ಬಿಜೆಪಿಯಿಂದ ಸಾಮಾಜಿಕ ಜಾಲತಾಣ ದುರುಪಯೋಗ :ಈಶ್ವರ ಖಂಡ್ರೆ

ಬೆಂಗಳೂರು

     ಪುಲ್ವಾಮ ಹಂತ್ಯಾಕಾಂಡ, ಬಾಲಕೋಟ್ ದಾಳಿಯ ಪ್ರಕರಣವನ್ನು ಸಾಮಾಜಿಕ ಜಾಲತಾಣದ ಮೂಲಕ ದುರುಪಯೋಗ ಪಡಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಜನರನ್ನು ವಂಚಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ವತಿಯಿಂದ ಗುರುನಾನಕ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ

    ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ತಮ್ಮ ಆಡಳಿತದ ಅವಧಿಯಲ್ಲಿ ನಡೆದಿರುವ ವೈಫಲ್ಯಗಳನ್ನು ಮುಚ್ಚಿ ಹಾಕಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದೆ ಎಂದು ದೂರಿದರು.

    ಬಿಜೆಪಿ ಕಳೆದ 6 ವರ್ಷದ ಅವಧಿಯಲ್ಲಿ ಜನರಿಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ತಮ್ಮ ಆಡಳಿತದ ಅವಧಿಯಲ್ಲಿ ನಡೆಸಿದ್ದ ವೈಫಲ್ಯಗಳನ್ನೇ ಸಾಧನೆ ಎಂದು ಬಿಂಬಿಸಲಾಯಿತು. ಆರ್ಥಿಕ ಸುಧಾರಣೆಗೆ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜಿಡಿಪಿ ದರ ಶೇ 2.5 ಕ್ಕೆ ಕುಸಿದಿದೆ ಎಂದು ಟೀಕಿಸಿದರು.

    ಧರ್ಮಾಧಾರಿತ ಸಿಎಎ, ಎನ್‌ಆರ್‌ಸಿ ಯೋಜನೆ ಜಾರಿಗೊಳಿಸುವುದರ ಮೂಲಕ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪ ಸಂಖ್ಯಾತರು, ಮಧ್ಯಮ ವರ್ಗದ ಜನ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಕಡಿಮೆ ಆಗಿದೆ. ಇಂತಹ ಪ್ರವೃತ್ತಿಯನ್ನು ತಾಳಿರುವ ಬಿಜೆಪಿ ನಾಯಕರು ದೇಶವನ್ನು ಅದೋಗತಿಗೆ ತಳ್ಳುತ್ತಿದ್ದಾರೆ ಎಂದು ದೂರಿದರು.

    ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗೆ ಹಾಗೂ ಬಡತನ ನಿವಾರಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರಿಗಾಗಿ ಉದ್ಯೋಗ ಖಾತ್ರಿ ಯೋಜನೆ, ಅನ್ನ ಭಾಗ್ಯ ಯೋಜನೆ, ಆಹಾರ ಭದ್ರತೆ ಕಾಯ್ದೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಅನೇಕ ಜನಪಯೋಗಿ ಯೋಜನೆಗಳನ್ನು ಪ್ರಕಟಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಾಂಗ್ರೆಸ್ ಪಕ್ಷ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಈ ಕಾರ್ಯಕ್ರಮಗಳು ಪ್ರಚಾರಕ್ಕೆ ಬಾರದೇ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.

    ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಅನೇಕ ನಾಯಕರನ್ನು ಅವಹೇಳನಕಾರಿ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಇಂತಹ ಕೀಳುಮಟ್ಟದ ಅಭಿರುಚಿ ಹೊಂದಿರುವ ಬಿಜೆಪಿ ನಾಯಕರು ಚುನಾವಣೆಯ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿರುವ ನಿದರ್ಶನವಿಲ್ಲ.

   ಪೊಳ್ಳು ಭರವಸೆ ಯಿಂದಲೇ ಅಧಿಕಾರ ಹಿಡಿದಿರುವ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾದ ಕಾಲ ದೂರವಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಪ್ರವೀಣ್ ಚಕ್ರವರ್ತಿ, ರೋಹನ್ ಗುಪ್ತಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap