ಒಂದು ವಾರದ ಅಧಿವೇಶನ : ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲಾ : ಸಿದ್ದಗರಾಮಯ್ಯ

ಬೆಂಗಳೂರು

    ವರ್ಷಕ್ಕೆ 60 ದಿನಗಳ ಕಾಲ ವಿಧಾನಮಂಡಲ ಕಾರ್ಯಕಲಾಪ ಕಲಾಪ ನಡೆಯಬೇಕು. ಆದರೆ ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ., ಹೀಗಾ ಬರೀ ಒಂದು ವಾರಗಳಿಗೆ ಮಾತ್ರ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

   ಎಪಿಎಂಸಿ ಹಾಗೂ ಭೂ ತಿದ್ದುಪಡಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡಲ ಅಧಿವೇಶವನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ನಗರದ ಗಾಂಧಿಭವನದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬರೆದಿರುವ “ರೈತರ ಭದ್ರತೆ-ದೇಶದ ಭದ್ರತೆ” ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರ್ಕಾರಕ್ಕೆ ಬಹುಮತವಿದೆ. ಆದರೆ ಚರ್ಚೆಯೇ ಇಲ್ಲದೇ ಧರಣಿ ಮಧ್ಯೆಯೇ ಮಸೂದೆಗಳನ್ನು ಅಂಗೀಕಾರ ಮಾಡಿಕೊಳ್ಳುತ್ತಾರೆ. ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರುವುದೇ ಆದರೆ ಅಧಿವೇಶನದ ಕಾಲಾವಧಿ ವಿಸ್ತರಿಸಬೇಕು. ಕಾಯಿದೆ ತಿದ್ದುಪಡಿ ಸಂಬಂಧದ ಚರ್ಚೆಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಎಂದು
ಸಿದ್ದರಾಮಯ್ಯ ಒತ್ತಾಯಿಸಿದರು.

    ಈಗ ಕೇವಲ ಎಂಟು ದಿನ ಅಧಿವೇಶನ ಕರೆದಿದ್ದು, 30 ಕ್ಕೂಹೆಚ್ಚು ಮಸೂದೆಗಳು ಮಂಡನೆಯಾಗಿವೆ. ಒಂದು ಮಸೂದೆ ಮೇಲಿನ ಚರ್ಚೆಗೆ ಕನಿಷ್ಠ ಎರಡು ಗಂಟೆ ಬೇಕು. ಎಂಟು ದಿನದಲ್ಲಿ ಯಾವುದೇ ಚರ್ಚೆ ಮಾಡಲು ಆಗುವುದಿಲ್ಲ. ಹೀಗಾಗಿ ಅಧಿವೇಶನದ ಕಾಲಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಸ್ಪೀಕರ್‍ಗೆ ಪತ್ರ ಬರೆಯಲಾಗಿದೆ ಎಂದರು.

     ಬಿಜೆಪಿಯವರು ಒಂದು ಕಡೆ ಭಾಷಣ ಮಾಡುತ್ತಾರೆ. ಮತ್ತೊಂದು ಕಡೆ ಕಾಯಿದೆಯನ್ನು ಜಾರಿ ಮಾಡುತ್ತಾರೆ, ಇದು ಸರ್ಕಾರದ ಅವೈಜ್ಞಾನಿಕ ತೀರ್ಮಾನ. ಭೂ ತಿದ್ದುಪಡಿ. ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ. ಸರ್ಕಾರ ಈಗಾಗಲೇ ಇರುವ ಶೋಷಣೆಯನ್ನು ತಪ್ಪಿಸಬಹುದಿತ್ತು. ಆದರೆ ಎಪಿಎಂಸಿ ತಿದ್ದುಪಡಿ ಮೂಲಕ ಬಲವಂತವಾಗಿ ಹೊರ ಹೊರಿಸಿದೆ. ಈ ಕಾಯಿದೆಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕೋಲೆ ಬಸವನಂತಾಗಿದೆ ಎಂದು ಟೀಕಿಸಿದರು.

