ನಿಯಮ ಉಲ್ಲಂಘಿಸುವ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಕ್ರಮ: ಡಿಸಿ ರಾಕೇಶ್ ಕುಮಾರ್

ತುಮಕೂರು

       ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ಪರಿಶೀಲನೆ ನಡೆಸಿ, ವಿಸ್ತೃತವಾದ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ ಹಾಗೂ ನಿಯಮಗಳನ್ವಯ ಕಾರ್ಯ ನಿರ್ವಹಿಸದ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಪಿಸಿ ಅಂಡ್ ಪಿಎನ್‍ಡಿಟಿ ಕಾಯ್ದೆ ಅನುಷ್ಟಾನದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಜನನ ಲಿಂಗಾನುಪಾತ ಪ್ರಮಾಣದಲ್ಲಿ ಇಳಿಮುಖವಾಗಿರುವುದಕ್ಕೆ ಸ್ಪಷ್ಟವಾದ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಅಲ್ಲದೆ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳಿಗೆ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭೇಟಿ ನೀಡಿ, ಕಾಯ್ದೆಯನುಸಾರ ಸ್ಕ್ಯಾನಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೆ ಎಂಬುದನ್ನು ದಾಖಲೆಗಳೊಂದಿಗೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಅವರಿಗೆ ಸೂಚನೆ ನೀಡಿದರು.

       ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ಫಾರಂ-ಎಫ್‍ನ್ನು ಆರೋಗ್ಯ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೆ ದಾಖಲೆಗಳನ್ನು ಕಡ್ಡಾಯವಾಗಿ 2 ವರ್ಷ ಸಂರಕ್ಷಿಸಿಡುವಂತೆ ಕಾಯ್ದೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲನೆಯ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಿ ಕಾಯ್ದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ವರದಿ ನೀಡಿದರೆ, ಆ ಸ್ಕ್ಯಾನಿಂಗ್ ಕೇಂದ್ರಗಳ ಅನುಮತಿಯನ್ನು ರದ್ದುಪಡಿಸಲಾಗುವುದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

       ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಅದೇರೀತಿಯಲ್ಲಿ ಪಿಸಿ ಅಂಡ್ ಪಿಎನ್‍ಸಿಟಿ ಕಾಯ್ದೆಯನ್ನು ಪಾಲನೆ ಮಾಡಬೇಕಾಗಿರುವುದು ಸ್ಕ್ಯಾನಿಂಗ್ ಕೇಂದ್ರಗಳ ಕರ್ತವ್ಯವಾಗಿದೆ. ಸ್ಕ್ಯಾನಿಂಗ್ ಕೇಂದ್ರಗಳ ಆವರಣದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡುವಂತೆ ಡಿಹೆಚ್‍ಓಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

         ಜಿಲ್ಲೆಯ ಗಡಿ ತಾಲ್ಲೂಕು ಪಾವಗಡದಲ್ಲಿ ಹೊರರಾಜ್ಯದಿಂದ ಅಕ್ರಮವಾಗಿ ಆಗಮಿಸಿ ಸ್ಕ್ಯಾನಿಂಗ್ ಸೆಂಟರ್‍ಗಳ ಮೂಲಕ ಹೆಣ್ಣು ಭ್ರೂಣ ಪತ್ತೆ ಮಾಡಿಸುತ್ತಿರುವ ಬಗ್ಗೆ ಕ್ರಮಕೈಗೊಳ್ಳಲು ರಾಜ್ಯ ಸಕ್ಷಮ ಪ್ರಾಧಿಕಾರವು ಪತ್ರ ಬರೆದಿರುವ ಬಗ್ಗೆ ಡಿಹೆಚ್‍ಓ ಸಭೆಯ ಗಮನಕ್ಕೆ ತಂದರು. ಪಾವಗಡದಲ್ಲಿರುವ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಸ್ಕ್ಯಾನಿಂಗ್ ಮಾಡಿಸುವವರ ಪ್ರತಿಯೊಬ್ಬ ಗರ್ಭಿಣಿಯರ ಮಾಹಿತಿ ಪಡೆದು ಪರಿಶೀಲಿಸಿ, ನೆರೆಯ ರಾಜ್ಯದಿಂದ ಆಗಮಿಸಿದ್ದರೆ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಪತ್ರ ಬರೆಯೋಣ ಎಂದು ಅವರು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap