ಜನತಾ ಕಫ್ರ್ಯೂ: ಬಸ್ ಸಂಚಾರ ಪೂರ್ಣ ಸ್ಥಗಿತ

ದಾವಣಗೆರೆ:

   ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಣ ಮತ್ತು ಅದು ಹರಡದಂತೆ ತಡೆಯುವ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಕೆಎಸ್‍ಆರ್‍ಟಿಸಿ ಸೇರಿದಂತೆ ಖಾಸಗಿ ಬಸ್‍ಗಳ ಸೇವೆ ಸಹ ಸಂಪೂರ್ಣ ಸ್ಥಗಿತಗೊಂಡಿತ್ತು.

   ನಿತ್ಯವೂ ದಾವಣಗೆರೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದ 1,610 ಕೆಎಸ್‍ಆರ್‍ಟಿಸಿ ಬಸ್‍ಗಳು, ನಗರದ ಪ್ರೌಢಶಾಲಾ ಮೈದಾನದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಹಳೇ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿದ ನೂರಾರು ಖಾಸಗಿ ಬಸ್‍ಗಳು ಸಂಚಾರ ನಿಲ್ಲಿಸಿದ್ದವು. ಹೀಗಾಗಿ ಈ ಎರಡೂ ಬಸ್ ನಿಲ್ದಾಣಗಳು ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಅಲ್ಲದೆ, ಭಾನುವಾರ ಬೆಳಗಿನ ಜಾವ 4ರಿಂದ 5 ಗಂಟೆ ವೇಳೆಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್‍ಗಳು ತಾವು ತಲುಪಬೇಕಾಗಿದ್ದ ಊರುಗಳಿಗೆ ಪ್ರಯಾಣ ಬೆಳೆಸದೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

   ಈ ಬಗ್ಗೆ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಕೆಎಸ್‍ಆರ್‍ಟಿಸಿಯ ಸಂಚಾರಿ ನಿಯಂತ್ರಕ ಎಂ.ಜೆ.ಹಿತ್ತಲಮನಿ ಬೆಳಿಗ್ಗೆಯಿಂದ ಒಂದು ಬಸ್ ಸಹ ಸಂಚಾರ ಆರಂಭಿಸಿಲ್ಲ. ದಿನವೂ ನಮ್ಮ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದ 1,610 ಕೆಎಸ್‍ಆರ್‍ಟಿಸಿ ಬಸ್‍ಗಳ ಪೈಕಿ ಒಂದು ಸಹ ಬಂದಿಲ್ಲ. ನಮ್ಮ ಕೆಎಸ್‍ಆರ್‍ಟಿಸಿ ಸಂಸ್ಥೆಗೆ ಆದಾಯ ಮುಖ್ಯವಲ್ಲ. ಅದಕ್ಕಿಂತ ಆರೋಗ್ಯ ಮುಖ್ಯ ಹೀಗಾಗಿಯೇ ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಕರೆ ನೀಡಿರುವ ಜನತಾ ಕಫ್ರ್ಯೂ ಹಿನ್ನೆಲೆಯಲ್ಲೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಬೆಂಗಳೂರಿಗೆ ಹೋಗಬೇಕಾಗಿದ್ದ ಅಬ್ದುಲ್ ಎಂಬುವರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದು ಕೆಎಸ್‍ಆರ್‍ಟಿಸಿಯ ಸಂಚಾರಿ ನಿಯಂತ್ರಕರ ಬಳಿ ಬಂದು, ಈ ಬೆಂಗಳೂರಿಗೆ ಬಸ್ ಇದೆಯೇ? ಎಷ್ಟೊತ್ತಿಗೆ ಬಸ್‍ಗಳು ಸೇವೆ ಆರಂಭಿಸಲಿವೆ ಎಂಬುದಾಗಿ ಪ್ರಶ್ನಿಸಿದಕ್ಕೆ ಅಧಿಕಾರಿಯಿಂದ ರಾತ್ರಿಯ ವರೆಗೂ ಬಸ್ ಸಂಚಾರವಿಲ್ಲ ಎಂಬ ಉತ್ತರ ಬರುತ್ತಿದ್ದಂತೆಯೇ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ ಆದರು.

   ಇನ್ನೂ ಶನಿವಾರ ರಾತ್ರಿ ಬೆಂಗಳೂರಿನ ಮೆಜಸ್ಟಿಕ್‍ನಿಂದ ಬಸ್ ತೆಗೆದುಕೊಂಡು ಬಂದು ಭಾನುವಾರ ಬೆಳಿಗ್ಗೆ 5.45ಕ್ಕೆ ದಾವಣಗೆರೆ ನಿಲ್ದಾಣ ತಲುಪಿದ, ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಬಸ್ ಚಾಲಕ ಶಿವಕುಮಾರ್ ಪ್ರಜಾಪ್ರಗತಿಯೊಂದಿಗೆ ಮಾತನಾಡಿ, ರಾತ್ರಿ ಮೆಜಸ್ಟಿಕ್‍ನಲ್ಲೂ ಜನ ಕಾಣಸಿಗಲಿಲ್ಲ. ಅಲ್ಲಲ್ಲಿ ನಿಂತಿದ್ದ ಜನರನ್ನು ಪೊಲೀಸರು ಬೈದು ಕಳುಹಿಸುತ್ತಿದ್ದರು. ನಾನು 35 ಸೀಟು ಹಾಕಿಕೊಂಡು ದಾವಣಗೆರೆಗೆ ಬಂದಿದ್ದೇನೆ. ಈಗ ರಾತ್ರಿ ಬಸ್ ಸಂಚಾರ ಆರಂಭವಾಗುವ ವರೆಗೂ ಇಲ್ಲೇ ಕಾಲ ಕಳೆಯಬೇಕು ಎಂದು ತಿಳಿಸಿದರು.

     ಕೆಎಸ್‍ಆರ್‍ಟಿಸಿ ನಗರ ಸಾರಿಗೆ, ವಿನಾಯಕ ಹಾಗೂ ಮೈಲಾರಲಿಂಗೇಶ್ವರ ಖಾಸಗಿ ಸಿಟಿ ಬಸ್‍ಗಳು ಸಹ ಭಾನುವಾರ ನಗರದಲ್ಲಿ ಸಂಚಾರವನ್ನು ಸ್ಥಗಿತ ಗೊಳಿಸಿದ್ದವು. ಅಲ್ಲದೆ, ಆಟೋ ಸೇವೆಯು ಸ್ಥಗಿತಗೊಳಿಸಲಾಗಿತ್ತು. ಹೀಗೆ ಸಾರಿಗೆ ಸಂಪರ್ಕ ಕಡಿತಗೊಂಡಿದ್ದರೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಏಕೆಂದರೆ, ಪ್ರಧಾನಿಯವರ ಜನತಾ ಕಫ್ರ್ಯೂ ಬೆಂಬಲಿಸಿ ಬಹುತೇಕ ಸಾರ್ವಜನಿಕರು ಮನೆಗಳಿಂದ ಹೊರಗೆ ಬಾರದೆ ಸ್ವಯಂ ಗೃಹ ಬಂಧನಕ್ಕೆ ಒಳಪಟ್ಟು, ಕೊರೊನಾ ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link