ಖಾಲಿ ಸೈಟ್‍ಗಳಲ್ಲಿ ತಲೆ ಎತ್ತಿವೆ ಪೊದೆ, ಕಸದ ರಾಶಿ

ದಾವಣಗೆರೆ:

     ಸ್ಮಾರ್ಟ್‍ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯಲ್ಲಿ ಖಾಲಿ ನಿವೇಶನಗಳನ್ನು ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಲ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದು ಪೊದೆಗಳು ತಲೆ ಎತ್ತಿದ್ದರೆ, ಇನ್ನೂ ಕೆಲ ಸೈಟ್‍ಗಳಲ್ಲಿ ಕಸದ ರಾಶಿಗಳು ಬಿದ್ದಿವೆ.

      ಹೌದು… ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಆದರೆ, ಇವುಗಳ ಮಾಲೀಕರು ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದಿರುವ ಕಾರಣ ದಟ್ಟ ಪೊದೆಗಳು ಬೆಳೆದು ನಿಂತಿವೆ. ಅಲ್ಲದೆ, ನೆರೆಹೊರೆಯ ಮನೆಯವರು ಕಸವನ್ನು ಇಲ್ಲಿಯೇ ಸುರಿಯುತ್ತಿರುವ ಕಾರಣ ಕಸದ ರಾಶಿಗಳು ಸಹ ಬಿದ್ದಿವೆ. ಹೀಗಾಗಿ ಸ್ಮಾರ್ಟ್‍ಸಿಟಿ ಪರಿಕಲ್ಪನೆಯನ್ನೇ ಈ ಪೊದೆಗಳು ಹಾಗೂ ಕಸದ ರಾಶಿಗಳು ಅಣಕಿಸುತ್ತಿವೆ.

      ಖಾಲಿ ನಿವೇಶನಗಳನ್ನು ಸ್ವಚ್ಛವಾಗುವಂತೆ ನಿರ್ವಹಣೆ ಮಾಡುವುದು ಸಹ ಪಾಲಿಕೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ಖಾಲಿ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದಿರುವ ಹಾಗೂ ಕಸದ ರಾಶಿ ಬಿದ್ದಿರುವ ಕಾರಣ ಹಂದಿಗಳು ಹಾಗೂ ನಾಯಿಗಳ ವಾಸ ಸ್ಥಾನವಾಗಿಯೂ ನಿರ್ಮಾಣವಾಗಿದ್ದರೆ, ಮೊತ್ತೊಂದೆಡೆ ಸೊಳ್ಳೆ ಉತ್ಪತ್ತಿ ತಾಣವಾಗಿರುವ ಈ ಖಾಲಿ ಸೈಟ್‍ಗಳು ರೋಗಗಳ ಮೂಲವಾಗುತ್ತಿವೆ. ಹೀಗಾಗಿ ಸುತ್ತಮುತ್ತಲ್ಲಿನ ನಿವಾಸಿಗಳಲ್ಲಿ ಭಯ, ಆತಂಕವನ್ನು ಹುಟ್ಟಿಸಿವೆ.

      ದಾವಣಗೆರೆಯ ದೇವರಾಜ ಅರಸು ಬಡಾವಣೆಯ ಎ ಬ್ಲಾಕ್‍ನ ಖಾಲಿ ನಿವೇಶನಗಳಲ್ಲಂತೂ ಬೃಹದಾಕಾರದ ಜಾಲಿಗಿಡಗಳು ಬೆಳೆದು ನಿಂತಿವೆ. ಹೀಗಾಗಿ ಇಲ್ಲಿ ಹುಳು-ಹುಪ್ಪುಡಿ, ಹಾವು-ಚೇಳುಗಳಂಥಹ ವಿಷ ಜಂತುಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಈ ಭಾಗದ ಜನತೆ ಮಕ್ಕಳನ್ನು ಹೊರಗಡೆ ಆಡಲು ಸಹ ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ.

      ಇನ್ನೂ ನಿಜಲಿಂಗಪ್ಪ ಬಡಾವಣೆ, ತರಳಬಾಳು ಬಡಾವಣೆ, ನಿಟುವಳ್ಳಿ, ಶ್ರೀನಿವಾಸ ನಗರ, ಸರಸ್ವತಿ ನಗರ, ಕೆ.ಬಿ.ಬಡಾವಣೆ, ಎಸ್.ಎಸ್. ಲೇಔಟ್ ಸೇರಿದಂತೆ ಹಲವು ಬಡಾವಣೆಗಲ್ಲಿರುವ ಖಾಲಿ ನಿವೇಶನಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ನಿವೇಶನಗಳ ಸ್ಥಿತಿ ಹೀಗಾಗಲು ಕಾರಣ ಒಮ್ಮೆ ನಿವೇಶನ ಖರೀದಿಸಿ ನೋಂದಾಯಿಸಿಕೊಂಡ ಮೇಲೆ ಬಹುತೇಕ ನಿವೇಶನಗಳ ಮಾಲೀಕರು ಅತ್ತ ತಲೆಯೇ ಹಾಕುವುದಿಲ್ಲ.

