ದಾವಣಗೆರೆ:
ಬಂಟ್ವಾಳ ತಾಲೂಕಿನ ಭಾರತ ಕಮ್ಯುನಿಷ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವ ದುಷ್ಕøತ್ಯ ಖಂಡಿಸಿ ಸಿಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಿಪಿಐ ಕಾರ್ಯಕರ್ತರು, ಬಂಟ್ವಾಳದ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರು ಪ್ರವೇಶ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಆರ್‍ಎಸ್‍ಎಸ್ ಕಾರ್ಯಕರ್ತರು ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಿದರು.
ಕಮ್ಯುನಿಸ್ಟ್ ಪಕ್ಷವು ಮಹಿಳೆಯರ ಹಕ್ಕಿಗಾಗಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ. ಮಹಿಳೆಯರ ಹಕ್ಕುಗಳಿಗೆ ಧಕ್ಕೆ ಬಂದಾಗಲೆಲ್ಲಾ ಕಮ್ಯುನಿಸ್ಟ್ ಪಕ್ಷ ಖಂಡಿಸುತ್ತಾ ಬಂದಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿಗೆ ಬಿಜೆಪಿಯ ವಿರೋಧವಿದೆ. ಆರ್‍ಎಸ್‍ಎಸ್ ಸಿದ್ಧಾಂತದಂತೆ ಮಹಿಳೆಯರು, ದಲಿತರನ್ನು ನಿರ್ಲಕ್ಷಿಸಿ ಮನುವಾದದಡಿ ರಾಷ್ಟ್ರ ಕಟ್ಟಬೇಕೆಂಬ ಮನೋಭಾವ ಬಿಜೆಪಿಗೆ, ಆರ್‍ಎಸ್‍ಎಸ್‍ಗೆ ಇದೆ. ಹೀಗಾಗಿ, ಮತ್ತೊಂದು ಪಕ್ಷದ ಕಚೇರಿಗೆ ಬೆಂಕಿ ಹಚ್ಚುವ ಮೂಲಕ ಹೇಡಿತನ ಪ್ರದರ್ಶಿಸಿವೆ. ಸಿಪಿಐ ಕಚೇರಿ ಬೆಂಕಿ ಹಚ್ಚಿರುವ ಆರೋಪಿಗಳ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆನಂದರಾಜ್, ಆವರೆಗೆರೆ ಉಮೇಶ್, ಆವರಗೆರೆ ಚಂದ್ರು, ಐರಣಿ ಚಂದ್ರು, ರಂಗನಾಥ್, ಆವರಗೆರೆ ವಾಸು, ಯರಗುಂಟೆ ಸುರೇಶ್, ವಿಶಾಲಾಕ್ಷಮ್ಮ, ಮೃತ್ಯುಂಜಯ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
