ದೇಶಕ್ಕಾಗಿ ಕೆಲಸ ಮಾಡುವವರನ್ನು ಬೆಂಬಲಿಸಿ

ದಾವಣಗೆರೆ:

        ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶಕ್ಕಾಗಿ ಕೆಲಸ ಮಾಡುವ ನಾಯಕರನ್ನು ವಿದ್ಯಾರ್ಥಿ-ಯುವಜನರು ಬೆಂಬಲಿಸಬೇಕೆಂದು ಎಂದು ಮಾಜಿ ಯೋಧ ಮಂಜಾ ನಾಯ್ಕ ಕರೆ ನೀಡಿದರು.

        ನಗರದ ರೇಣುಕಾ ಮಂದಿರದಲ್ಲಿ ಮಂಗಳವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿದ್ಯಾರ್ಥಿ ಮತದಾರರ ಜಾಗೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತವು ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿದೆ.

        ಇಲ್ಲಿಯ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕಿದೆ. ಹೀಗಾಗಿ ಯಾರಿಗೆ ಮತ ನೀಡಿದರೆ, ಸೂಕ್ತ ಎನಿಸುತ್ತದೋ ಅಂತಹವರಿಗೆ ಮತ ನೀಡಿ. ಚುನಾವಣಾ ಕಣದಲ್ಲಿರುವ ಯಾವ ಅಭ್ಯರ್ಥಿಯೂ ಇಷ್ಟವಾಗದಿದ್ದರೆ, ನೋಟಾ ಬಟನ್ ಒತ್ತಿಯಾದರೂ ಮತ ಚಲಾಯಿಸಬೇಕೆಂದು ಕಿವಿಮಾತು ಹೇಳಿದರು.

          ಸಮಾಜದ ಬದಲಾವಣೆ ಬಯಸುವ ಪ್ರತಿಯೊಬ್ಬರೂ ಪರಿವರ್ತನೆಯಾಗುವುದರ ಜೊತೆಗೆ ನಡೆ-ನುಡಿಯನ್ನು ಶುದ್ಧವಾಗಿಟ್ಟು ಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಆಗ ತನ್ನ, ತಾನೇ ದೇಶಪ್ರೇಮ ಬರಲಿದೆ ಎಂದರು.ದೇಶದಲ್ಲಿಂದು ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ, ಕರ್ನಾಟಕದಲ್ಲಿ ಆ ಸಮಸ್ಯೆ ಇಲ್ಲ. ಇದಕ್ಕೆ ಹಗಲು-ರಾತ್ರಿ ಎನ್ನದೇ ಕುಟುಂಬ-ಸಂಸಾರದ ಹಂಗು ತೊರೆದು ಗಡಿ ಕಾಯುವ ಸೈನಿಕರು ಕಾರಣವಾಗಿದ್ದಾರೆ. ಯೋಧರು ಗಡಿಯಲ್ಲಿ ಕರ್ತವ್ಯ ನಿರ್ವಹಿಸುವುದು ಸುಲಭವಲ್ಲ. ಅನೇಕ ಕಾಯಿಲೆ, ಹವಾಮಾನ ವೈಪರಿತ್ಯ ಎಲ್ಲವನ್ನೂ ಸಹಿಸಿಕೊಂಡು ದೇಶದ ಸೇವೆ ಮಾಡುವುದೊಂದೇ ಯೋಧರ ಪರಮ ಗುರಿ ಆಗಿರುತ್ತದೆ ಎಂದರು.

         ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆಸಿದ ಪರಿಣಾಮ 44ಕ್ಕೂ ಹೆಚ್ಚು ಯೋಧರರು ಹುತಾತ್ಮರಾಗಿದ್ದಾರೆ. ಇದು ಹೇಡಿತನದ ಕೃತ್ಯವಾಗಿದೆ. ಉಗ್ರರಿಗೆ ನೇರ ಯುದ್ಧಮಾಡುವ ಸಾಮಥ್ರ್ಯವಿಲ್ಲ ಎಂದ ಅವರು, ಇದು ಕೇವಲ ಯೋಧರ ಮೇಲಿನ ದಾಳಿಯಲ್ಲ, ಇಡೀ ಭಾರತೀಯರ ಮೇಲೆ ನಡೆಸಿದ ದಾಳಿಯಾಗಿದೆ. ಇಂತಹ ದೇಶ ವಿರೋಧಿ ಕೃತ್ಯವನ್ನು ಪ್ರತಿಯೊಬ್ಬರು ಖಂಡಿಸಬೇಕೆಂದು ಕರೆ ನೀಡಿದರು.

         ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮಂಗಳವಾರ ಮುಂಜಾನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸುಮಾರು 300 ಉಗ್ರರನ್ನು ಬಲಿ ಪಡೆದಿರುವುದು ಅತ್ಯಂತ ಅವಿಸ್ಮರಣೀಯ ಘಟನೆಯಾಗಿದೆ. ಸೈನಿಕರ ರಕ್ಷಣೆಯಿಂದಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಆದ್ದರಿಂದ ಯುವ ಸಮೂಹ ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸಿ, ಅನ್ಯಾಯದ ವಿರುದ್ಧ ದನಿ ಎತ್ತಬೇಕೆಂದು ಕರೆ ನೀಡಿದರು.
ಉಗ್ರರು ಯುವಕರಿಗೆ ಹಣದ ಆಮಿಷ ತೋರಿಸುವ ಮೂಲಕ ತಲೆ ಕೆಡಿಸಿ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುವಂತೆ ಪ್ರೇರಣೆ ನೀಡುತ್ತಾರೆ. ಆದ್ದರಿಂದ ಯುವ ಸಮೂಹ ನಿತ್ಯವೂ ಜಾಗೃತವಾಗಿರಬೇಕು. ನಮ್ಮ ಸುತ್ತ ಯಾರೇ ದೇಶವಿರೋಧಿ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದಲ್ಲಿ ದೇಶದ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ಸಲಹೆ ನೀಡಿದರು.

          ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಎಸ್.ಟಿ. ವೀರೇಶ್ ಮಾತನಾಡಿ, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಭಾರತದ 44ಕ್ಕೂ ಹೆಚ್ಚು ವೀರಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಮ್ಮ ಭಾರತೀಯ ವಾಯು ಸೇನೆ ಯುದ್ಧ ವಿಮಾನ ಬಳಸಿಕೊಂಡು ಮಂಗಳವಾರ ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದ ಉಗ್ರರ ಬಿಡಾರಗಳ ಮೇಲೆ ದಾಳಿ ನಡೆಸಿ, 300ಕ್ಕೂ ಉಗ್ರರ ಹುಟ್ಟಡಗಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

           ಮೊಘಲರು, ಬ್ರಿಟೀಷರು ಸೇರಿದಂತೆ ಎಲ್ಲರೂ ಭಾರತದ ಸಂಪತ್ತು ಕೊಳ್ಳೆ ಹೊಡೆದಿದ್ದರೂ ದೇಶ ಸಂಪದ್ಭರಿತವಾಗಿದೆ. ಹಿಂದೆ ಸಮರ್ಥ ನಾಯಕತ್ವವಿಲ್ಲದೇ ದೇಶ ಹಿಂದುಳಿಯಲು ಕಾರಣವಾಗಿದೆ. ಆದರೆ, ಮೋದಿ ಅವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಭಾರತದತ್ತ ಇಡೀ ಜಗತ್ತೇ ಮುಖ ಮಾಡುವಂತೆ ಮಾಡಿದ್ದಾರೆ. ಮೊನ್ನೆ ನಡೆದ ದಾಳಿಗೂ ಪ್ರತೀಕಾರ ತೀರಿಸಲು ಸೇನೆಗೆ ಸ್ವಾತಂತ್ರ್ಯ ನೀಡಿದ್ದಾರೆ. ಇಂತಹ ಮಹಾನ್ ನಾಯಕನನ್ನು ಮೊತ್ತೊಮ್ಮೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

          ಎಬಿವಿಪಿ ವಿಭಾಗೀಯ ಪ್ರಮುಖ್ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಾಧ್ಯಕ್ಷ ಪ್ರದೀಪ್, ಜಿಲ್ಲಾ ಸಂಚಾಲಕ ರಾಮು ವರ್ಣೇಕರ್, ಹರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link