ಚಿಕ್ಕನಾಯಕನಹಳ್ಳಿ
ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಇದ್ದರೂ ಕೋವಿಡ್ ಟೆಸ್ಟ್‍ಗೆ ಸಂಬಂಧಿಸಿದಂತೆ ವೈದ್ಯರಿಗೆ ಪ್ರತಿ ದಿನ ಗುರಿ ನಿಗದಿ ಮಾಡಿರುವುದರಿಂದ ವೈದ್ಯರ ಮೇಲೆ ಅಧಿಕ ಹೊರೆಯಾಗಿದೆ. ಹಾಗಾಗಿ ಸರ್ಕಾರ ವೈದ್ಯರಿಗೆ ಕೊರೋನಾ ನಿಮಿತ್ತ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ತಾಲ್ಲೂಕು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ತಹಸೀಲ್ದಾರ್‍ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಪಟ್ಟಣದ ತಾಲ್ಲೂಕು ಕಚೆರಿ ಮುಂಭಾಗ ತಹಸೀಲ್ದಾರ್ ತೇಜಸ್ವಿನಿರವರಿಗೆ ಮನವಿ ಸಲ್ಲಿಸಿದ ತಾಲ್ಲೂಕು ವೈದ್ಯರು, ವೈದ್ಯಾಧಿಕಾರಿಗಳು, ಕಳೆದ ಐದಾರು ತಿಂಗಳಿನಿಂದ ಕರೋನಾ ವಿರುದ್ದದ ಹೋರಾಟದಲ್ಲಿ ನಿರತರಾಗಿದ್ದು, ತುರ್ತು ಪರಿಸ್ಥಿತಿಯಲ್ಲೂ ಯಾವುದೇ ರಜೆ ಇಲ್ಲದೆ ಕಾಯಾ, ವಾಚಾ, ಮನಸಾ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಪ್ರತಿದಿನ ಕೋವಿಡ್ ವರದಿ ಸಂಬಂಧದಿಂದ ವೈದ್ಯರ ಮೇಲೆ ಅಧಿಕ ಹೊರೆ ಬೀಳುತ್ತಿದೆ. ಒಂದು ವೇಳೆ ಇದನ್ನು ಸಾಧಿಸಲು ವಿಫಲವಾದಲ್ಲಿ ಬೇರೆ ಇಲಾಖೆಯ ಆಡಳಿತ ವರ್ಗದ ಅಧಿಕಾರಿಗಳ ಹಸ್ತಕ್ಷೇಪ ಆಗುತ್ತಿರುವ ಹಾಗೂ ನೋಟಿಸ್ ನೀಡುವ ಪ್ರಕ್ರಿಯೆಯಿಂದ ನಮ್ಮೆಲ್ಲರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಈ ಕರೋನಾ ಸಂಕಷ್ಟದ ಸಮಯದಲ್ಲಿ ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರನ್ನು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಆಘಾತಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಸರ್ಕಾರ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು. ಒಂದು ವೇಳೆ ನಮ್ಮ ಮೇಲೆ ಇದೇ ಧೋರಣೆ ಮುಂದುವರೆದರೆ ಅನಿವಾರ್ಯವಾಗಿ ನಮ್ಮ ಕರ್ತವ್ಯಗಳನ್ನು ಸ್ಥಗಿತಗೊಳಿಸಿ, ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವೈದ್ಯ ನವೀನ್ ಮಾತನಾಡಿ, ನಂಜನಗೂಡಿನ ವೈದ್ಯರದ್ದು ಒಂದು ರೀತಿಯ ಕೊಲೆಯ ಕೃತ್ಯವಾಗಿದೆ. ನಂಜನಗೂಡಿನಲ್ಲಿ ಕೊರೋನಾ ಹೆಚ್ಚಿದ ಕಾರಣ ವೈದ್ಯರಿಂದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಸಿಕೊಂಡರು. ಅದರ ಹೆಗ್ಗಳಿಕೆಯನ್ನು ಐಎಎಸ್, ಕೆಎಎಸ್ ಅಧಿಕಾರಿಗಳು ಪಡೆಯುತ್ತಿದ್ದರು ಎಂದರಲ್ಲದೆ, ನಂಜನಗೂಡಿನಲ್ಲಿ ವೈದ್ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಚ್ಚೆತ್ತುಕೊಂಡು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ವೈದ್ಯರ ಕರ್ತವ್ಯದಲ್ಲಿ ತಪ್ಪಾದರೆ ಅವರ ಬಗ್ಗೆ ವಿಚಾರಣೆ ಮಾಡದೆ ಅವರನ್ನು ಅಮಾನತ್ತುಗೊಳಿಸಿ ಎಂದು ಆದೇಶಿಸುತ್ತಾರೆ ಹೊರತು, ಯಾವುದೇ ವಿಚಾರಣೆ ಮಾಡುವುದಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ವೈದ್ಯರು, ಸಿಬ್ಬಂದಿಯವರ ಕೊರತೆ ಇದ್ದರೂ ಸಹ ಕೊರೋನಾ ಜೊತೆ ಹೋರಾಡುತ್ತಿದ್ದೇವೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ಸಿಬ್ಬಂದಿಯನ್ನು ಒದಗಿಸಬೇಕು. ಕೊರೋನಾ ಜೊತೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಬೇಕು. ಕೊರೋನಾ ಜೊತೆ ಹೋರಾಡಲು ಆರೋಗ್ಯ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಯವರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯರುಗಳ ಸಂಘದ ಪದಾಧಿಕಾರಿಗಳಾದ ಮನೋಜ್, ವಿಜಯಭಾಸ್ಕರ್, ದಿಲೀಪ್, ವಿನಯ್ ಕುಮಾರ್, ಮಮತಾ, ಸವಿತಾ, ಕುಮಾರಸ್ವಾಮಿ, ಹರೀಶ್, ಭರತ್, ಹಿಮಶ್ವೇತ, ಮಧು, ಹರೀಶ್ ಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