    ಕೊರೊನಾದಿಂದಾಗಿ ಜನ ಸಾಯುತ್ತಿರುವಂತಹ ಸಂದರ್ಭದಲ್ಲಿಯೇ ಸರ್ಕಾರ ಏಕಾಏಕಿ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ತಂದಿದೆ. ಈ ಕಾಯ್ದೆಯನ್ನು ತರುವಂತೆ ಯಾರೂ ಸರ್ಕಾರಕ್ಕೆ ಹೇ:ಳಿರಲಿಲ್ಲ. ಭೂ ಸುಧಾರಣಾ ಕಾಯಿದೆ ತಿದ್ದುಪಡಿ ತರುವ ಮೂಲಕ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ ಕಾಯ್ದೆಯ ಕಾನೂನುಗಳನ್ನೇ ಕೈಬಿಟ್ಟಿದೆ. ತರಾತುರಿಯಲ್ಲಿ ಭೂ ಸುಧಾರಣಾ ಕಾಯಿದೆ ತಿದ್ದುಪಡಿ ತರುವ ತುರ್ತು ಅವಶ್ಯಕತೆಯೇನಿತ್ತು ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕಾಯಿದೆ ತಿದ್ದುಪಡಿ ವಿರೋಧಿಸಿ ಸರ್ಕಾರದ ವಿರುದ್ಧ ಹೊರಾಟಕ್ಕೆ ಮುಂದಾಗಿದ್ದೇ. ಆದರೆ ಕೊರೋನಾ ಸೋಂಕು ತಗುಲಿ ಅದು ಸಾಧ್ಯವಾಗಲಿಲ್ಲ ಎಂದರು.

    ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಭೂ ತಿದ್ದುಪಡಿ ಕಾಯ್ದೆ ಅವೈಜ್ಞಾನಿಕ. ರೈತರಿಗೆ ಮಾರಕವಾದ ಕಾಯ್ದೆ. ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಅನಿವಾರ್ಯ. ಸದನದೊಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಡುತ್ತೇವೆ.ಸರ್ಕಾರ ಕಾಯ್ದೆ ಹಿಂಪಡೆಯುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

    ಸರ್ಕಾರ ರೈತ ವಿರೋಧಿ ಕಾಯಿದೆಗಳನ್ನು ತಂದಿರುವಂತಹ ಸನ್ನಿವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕೃತಿ ತಂದಿರುವುದು ಅರ್ಥಪೂರ್ಣ. ರೈತರ ಭದ್ರತೆ, ದೇಶದ ಭದ್ರತೆ ಗ್ರಂಥ ಈಗಿನ ಬೆಳವಣಿಗೆಗೆ ಪೂರಕವಾಗಿದೆ. ರೈತರು, ದಲಿತರು, ಕಾರ್ಮಿಕರು ಒಗ್ಗೂಡಬೇಕು. ಸರ್ಕಾರದ ಅವೈಜ್ಞಾನಿಕ ತೀರ್ಮಾನದ ವಿರುದ್ಧ ಧ್ವನಿಯೆತ್ತಬೇಕು ಎಂದು ಎಸ್.ಆರ್.ಪಾಟೀಲ್ ಹೇಳಿದರು.

    ರೈತ ಮುಖಂಡ ಪ್ರಕಾಶ್ ಕಮ್ಮರಡಿ ಮಾತನಾಡಿ, ಭೂ ಸ್ವಾಧೀನ, ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿ ಅನ್ಯಾಯ. ಇದು ರೈತರ ಅವನತಿಗೆ ಕಾರಣವಾಗಲಿದೆ. ಇಂತಹ ವಿವಾದಾತ್ಮಕ ಕಾಯ್ದೆಗಳನ್ನು ಸರ್ಕಾರ ರದ್ದುಪಡಿಸಬೇಕು.ಸಂವಿಧಾನ ವಿರುದ್ಧವಾಗಿ ಈ ಕಾಯ್ದೆ ತರಲಾಗಿದೆ. ಇದರ ವಿರುದ್ಧ ಹಸಿರು, ನೀಲಿ, ಕೆಂಪು ಪಡೆಗಳ ಹೋರಾಟ ಅನಿವಾರ್ಯ. ಸದನದ ಹೊರಗೆ ರೈತ, ಕಾರ್ಮಿಕ ದಲಿತರ ಹೋರಾಟ ನಡೆಯಲಿದೆ.ಸದನದ ಒಳಗೆ ಪ್ರತಿಪಕ್ಷಗಳು ಹೋರಾಡಬೇಕು ಎಂದರು.

    ಕೃತಿ ರಚನೆಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಮಾತನಾಡಿ, ಸರ್ಕಾರದಿಂದ ರೈತರ ಭೂಮಿ ಕಿತ್ತುಕೊಂಡು ಕಾರ್ಪೋರೇಟರ್‍ಗಳಿಗೆ ನೀಡುವ ಪ್ರಯತ್ನಗಳು ನಡೆದಿವೆ. ರೈತರಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕೊಡಬೇಕು. ಆದರೆ ರೈತರ ಭೂಮಿ ಪಡೆಯುವ ಕೆಲಸ ನಡೆದಿದ್ದು, ಈಗಿನ ಪರಿಸ್ಥಿತಿ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಸರ್ಕಾರದ ವಿರುದ್ಶ ಒಗ್ಗಟ್ಟಾಗಿ ಹೋರಾಟವನ್ನು ನಡೆಸಬೇಕಿದೆ. ಭೂಮಿ, ರೈತರನ್ನು ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಬೇಕಿದೆ ಎಂದು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap