ಕೊನೆಗೂ ಡಿಕೆಶಿಗೆ ಬುದ್ಧಿ ಬಂತಲ್ಲ: ಎಸ್ಸೆಸ್

ದಾವಣಗೆರೆ:

      ಈಗಲಾದರೂ ಸಚಿವ ಡಿ.ಕೆ.ಶಿವಕುಮಾರ್‍ಗೆ ಬುದ್ಧಿ ಬಂತಲ್ಲ. ವೀರಶೈವ ಲಿಂಗಾಯತ ಸಮಾಜವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಒಡೆದು ತಪ್ಪು ಮಾಡಿದೆಯೆಂಬ ಡಿಕೆಶಿ ಹೇಳಿಕೆ ಸರಿಯಾಗಿಯೇ ಇದೆ ಎಂದು ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಂಪ್ಪ ತಿಳಿಸಿದ್ದಾರೆ.

      ಶುಕ್ರವಾರ ತಮ್ಮ ನಿವಸಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ ವೀರಶೈವ ಲಿಂಗಾಯತ ಸಮಾಜವನ್ನು ಒಡೆದಿದ್ದೇ ಕಾಂಗ್ರೆಸ್ಸಿನ ಹಿನ್ನಡೆಗೆ ಕಾರಣ ಎಂಬುದಾಗಿ ಸತ್ಯವನ್ನೇ ಹೇಳಿದ್ದಾರೆ. ಹಿಂದೆ ಸಿದ್ದರಾಮಯ್ಯ ಇದೇ ಎಂ.ಬಿ.ಪಾಟೀಲ, ವಿನಯ್ ಕುಲಕರ್ಣಿ ಒತ್ತಡಕ್ಕೊಳಗಾಗಿ ಸಮಾಜ ಒಡೆಯುವ ಕೆಲಸ ಮಾಡಿದರು ಎಂದು ಆರೋಪಿಸಿದರು.

    ಸಚಿವ ಡಿ.ಕೆ.ಶಿವಕುಮಾರ್ ಹಿಂದಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಸ್ವತಂತ್ರ ಧರ್ಮದ ಹೆಸರಿನಲ್ಲಿ ಒಡೆದು ತಪ್ಪು ಮಾಡಿದ್ದೇವೆಂಬುದಾಗಿ ಕ್ಷಮೆಯಾಚಿಸಿದ್ದಾರೆ. ಆದರೆ, ಇದಕ್ಕೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ, ವಿನಯ್ ಕುಲಕರ್ಣಿ ಆಕ್ಷೇಪ ಎತ್ತಿರುವುದು ಸರಿಯಲ. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಎಂ.ಬಿ.ಪಾಟೀಲ ಹಾಗೂ ವಿನಯ್ ಕುಲಕರ್ಣಿ ಈಗ ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇವರಿಬ್ಬರೇ ಸುಪ್ರೀಮಾ? ಎಂದು ಪ್ರಶ್ನಿಸಿದ ಅವರು, ಇವರಿಬ್ಬರು ಡಿಕೆಶಿ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುವುದಾಗಿ ಹೇಳಿದ್ದಾರೆ. ನಮಗೂ ಪಾಟೀಲ್, ಕುಲಕರ್ಣಿ ವಿರುದ್ಧ ವರಿಷ್ಟರಿಗೆ ನೀಡಲು ಬರುವುದಿಲ್ಲವೇ? ನಾವು ಸಹ ಈ ಇಬ್ಬರ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತೇವೆಂದು ಸೂಚ್ಯವಾಗಿ ಎಚ್ಚರಿಸಿದರು.

      ಧರ್ಮ ಒಡೆದ ಕಾರಣಕ್ಕೆ ಸೋತು ಮನೆ ಸೇರಿದ್ದ, ಇವರಿಬ್ಬರೂ ಡಿ.ಕೆ.ಶಿವಕುಮಾರ ಮಾತಿನಿಂದ ಎಚ್ಚರವಾದಂತೆ ಕಾಣುತ್ತಿದೆ. ಸಮಾಜ ಒಡೆಯುವ ಕೆಲಸ ಯಾರೇ ಮಾಡಿದರೂ ಅದಕ್ಕೆ ನಮ್ಮ ವಿರೋಧ ಇದೆ. ಇನ್ನಾದರೂ ಈ ಇಬ್ಬರೂ ವೀರಶೈವ ಲಿಂಗಾಯತ ಸಮಾಜ ಒಡೆಯುವುದನ್ನು ಬಿಟ್ಟು, ಬಸವಣ್ಣನವರು ಹೇಳಿದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಪಾಟೀಲ ಹಾಗೂ ಕುಲ್ಕರ್ಣಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು, ಛಿದ್ರ ಮಾಡಬಾರದು ಎಂದು ಸಲಹೆ ನೀಡಿದರು.

      ಕರ್ನಾಟಕವೆಂದು ಹೆಸರಿಟ್ಟರೆ ವೀರಶೈವ ಲಿಂಗಾಯತ ಪ್ರಾಬಲ್ಯವೇ ರಾಜ್ಯದಲ್ಲಿ ಹೆಚ್ಚಾಗುತ್ತದೆಂಬ ಕಾರಣಕ್ಕೆ ಕೆಲವರು ಅಡ್ಡಿಪಡಿಸಿದ್ದರು. ಕ್ರಮೇಣ ಕರ್ನಾಟಕವೆಂದು ನಾಮಕರಣಗೊಂಡಿತು. ಉಪ ಜಾತಿಗಳನ್ನು ಹೊರತುಪಡಿಸಿದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.25 ಜನಸಂಖ್ಯೆ ಇರುವ ವೀರಶೈವ ಲಿಂಗಾಯತವೇ ರಾಜ್ಯದ ಅತೀ ದೊಡ್ಡ ಜನಾಂಗವಾಗಿದ್ದು, 2ನೇ ಸ್ಥಾನದಲ್ಲಿ ಒಕ್ಕಲಿಗ ಸಮಾಜವಿದೆ ಎಂದರು.

     ಅಂಗದ ಮೇಲಿನ ಲಿಂಗವನ್ನು ಅಂಗೈ ಮೇಲಿಟ್ಟುಕೊಂಡು ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯತರಾಗಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಒಳ ಪಂಗಡಗಳನ್ನು ಮರೆತು, ಗಂಡು-ಹೆಣ್ಣು ಕೊಡುವ ಮತ್ತು ತಗೆದುಕೊಳ್ಳುವ ಕಾರ್ಯ ಆರಂಭವಾಗಬೇಕು. ಯಾರೂ ಏನೇ ಹೇಳಿದರೂ ವೀರಶೈವ ಲಿಂಗಾಯತ ಒಂದೇ ಎಂದು ಅವರು ಪುನರುಚ್ಛರಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap