ಚಿತ್ರದುರ್ಗ:
ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯ ಸಮ್ಮಿಶ್ರ ಸರ್ಕಾರ ಪಥನಗೊಂಡು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದರು.ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿ ಪರ ಮತಯಾಚನೆಗೆ ಆಗಮಿಸಿದ್ದ ಅವರು ಶುಕ್ರವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಚಿತ್ರದುರ್ಗದಿಂದ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿಯನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿದರೆ ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಶಿಫಾರಸ್ಸು ಮಾಡಲಾಗುವುದು. ಬರದನಾಡು ಚಿತ್ರದುರ್ಗ ನೀರಾವರಿಯಿಂದ ವಂಚಿತವಾಗಿದ್ದು, ಇಲ್ಲಿ ಯಾವುದೇ ಕೈಗಾರಿಕೆಯಿಲ್ಲ.
2.50 ಲಕ್ಷ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಮಂಜೂರು ಮಾಡಿದ್ದು, ಬಿಜೆಪಿ.ಸರ್ಕಾರ. ಕಳೆದ ಐದು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಈಗಿನ ಸಮ್ಮಿಶ್ರ ಸರ್ಕಾರದಿಂದ ಯಾವ ಯೋಜನೆಗಳು ಪೂರ್ಣಗೊಂಡಿಲ್ಲ. ಎಲ್ಲಾ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ, ಮೆಡಿಕಲ್ ಕಾಲೇಜು ಆರಂಭಕ್ಕೆ ಆದ್ಯತೆ ನೀಡಲಾಗುವುದು. ಭದ್ರಾಮೇಲ್ದಂಡೆ ಚಿತ್ರದುರ್ಗಕ್ಕೆ ಹರಿದು ಬಂದಾಗ ಕೆರೆಗಳಿಗೆ ನೀರು ತುಂಬಿಸಲಾಗುವುದು. ಅಂರ್ತಜಲ ವೃದ್ದಿಸಿ ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವು ಪೂರೈಕೆಗೂ ಗಮನ ಕೊಡಲಾಗುವುದು ಎಂದು ತಿಳಿಸಿದರು.
ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ಮೋದಿರವರು ಸ್ವಚ್ಚ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರಿಂದ ದೇಶದ ಶೇ.35 ರಷ್ಟು ಯುವಕರು ಸಿಂಹದ ತರ ಮೋದಿ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ. ಅಭ್ಯರ್ಥಿ ಅನೇಕಲ್ ನಾರಾಯಣಸ್ವಾಮಿ ನಾಲ್ಕು ಬಾರಿ ಶಾಸಕರಾಗಿ ಸಮಾಜ ಕಲ್ಯಾಣ ಸಚಿವರಾಗಿ ರಾಜಕೀಯದಲ್ಲಿ ಸಾಕಷ್ಟು ಪಳಗಿ ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಮೋದಿ ಕೈಬಲಪಡಿಸಿ ಎಂದು ಮನವಿ ಮಾಡಿದರು.
ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ. ತಂದೆ ಮಕ್ಕಳನ್ನು ಗೆಲ್ಲಿಸಿಕೊಳ್ಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹನ್ನೆರಡು ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದಾರೆ. ಹೆಚ್.ಡಿ.ಕೆ.ಬರೀ ಮೂರು ಜಿಲ್ಲೆಗಳಿಗೆ ಮುಖ್ಯಮಂತ್ರಿಯಲ್ಲ. ರಾಜ್ಯಕ್ಕೆ ಎನ್ನುವುದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷವಾಯಿತು. ರಾಜ್ಯದಲ್ಲಿರುವ ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತು ನೋಡಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಐವರು ಬಿಜೆಪಿ.ಶಾಸಕರುಗಳಿದ್ದಾರೆ. ಅವರಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಇದು ಒಳ್ಳೆ ಸಂಪ್ರದಾಯವಲ್ಲ. ನಂಜುಂಡಸ್ವಾಮಿ ವರದಿ ಅನುಷ್ಟಾನಗೊಳಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ವಿಧಾನಸಭೆಯಲ್ಲಿ ಬಿಜೆಪಿ.104 ಸ್ಥಾನಗಳನ್ನು ಗಳಿಸಿದ್ದರು ಅನುದಾನ ಬಿಡುಗಡೆಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ.
ಇಂತಹ ಸರ್ಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕಿದೆ. ಆದ್ದರಿಂದ ಲೋಸಕಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದರು.
ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಮಾತನಾಡಿ, ಪಕ್ಷದ ನಾಯಕರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಸೂಚಿಸಿದ್ದರಿಂದ ಇಲ್ಲಿ ಸ್ಪರ್ದಿಸಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿಯ ಪರ ಒಲವು ವ್ಯಕ್ತವಾಗುತ್ತಿದ್ದು, ಗೆಲ್ಲುವ ಎಲ್ಲಾ ವಿಶ್ವಾಸವಿದೆ ಎಂದರು
ಪತ್ರಿಕಾಗೋಷ್ಟಿಯಲ್ಲಿ ಚಿತ್ರದುರ್ಗ ಲೋಕಸಭಾ ಉಸ್ತುವಾರಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ಜೈಪಾಲ್, ವಿಜಯಣ್ಣ, ಮುಖಂಡ ಎಂ.ಎ.ಸೇತೂರಾಂ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.