ಜನತಾ ಕಫ್ರ್ಯೂ: ಇಡೀ ದೇವನಗರಿ ಸ್ತಬ್ಧ

ದಾವಣಗೆರೆ:

     ದೇಶದಲ್ಲಿ ವ್ಯಾಪಿಸಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶಾದ್ಯಂತ ಘೋಷಿಸಿರುವ ಜನತಾ ಕಫ್ರ್ಯೂಗೆ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಇಡೀ ನಗರವೇ ಸ್ತಬ್ಧವಾಗಿತ್ತು.

ಸ್ವಯಂ ನಿಯಂತ್ರಣ:

    ಭಾನುವಾರದ ಮಟ್ಟಿಗೆ ಜನ ಸಂಪರ್ಕ ತಡೆಯುವ ಮೂಲಕ ಕೊರೊನಾ ವೈರಸ್ ವ್ಯಾಪಿಸದಂತೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಜನತಾ ಕಫ್ರ್ಯೂನ ಉದ್ದೇಶವಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸ್ವಯಂ ಪ್ರೇರಿತವಾಗಿಯೇ ದಿನಸಿ ಅಂಗಡಿ, ಮೋರ್, ಬಿಗ್ ಬಜಾರ್ ಸೇರಿದಂತೆ ಎಲ್ಲಾ ಮಾಲ್‍ಗಳು, ತರಕಾರಿ ಮಾರುಕಟ್ಟೆ, ಹೋಟೆಲ್, ಪೆಟ್ರೋಲ್ ಬಂಕ್, ಮದ್ಯದ ಅಂಗಡಿ, ಆಟೋ ಹಾಗೂ ಬಸ್ ಸಂಚಾರ ಬಂದ್ ಮಾಡುವ ಮೂಲಕ ಕೊರೊನಾ ತಡೆಗೆ ಸ್ವಯಂ ನಿಯಂತ್ರಣ ಹೇರಿಕೊಂಡರು.

ಆರೋಗ್ಯ ಸೇವೆ ಅಭಾದಿತ:

    ಆದರೆ, ವೈದ್ಯಕೀಯ ಸೇವೆ ಒದಗಿಸುವ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬಿಕೋ ಎನ್ನುತ್ತಿದ್ದ ರಸ್ತೆಗಳು:

    ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿಕ ಬಹುತೇಕ ಸಾರ್ವಜನಿಕರು ಮನೆಗಳನ್ನು ಬಿಟ್ಟು ಹೊರ ಬರಲೇ ಇಲ್ಲ. ಹೀಗಾಗಿ ದಿನವೂ ಜನ ಸಂದಣಿಯಿಂದ ಗಿಜುಗುಡುತ್ತಿದ್ದ ರಸ್ತೆ, ಮಾರುಕಟ್ಟೆ, ಬಸ್, ರೈಲು ನಿಲ್ದಾಣಗಳು ಜನರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಅಲ್ಲದೆ, ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕುತೂಹಲಕ್ಕೆ ಫೋಟೋ ಶೂಟ್:

    ಆದರೆ, ಜನತಾ ಕಫ್ರ್ಯೂನ ಎಫೆಕ್ಟ್ ಹೇಗಿರುತ್ತದೆಂಬ ಕುತೂಹಲವಿದ್ದ ಬೆರಳೆಣಿಕೆಯಷ್ಟು ಹುಡುಗರು ಬೈಕ್‍ಗಳಲ್ಲಿ ನಗರ ಸುತ್ತಾಡಿ ತಮ್ಮ ಕೈಲಿದ್ದ ಮೊಬೈಲ್‍ಗಳಲ್ಲಿ ವಿಡಿಯೋ, ಫೋಟೋ ಶೂಟ್ ಮಾಡುತ್ತಿದ್ದ ದೃಶ್ಯ ಅಲಲ್ಲಿ ಕಂಡು ಬಂತು.ಸಾರ್ವಜನಿಕರು ಬೆಳಿಗ್ಗೆ ಎದ್ದು ನೋಡಿದರೆ, ಬಾಗಿಲು ಮುಂದೆ ದಿನ ಪತ್ರಿಕೆಗಳು ಇದ್ದವು. ಆದರೆ, ಟೀ, ಕಾಫಿ ಮಾಡಿಕೊಳ್ಳಲು ಹಾಲು ತರಲು ಹೋದರೆ, ಅಂಗಡಿ, ಬೇಕರಿ, ಹಾಲಿನ ಡೈರಿಗಳು ಬಂದ್ ಆಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ ಆದರು.

ಹಣವಿಟ್ಟು ಹಾಲು ತಗೊಂಡ್ರು:

   ಎವಿಕೆ ಕಾಲೇಜು ರಸ್ತೆಯಲ್ಲಿ ಹಾಲಿನ ಡೈರಿಯವರು ಎಂದಿನಂತೆ 38 ಟ್ರೇ ಹಾಲು ಇಳಿಸಿ ಹೋಗಿದ್ದರು. ಆದರೆ, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹಾಲು ವಿತರಕ ಬಾರದ ಕಾರಣದಿಂದ ಸಾರ್ವಜನಿಕರೇ ಹಾಲಿನ ಪ್ಯಾಕೇಟ್ ದರದ ಮೊತ್ತವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಹಾಲಿನ ಪ್ಯಾಕೇಟ್‍ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

   ಹೀಗೆ ಜನರು ಅಂದಾಜು 1500 ರೂ. ಹಣ ಇಟ್ಟು, ತಮಗೆ ಬೇಕಾದ ಹಾಲಿನ ಪ್ಯಾಕೇಟ್ ತೆಗೆದುಕೊಂಡು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಡೈರಿ ವ್ಯವಸ್ಥಾಪಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ನೆರವಿನೊಂದಿಗೆ ಉಳಿದಿದ್ದ ಹಾಲಿನ ಟ್ರೇಗಳನ್ನು, ಹಾಲಿನ ಪ್ಯಾಕೇಟ್‍ಗಳನ್ನು ಮತ್ತು ಅಲ್ಲಿ ಸಾರ್ವಜನಿಕರು ಇಟ್ಟು ಹೋಗಿದ್ದ ಹಣವನ್ನು ಹಾಲಿನ ವಾಹನದಲ್ಲಿ ಕಳುಹಿಸಿಕೊಟ್ಟರು.

ಭಣಗುಡುತ್ತಿದ್ದ ಮಾರ್ಕೇಟ್:

    ಇನ್ನೂ ಪ್ರತಿ ಭಾನುವಾರದಂದು ಸಂತೆಯ ಅಂಗಡಿಗಳಿಂದ ತುಂಬಿ ಹೋಗಿರುತ್ತಿದ್ದ ಕಾಯಿಪೇಟೆ, ಗಡಿಯಾರ ಕಂಬ, ಕೆ.ಆರ್.ಮಾರುಕಟ್ಟೆ, ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ತರಕಾರಿ ಮಾರುಕಟ್ಟೆ, ಪುಷ್ಪ ಹರಾಜು ಕೇಂದ್ರ, ಈರುಳ್ಳಿ ಮಾರುಕಟ್ಟೆ, ಬಟ್ಟೆ ಅಂಗಡಿಗಳು, ಭಾನುವಾರದ ಸಂತೆ ನಿಷೇಧ ಮತ್ತು ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಜನ ಜಂಗುಳಿ ಇಲ್ಲದೆ ಭಣ ಗೂಡುತ್ತಿದ್ದವು.

ಪೆಟ್ರೋಲ್ ಬಂಕ್ ಬಂದ್:

    ಕೊರೊನಾ `ಜನತಾ ಕಫ್ರ್ಯೂ’ ಆಂದೋಲನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‍ನ ನಗರದ ಎಲ್ಲಾ ಪೆಟ್ರೋಲ್ ಬಂಕ್ ಬಂದ್ ಮಾಡಿ ಬೆಂಬಲ ಸೂಚಿಸಿದ್ದರಿಂದ ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 9ರ ವರೆಗೆ ನಗರದಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡಲಾಗಿತ್ತು. ಹೀಗಾಗಿ ಡಿಸೇಲ್, ಪೆಟ್ರೋಲ್ ಮಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು.

   ಇನ್ನೂ ಇಂದಿನ ಜನತಾ ಕಫ್ರ್ಯೂಗೆ ದಾವಣಗೆರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘವು ಬೆಂಬಲ ಸೂಚಿಸಿ ಜಿಲ್ಲೆಯ ಮದ್ಯ ಮಾರಾಟ ಉದ್ಯಮವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಅಲ್ಲದೆ, ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಂಘವು ಕಫ್ರ್ಯೂಗೆ ಬೆಂಬಲ ಘೋಷಿಸಿದ್ದರಿಂದ ಹೋಟೆಲ್ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಹೋಟೆಲ್ ವ್ಯವಹಾರವನ್ನು ಸ್ಥಗಿತಗೊಳಿಸಿದ್ದರು.ಆಟೋ, ಸಿಟಿ ಬಸ್ ಸೇವೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ಒಟ್ಟಿನಲ್ಲಿ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಇಡೀ ದೇವನಗರಿ ಸಂಪೂರ್ಣ ಸ್ತಬ್ಧವಾಗಿತ್ತು. ದಾವಣಗೆರೆಯ ಇತಿಹಾಸದಲ್ಲಿಯೇ ಈ ರೀತಿ ಬಂದ್ ಆಗಿದ್ದ ವಾತಾವರಣವನ್ನು ನೋಡಿಯೇ ಇರಲಿಲ್ಲ ಎಂಬ ಚರ್ಚೆ ಆರಂಭವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap