೇಟ್ ಟೆನ್ ಥೌಸೆಂಡ್ ವೇದಿಕೆ ಆಶ್ರಯದಲ್ಲಿ ನೇತ್ರದಾನ ಶಿಬಿರ ಹಾಗೂ ನೇತ್ರದಾನದ ಮಹತ್ವ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

       ಮಾನವನ ಶರೀರವನ್ನು ಇಂದ್ರೀಯಗಳು ನಿಯಂತ್ರಿಸುತ್ತವೆ. ಶರೀರಕ್ಕೆ ನೋವಾಗಲಿ ಅದು ತಿಳಿಯಪಡಿಸಲಿದೆ.ಕಾನೂನು ಮನುಷ್ಯನ ರಕ್ಷಣೆಗೆ ಇದ್ದರೂ ಅದಕ್ಕಿಂತ ಮೊದಲು ರಕ್ಷಣೆ ಮಾಡುವ ಜವಾಬ್ದಾರಿ ಕಣ್ಣುಗಳ ಮೇಲಿದೆ. ಏನೇ ಆಗಲಿ ಮೊದಲು ಕಣ್ಣಿಗೆ ಅದು ಗೊತ್ತಾಗಲಿದೆ. ಕಾನೂನು, ಪೊಲೀಸ್ ರಕ್ಷಣೆ ಮಾಡಲು ಎಲ್ಲಾ ಸಮಯದಲ್ಲಿಯೂ ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಕಣ್ಣುಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಕಣ್ಣುಗಳನ್ನು ಸತ್ತ ನಂತರ ಮಣ್ಣಾಗಿಸುವುದರ ಬದಲಿಗೆ ಬೇರೆಯವರಿಗೆ ಕಣ್ಣಾಗಿ ಎಂದು ಮನವಿ ಮಾಡಿದರು.

       ಪುನರ್ಜನ್ಮ ಎನ್ನುವುದು ಸುಳ್ಳು. ಪುನರ್ಜನ್ಮದ ಬಗ್ಗೆ ಕಲ್ಪನೆ ಮಾಡಿಕೊಂಡು ಮುಂದಿನ ಜನ್ಮಕ್ಕೆ ಕಾಯುವುದು ಸರಿ ಅಲ್ಲ ಅದು ಇಲ್ಲವೋ ಇಲ್ಲ. ಬೇರೆಯವರ ಬಾಳಿಗೆ ಬೆಳಕು ನೀಡಿದರೆ ಅದೇ ಪುನರ್ಜನ್ಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಸಲ್ಲದನ್ನು ಕಲ್ಪನೆ ಮಾಡಿಕೊಂಡು ಕಣ್ಣುಗಳನ್ನು ವ್ಯರ್ಥ ಮಾಡಬೇಡಿ. ಜಗತ್ತಿನಲ್ಲಿ ಬೆಳಕನ್ನೇ ನೋಡದ ಲಕ್ಷಾಂತರ ಜನರಿಗೆ ಕಣ್ಣು ದಾನ ಮಾಡಿದರೆ ಸತ್ತ ಮೇಲೂ ಸಾರ್ಥಕವಾಗುತ್ತದೆ ಎಂಬುದನ್ನು ಅರಿಯಿರಿ. ಯುವಕರು ಮನೆ ಮನೆಗೆ ಹೋಗಿ ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸುವಂತೆ ಕಿವಿಮಾತು ಹೇಳಿದರು.

       ಶ್ರೀಲಂಕಾ ಪುಟ್ಟ ದೇಶ. ಆ ದೇಶದಲ್ಲಿ ಕಣ್ಣುಗಳನ್ನುರಾಷ್ಟ್ರದ ಆಸ್ತಿ ಎಂದು ಪರಿಗಣಿಸಿ ಘೋಷಣೆ ಮಾಡಲಾಗಿದೆ. ಜನಸಂಖ್ಯೆಯುಲ್ಲಿಯೇ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ 70 ಲಕ್ಷಕ್ಕೂ ಹೆಚ್ಚು ಅಂಧರು ಬೆಳಕನ್ನೇ ನೋಡಿಲ್ಲ. ಸತ್ತವರ ಕಣ್ಣುಗಳನ್ನು ಮಣ್ಣಾಗಿಸುವ ಅಥವಾ ದಹಿಸುವ ಬದಲಿಗೆ ದಾನ ಮಾಡುವುದರಿಂದ ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕಣ್ಣುಗಳನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಣೆ ಮಾಡುವಂತೆ ಪುನರುಚ್ಚಿಸಿದರು.

       ಮನುಷ್ಯ ಸಾಯಬಹುದು ಆದರೆ ಆತ ಸಾಯುವ ಮುನ್ನ ಮನಸ್ಸು ಮಾಡಿದರೆ ಕಣ್ಣುಗಳನ್ನು ಜೀವಂತವಾಗಿಡಬಹುದು. ಮನುಷ್ಯ ಸತ್ತರೂ ಆತನ ಕಣ್ಣುಗಳನ್ನು ಬದುಕಿದವರಿಗೆ ಅಳವಡಿಸಿದರೆ ಆತನ ಕಣ್ಣು ಜೀವಂತವಾಗಿರುತ್ತದೆ. ಕಣ್ಣುಗಳನ್ನು ದಾನ ಮಾಡುವ ವಿಚಾರದಲ್ಲಿಯೂ ಮೂಢನಂಬಿಕೆ ಕಂದಾಚಾರಗಳನ್ನು ಅನುಸರಿಸಲಾಗುತ್ತಿದೆ. ಇವುಗಳ ಬಗ್ಗೆ ಜಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. 

         ಆನಂದ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಜೆ.ಶಶಿಧರ್, ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷರಾದ ಕ್ಯಾಪ್ಟನ್ ಮಹೇಶ್ವರಪ್ಪ, ಕರವೇ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ಬಸವೇಶ್ವರ ಪುರ್ನಜ್ಯೋತಿ ಐ ಬ್ಯಾಂಕ್ ಅಧ್ಯಕ್ಷ ಶಿವರಾಂ, ಮಾಜಿ ಅಧ್ಯಕ್ಷೆ ಗಾಯತ್ರಿ ಶಿವರಾಂ ಹಾಗೂ ಇತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link