ಅತಿಯಾಸೆಯಿಂದ ಮಿತಿ ಮೀರಿರುವ ಭ್ರಷ್ಟಾಚಾರ

ದಾವಣಗೆರೆ 

          ಇಂದು ಸಮಾಜದಲ್ಲಿ ತೃಪ್ತಿ, ಮಾನವೀಯತೆ ಇಲ್ಲವಾಗಿದೆ. ಆದ್ದರಿಂದ ದುರಾಸೆಯೂ ಹೆಚ್ಚಾಗಿರುವ ಕಾರಣ ಅತಿಯಾಸೆಯಿಂದ ಭ್ರಷ್ಟಾಚಾರವೂ ಮಿತಿಮೀರಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಕಳವಳ ವ್ಯಕ್ತಪಡಿಸಿದರು.

          ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಜನಮಿಡಿತ ದಿನಪತ್ರಿಕೆಯ ದ್ವಿ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ತೃಪ್ತಿ ಮತ್ತು ಮಾನವೀಯತೆ ಇಲ್ಲವಾಗಿರುವುದರಿಂದ ಸ್ವಾರ್ಥ ಹೆಚ್ಚಾಗಿ, ದುರಾಸೆಯೇ ತುಂಬಿಕೊಂಡಿದೆ. ಇದು ಬದಲಾಗಬೇಕಾದರೆ, ಪ್ರತಿಯೊಬ್ಬರಲ್ಲೂ ತೃಪ್ತಿ ಹಾಗೂ ಮಾನವೀಯತೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

           ಮನುಷ್ಯನಲ್ಲಿ ದುರಾಸೆ ಹೆಚ್ಚಾಗಿರುವ ಕಾರಣ ವರ್ಷದಿಂದ ವರ್ಷಕ್ಕೆ ಹಗರಣಗಳ ಮೊತ್ತವೂ ಹೆಚ್ಚಾಗುತ್ತಾ ಹೋಗಿದೆ. ಜೀಪ್ ಹಗರಣದಲ್ಲಿ 52 ಲಕ್ಷ ಅವ್ಯವಹಾರವಾಗಿದ್ದರೆ, ಬೋಫೋರ್ಸ್ ಹಗರಣದಲ್ಲಿ 64 ಕೋಟಿ, ಕಾಮನ್‍ವೆಲ್ತ್‍ನಲ್ಲಿ 70 ಸಾವಿರ ಕೋಟಿ, 2-ಜಿಯಲ್ಲಿ 1.76 ಲಕ್ಷ ಕೋಟಿ, ಕಲ್ಲಿದ್ದಲು ಹಗರಣದಲ್ಲಿ 1.86 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ದೇಶದಲ್ಲಿ ನಡೆದಿರುವ ಪ್ರಮುಖ ಭ್ರಷ್ಟಾಚಾರ ಪ್ರಕರಣಗಳನ್ನು ವಿವರಿಸಿದರು.

          ಪ್ರಸ್ತುತ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವಾಗಿದೆ. ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನೇ ಹುಚ್ಚರಂತೆ ಕಾಣಲಾಗುತ್ತಿದೆ. ಈ ಮನಃಸ್ಥಿತಿ ಮೊದಲು ಬದಲಾಗಬೇಕು. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸನ್ಮಾನಿಸುವ ಮೌಲ್ಯವಿಲ್ಲದ ಸಮಾಜದಲ್ಲಿ ನಾವುಗಳು ಬದುಕುತ್ತಿದ್ದು, ಇಂತಹ ವಾತಾವರಣ ಬದಲಾಗಿ ಭ್ರಷ್ಟರನ್ನು ಸಮಾಜದಿಂದಲೇ ಬಹಿಷ್ಕರಿಸುವಂತಹ ಕಾಲ ಬರಬೇಕೆಂದು ಆಶಯ ವ್ಯಕ್ತಪಡಿಸಿದರು.

          ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಹರೀಶ್ ಎಂಬ ಯುವಕನ ನೆರವಿಗೆ ಬಾರದೆ, ಮೊಬೈಲ್‍ಗಳಲ್ಲಿ ಶೂಟ್ ಮಾಡುತ್ತಿದ್ದವರನ್ನು ಮನುಷ್ಯರೆಂದು ಕರೆಯಲು ಸಾಧ್ಯವೇ? ಬರೀ ವಿದ್ಯೆಯಿಂದ ಮಾನವೀಯತೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಇದಕ್ಕಾಗಿ ಮೌಲ್ಯಯುತ ಶಿಕ್ಷಣ ಸಿಗಬೇನೀಡಬೇಕಾದ ಅವಶ್ಯಕತೆ ಇದೆ. ಯುವಜನತೆಯಿಂದ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

