ಅತೃಪ್ತರ ಮೇಲೆ ಎಸಿಬಿ ಅಸ್ತ್ರ ಪ್ರಯೋಗಿಸಲು ಮುಂದಾದ ಸರ್ಕಾರ..!!

ಬೆಂಗಳೂರು

   ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಹಾಗೂ ಗೋಪಾಲಯ್ಯ ಅವರನ್ನು ಬಗ್ಗು ಬಡಿಯಲು ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

     ಶಾಸಕರರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಹಾಗೂ ಗೋಪಾಲಯ್ಯ ವಿರುದ್ಧ ಹಿಂದೆ ಎಸಿಬಿಯಲ್ಲಿ ದಾಖಲಾಗಿದ್ದ ಹಗರಣಗಳನ್ನು ಹೊರತೆಗೆದು ನಾಲ್ವರನ್ನು ಸಂಕಷ್ಟಕ್ಕೆ ದೂಡಲು ರಣತಂತ್ರ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

   ಎಸಿಬಿಯಲ್ಲಿ ಮುನಿರತ್ನ, ಗೋಪಾಲಯ್ಯ ಅವರ ಮೇಲೆ ಗಂಭೀರ ಸ್ವರೂಪದ ಪ್ರಕರಣಗಳು ವಿವಿಧ ಹಂತಗಳಲ್ಲಿ ತನಿಖೆ ನಡೆದಿದೆ. ಕೆಲ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿದ್ದು, ಕೆಲವು ಖುಲಾಸೆಯಾಗಿವೆ. ಇನ್ನೂ ಕೆಲವು ವಿಚಾರಣೆ ಹಂತದಲ್ಲಿರುವುದರಿಂದ ಅವುಗಳಿಗೆ ಮರುಜೀವ ನೀಡಿ ಶಾಸಕರುಗಳಿಗೆ ತಕ್ಕ ಶಾಸ್ತಿ ಮಾಡಲು ದೋಸ್ತಿ ನಾಯಕರು ಮುಂದಾಗಿದ್ದಾರೆ.

    ನಾಲ್ವರು ಶಾಸಕರ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ಅಧಿಕಾರಿಗಳನ್ನು ಬಳಸಿಕೊಂಡು ಹೆಕ್ಕಿ ತೆಗೆಯುವ ಕೆಲಸವನ್ನು ದೋಸ್ತಿ ನಾಯಕರು ಮಾಡುತ್ತಿದ್ದಾರೆ. ಅದರಲ್ಲೂ ಮುನಿರತ್ನ, ಗೋಪಾಲಯ್ಯ ಹಾಗೂ ಬಸವರಾಜ್ ವಿರುದ್ಧ ಗಂಭೀರ ಸ್ವರೂಪದ ಹಗರಣಗಳಿರುವ ಹಿನ್ನೆಲೆಯಲ್ಲಿ ಅದನ್ನಾಧರಿಸಿ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಲಾಯಿತು.

    ಕಾಂಗ್ರೆಸ್-ಜೆಡಿಎಸ್ ನಾಯಕರು ಈ ನಾಲ್ವರು ಶಾಸಕರ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಪ್ರಕರಣಗಳನ್ನು ಪರಿಶೀಲಿಸಿ ಇಕ್ಕಟ್ಟಿಗೆ ಸಿಲುಕಿಸಬಹುದಾದ ಪ್ರಕರಣಗಳನ್ನು ಕೈಗೆತ್ತಿಕೊಂಡು ಅಣಿಯಲು ಸಿದ್ಧತೆ ನಡೆಸಿ ಖಡಕ್ ಅಧಿಕಾರಿಯೆಂದೇ ಬಿಂಬಿತವಾಗಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ಎಸಿಬಿ ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿದೆ.

     ಮುನಿರತ್ನ ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಶಾಸಕರಾಗಿದ್ದು, ಗೋಪಾಲಯ್ಯ ಜೆಡಿಎಸ್ ಶಾಸಕರು. ಇವರ ವಿರುದ್ಧ ದಾಖಲಾಗಿರುವ ಹಗರಣಗಳು, ಪ್ರಕರಣಗಳಿಗೆ ಜೀವತುಂಬಿ ರಾಜಕೀಯದಲ್ಲಿ ಮತ್ತೆ ಚೇತರಿಸಿಕೊಳ್ಳಲಾರದಷ್ಟು ಹೊಡೆತ ನೀಡಲು ಮೈತ್ರಿ ಸರ್ಕಾರ ಮುಂದಾಗಿರುವುದು ಈ ನಾಲ್ವರೂ ಶಾಸಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

       ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಸರ್ಕಾರದ ನಡೆಯನ್ನು ವಿರೋಧಿಸಿ ಈ ಶಾಸಕರು ಕಳೆದ ಶನಿವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಸುಪ್ರೀಂಕೋರ್ಟ್‍ನ ನಿರ್ದೇಶನ ಮೇರೆಗೆ ನಿನ್ನೆ ಸಂಜೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈನತ್ತ ಮುಖ ಮಾಡಿದ್ದಾರೆ. ಈಗಾಗಲೇ ಈ ಶಾಸಕರ ವಿರುದ್ದ ಅನರ್ಹತೆಯ ಅಸ್ತ್ರ ಬಳಸಲು ಮುಂದಾಗಿರುವ ಉಭಯ ನಾಯಕರು ಈಗ ಎಸಿಬಿಯನ್ನು ಮುಂದಿಟ್ಟುಕೊಂಡು ಸಂಕಷ್ಟಕ್ಕೆ ಸಿಲುಕಿಸಲು ನಿರ್ಧರಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap