ಬೆಂಗಳೂರು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿಚಾರದಲ್ಲಿ ಆ ಸಮುದಾಯದ ನೌಕರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, 2017ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಜಾರಿ ಮಾಡಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ.ಪಮರೇಶ್ವರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆ ಸಂಬಂಧ ಸೆಪ್ಟೆಂಬರ್ 11ರಂದು ತೀರ್ಪು ಬರಬೇಕಿದ್ದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಯನ್ನು ಮುಂದೂಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ವಿಚಾರಣೆಯನ್ನು ಮತ್ತೆ ಮುಂದೂಡಿರುವುದರಿಂದ ಕಾಯ್ದೆ ಜಾರಿ ವಿಳಂಬವಾಗಿದೆ ಎಂದರು.
ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬವಾಗಿದ್ದು, ಇದು ಪಕ್ಷವನ್ನು ಮೀರಿದ ಹಬ್ಬವಾಗಿದೆ. ಕಾಂಗ್ರೆಸ್ ಶಾಸಕರಿಗೆ ಆಹ್ವಾನ ಸಿಕ್ಕಿಲ್ಲ ಎಂಬ ಆರೋಪ ಸರಿಯಲ್ಲ. ಈ ಬಾರಿ ದಸರಾ ಸಮಿತಿಗಳು ರಚನೆಯೇ ಆಗಿಲ್ಲ. ಆದ್ದರಿಂದ ಸ್ಥಳೀಯ ಶಾಸಕರಿಗೆ ಸಮಿತಿಯಲ್ಲಿ ಅವಕಾಶ ದೊರೆತಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಎಲ್ಲ ಶಾಸಕರಿಗೂ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ. ಗೃಹ ಸಚಿವನಾಗಿ ನಾನು ಪೊಲೀಸ್ ಪರೇಡ್‍ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.
ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಒಮ್ಮತದಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಐದೂ ಕ್ಷೇತ್ರಗಳಲ್ಲೂ ಎರಡೂ ಪಕ್ಷದವರ ಬೆಂಬಲ ಇದ್ದೇ ಇರಲಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಜೆಡಿಎಸ್‍ನ ಬೆಂಬಲ ಚೆನ್ನಾಗಿಯೇ ಇದೆ. ಒಮ್ಮತದ ಬಗ್ಗೆ ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಅವರ ವಿಶ್ಲೇಷಣೆ ನಮಗೆ ಬೇಕಾಗಿಲ್ಲ ಎಂದರು,
ಇಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಉಪಚುನಾವಣೆಯಿಂದ ಐದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ನಮ್ಮ ಸಮ್ಮಿಶ್ರ ಸರಕಾರ ಇನ್ನೂ ಬಲವಾಗಲಿದೆ ಎಂಬ ಸಂದೇಶ ರವಾನಿಸಲಿದ್ದೇವೆ.ಇದರಿಂದ ಬಿಜೆಪಿ ಅವರ ಮುಖಭಂಗವಾಗಲಿದೆ ಎಂದರು.
ಬಳ್ಳಾರಿ ಕ್ಷೇತ್ರ ಮೀಸಲು ಕ್ಷೇತ್ರವಾದ್ದರಿಂದ ಉಗ್ರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ಅದಕ್ಕಿಂತ ಮುಖ್ಯವಾಗಿ ನಮ್ಮ ಪಕ್ಷದ ಹಿರಿಯ ಮುಖಂಡರು. ಇಲ್ಲಿ ಜಾತಿವಾದ ಯಾವುದೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