      ರಿಜಿಸ್ಟಾರ್ ಆಗಿಬಿಟ್ಟರೆ ಮುಗಿಯಿತು. ಮತ್ತೆ ಆ ಕಡೆ ತಲೆ ಹಾಕದ ಮಾಲೀಕರೇ ಹೆಚ್ಚು. ಅಲ್ಲದೆ, ಮನೆ ಕಟ್ಟಲೆಂದೇ ಖಾಲಿ ಬಿಟ್ಟ ನಿವೇಶನಗಳು ಇವಲ್ಲ. ಬಹುತೇಕ ಮಾಲೀಕರಿಗೆ ಯಾವುದೇ ಕಟ್ಟಡ ಕಟ್ಟುವ ಉದ್ದೇಶವಿಲ್ಲ. ಈಗಾಗಲೇ ತಮಗೆ ವಾಸಕ್ಕೆ ಒಂದೋ ಎರಡೋ ಮನೆಗಳಿದ್ದು, ಮತ್ತೊಂದು ಸ್ವತ್ತಾಗಿ ಇರಲಿ ಎಂಬ ಕಾರಣಕ್ಕೆ ಖರೀದಿಸಿದ ಆಸ್ತಿಯಾಗಿವೆ ಇನ್ನು ಕೆಲವರು ಬೇರೆಲ್ಲೋ ವಾಸವಿದ್ದು ದಾವಣಗೆರೆಯಲ್ಲೊಂದು ನಿವೇಶನ ಇರಲಿ ಎಂದು ಖರೀದಿಸಿದ್ದಾರೆ. ಇತ್ತ ಮಾರಾಟವೂ ಮಾಡದೆ, ಅತ್ತ ಮನೆಯನ್ನೂ ಕಟ್ಟದೇ ಖಾಲಿ ಬಿಟ್ಟ ಸೈಟುಗಳು ಇವಾಗಿವೆ. ಆ ಕಾರಣಕ್ಕೆ ಇವು ಹಾಳು ಬಿದ್ದಿವೆ.

      ಹಂದಿಗಳಿಗೆ ಗಿಡ, ಗೆಂಟೆ ಬೆಳದು ನಿಂತಿರುವ ಈ ಖಾಲಿ ನಿವೇಶನಗಳೇ ವಾಸ ಸ್ಥಾನ. ನಿವೇಶನಕ್ಕೆ ಅಕ್ಕಪಕ್ಕದ ಮನೆಯವರು ಎಸೆಯುವ ಉಳಿಕೆ ಆಹಾರ ತಿಂದು ಸದಾ ಇಲ್ಲಿಯೇ ಬೀಡು ಬಿಟ್ಟಿರುತ್ತವೆ. ಸದಾ ಕಿತ್ತಾಡುತ್ತಾ ಜೋರಾಗಿ ಅರಚಾಡುವ ಈ ಹಂದಿಗಳು ಮಕ್ಕಳ ಮೇಲೂ ದಾಳಿ ಮಾಡಿರುವ ನಿದರ್ಶನಗಳಿವೆ.

      ಈ ಖಾಲಿ ನಿವೇಶನಗಳಿಗೆ ಎಲ್ಲ ರೀತಿಯ ತ್ಯಾಜ್ಯ ವಸ್ತುಗಳು ಬಂದು ಬೀಳುತ್ತವೆ. ತೆಂಗಿನ ಚಿಪ್ಪುಗಳು, ಟೈರ್‍ಗಳು ಸೇರಿದಂತೆ ಡಬ್ಬಗಳು ಮತ್ತು ಕೊಳೆಯದ ಪ್ಲಾಸ್ಟಿಕ್ ಚೀಲಗಳು ಇಲ್ಲಿ ಬೀಳುವುದರಿಂದ ನಿವೇಶನಗಳು ಅಕ್ಷರಶಃ ಕೊಳಚೆಯಿಂದ ತುಂಬಿರುತ್ತದೆ. ಕೆಲವೊಮ್ಮೆ ಇಲ್ಲಿ ನೀರು ಸೇರಿಕೊಂಡು ಇಲ್ಲಿಯೇ ಲಾರ್ವಾಗಳು ಹುಟ್ಟಿ ಡೆಂಗಿ, ಚಿಕೂನ್‍ಗುನ್ಯಾ ಕಾಯಿಲೆಗಳಿಗೆ ಕಾರಣವಾಗಿರುವ ಸೊಳ್ಳೆಗಳು ಸಹ ಇಲ್ಲಿ ಉತ್ಪತ್ತಿಯಾಗುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.

       ಕಾಯಿದೆ ಪ್ರಕಾರ ಖಾಲಿ ನಿವೇಶನಗಳನ್ನು ಮಾಲೀಕರು ನಿರ್ವಹಣೆ ಮಾಡದಿದ್ದರೆ, ಕ್ರಮ ಕೈಗೊಳ್ಳಬಹುದು. ಮೊದಲು ಖಾಲಿ ನಿವೇಶನದ ಸ್ವಚ್ಛತೆ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಬಹುದು. ಪಾಲಿಸದಿದ್ದರೆ ಪಾಲಿಕೆಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲು ಸಹ ಅವಕಾಶಗಳಿವೆ. ಇದ್ಯಾವುದಕ್ಕೂ ಬಗ್ಗದಿದ್ದರೆ, ಕಾಯಿದೆ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಹ ಪಾಲಿಕೆಗೆ ಇದೆ.

       ಆದರೆ, ಮಹಾನಗರ ಪಾಲಿಕೆ ಖಾಲಿ ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ತಕ್ಷಣವೇ ಪಾಲಿಕೆ ಅಧಿಕಾರಿಗಳು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link