            ರಾಜಕಾರಣಿಗಳಿಗೆ ವಿದ್ಯಾರ್ಹತೆ ನಿಗಧಿ ಪಡಿಸುವ ಬಗ್ಗೆ ಸಂವಿಧಾನ ರಚನಾ ಸಮಿತಿ ಸಭೆಯಲ್ಲೂ ಚರ್ಚೆಯಾಗಿತ್ತು. ಆದರೆ, ವಿದ್ಯಾರ್ಹತೆ ಇಲ್ಲದಿರುವ ಕಾರಣದಿಂದಲೇ ಪ್ರಜೆಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಸಮಾನ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಸಂವಿಧಾನ ರಚನಾಕಾರರ ಆಶಯವಾಗಿತ್ತು. ಹೀಗಾಗಿ ರಾಜಕಾರಣಿಗಳಿಗೆ ವಿದ್ಯಾರ್ಹತೆ ಕಡ್ಡಾಯಗೊಳಿಸಿರಲಿಲ್ಲ. ವಿದ್ಯಾರ್ಹತೆಯಿಂದಲೇ ಮನುಷ್ಯನೊಬ್ಬನ ವ್ಯಕ್ತಿತ್ವ ಅಂದಾಜಿಸುವುದು ಸರಿಯಲ್ಲ. ಪ್ರಾಮಾಣಿಕತೆ ಇರುವ ಯಾರೇ ಆದರೂ ಜನರ ಸೇವೆ ಮಾಡಲು ಸಮಾಜದಲ್ಲಿ ಅವಕಾಶ ಸಿಗಬೇಕೆಂದು ಹೇಳಿದರು.

           ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ, ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ, ಸೋಮೇಶ್ವರ ವಿದ್ಯಾಲಯದ ಕೆ.ಎಂ.ಸುರೇಶ, ವಿಶ್ವಚೇತನ ವಿದ್ಯಾಸಂಸ್ಥೆಯ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಇಮಾಂ, ದೇವರಮನೆ ಶಿವಕುಮಾರ, ಗೋ.ಹಾಲೇಶ, ಬ್ರಹ್ಮಕುಮಾರಿ ಲೀಲಾಜಿ, ಎನ್.ಕೆ.ಕೊಟ್ರೇಶ, ತೀರ್ಥರಾಜ್ ಹೋಲೂರು, ಅನಿಲ್ ರಾಯ್ಕರ್, ಎನ್.ಜೆ.ಮುರುಗೇಶ, ತ್ಯಾವಣಿಗೆ ವೀರಭದ್ರಸ್ವಾಮಿ, ತುಮ್‍ಕೋಸ್ ಶಿವಕುಮಾರ, ಬಿ.ದಿಳ್ಳೆಪ್ಪ, ಜಸ್ಟಿನ್ ಡಿಸೋಜ, ಹೆಚ್.ಶಿವಮೂರ್ತಿ, ನಿರ್ಮಲ, ಕೆ.ಎನ್.ಸ್ವಾಮಿ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಗಾಯಕಿ ನಾಡೋಜ ಬಿ.ಕೆ.ಸುಮಿತ್ರ, ಬಿಜೆಪಿ ಯುವ ಮುಖಂಡ ಹೆಚ್.ಎಸ್.ನಾಗರಾಜ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪತ್ರಿಕೆಯ ಸಂಪಾದಕ ಜಿ.ಎಂ.ಆರ್.ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.

          ವೇದಿಕೆ ಕಾರ್ಯಕ್ರಮಕ್ಕೂ ಮುನ್ನ, ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ನಿವೃತ್ತಿ ಕಡ್ಡಾಯವಾಗಬೇಕೆ? ಎಂಬ ವಿಷಯದ ಕುರಿತು ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ, ಶಿಕ್ಷಕ ಜಗನ್ನಾಥ ನಾಡಿಗೇರ್ ಸಮ್ಮುಖದಲ್ಲಿ ಚರ್ಚಾ ಸ್ಪರ್ಧೆ ನಡೆಯಿತು. ನಂತರ ವಾಯ್ಸ್ ಆಫ್ ದಾವಣಗೆರೆ ಪ್ರಶಸ್ತಿ ವಿಜೇತರಾದ ಸಂಗೀತ ರಾಘವೇಂದ್ರ, ನವ್ಯಾ ಭಟ್, ಆರ್.ಪ್ರಶಾಂತ್, ಅಮಿತ್ ಶೇಖರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link