ತುಮಕೂರು : ಮನೆ ಬಾಗಿಲಿಗೆ ಹಣ್ಣು, ತರಕಾರಿ

ತುಮಕೂರು

    ಕೊರೊನಾ ಹರಡುವುದನ್ನು ತಡೆಯಲು ದೇಶವೇ ಲಾಕ್‍ಡೌನ್ ಆಗಿರುವ ಕಾರಣ ಜನ ಮನೆಯಿಂದ ಹೊರಬಾರದಂತೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಸ್ಥಿತಿಯಲ್ಲಿ ಸಾರ್ವಜನಿಕರು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುವಂತಾಗಿದೆ.

     ಹಣ್ಣು, ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗಲಾರದ ಪರಿಸ್ಥಿತಿಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‍ಕಾಮ್ಸ್ ಹಾಗೂ ರೈತ ಉತ್ಪಾದಕರ ಸಂಸ್ಥೆಗಳ ಆಶ್ರಯದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತಾಜಾ ತರಕಾರಿ, ಹಣ್ಣು ತಂದು ಮಾರುವ ವ್ಯವಸ್ಥೆ ಆರಂಭಿಸಲಾಗಿದೆ.

    ಸದ್ಯ, ಆರು ಮೊಬೈಲ್ ವೆಂಡಿಂಗ್ ವ್ಯಾನ್‍ಗಳು ಬಡಾವಣೆಗಳ ನಿಗಧಿಪಡಿಸಿದ ಜಾಗದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರು ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಮುಂದಿನ ದಿನಗಳಲ್ಲಿ ತುಮಕೂರಿನ ಎಲ್ಲಾ ಬಡಾವಣೆಗಳು ಹಾಗೂ ಜಿಲ್ಲೆಯಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು. ಕೊರೊನಾ ವೈರಸ್ ಹರಡದಂತೆ ತಡೆಯಲು ಹಣ್ಣು, ತರಕಾರಿಯನ್ನು ಕೊಳ್ಳಲು ಜನ ಮಾರುಕಟ್ಟೆಗೆ ಹೋಗುವುದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ಕಾರ್ಯಕ್ರಮ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಬಿ. ರಘು ಹೇಳಿದರು.

    ರೈತರಿಂದ ಕೊಂಡು, ನೇರವಾಗಿ ಗ್ರಾಹಕರ ಬಳಿಗೆ ತಲುಪಿಸುವ ಈ ಕಾರ್ಯಕ್ಕೆ ನಗರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಾಜಾ ಹಣ್ಣು, ತರಕಾರಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂದು ಕೋರಿದರು.

    ಕೊರೊನಾ ಹರಡುವ ಆತಂಕದಲ್ಲಿ ಮೊಬೈಲ್ ವೆಂಡಿಂಗ್ ವ್ಯಾನ್‍ಗಳು ನಿಲುಗಡೆ ಮಾಡಿದ ಸ್ಥಳದಲ್ಲಿ ನೂಕುನುಗ್ಗಲಾಗದಂತೆ ನಾಗರೀಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ, ಬಟ್ಟೆ ಬ್ಯಾಗ್ ತಂದು ಖರೀದಿ ಮಾಡಬೇಕು. ವ್ಯಾನ್‍ನಲ್ಲಿರುವ ಮಾರಾಟಗಾರರೂ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿರುತ್ತಾರೆ ಎಂದು ಹೇಳಿದರು.

    ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ವಿಜಯ್ ಗೌಡ ಮಾತನಾಡಿ, ಜಗತ್ತಿನಾದ್ಯಂತ ಕೊರೊನಾ ಭೀತಿ ಹೆಚ್ಚಾಗಿದೆ. ಜನ ಮನೆಯಿಂದ ಹೊರಬರಲು ಹೆದರುವಂತಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಸಂದರ್ಭದಲ್ಲಿ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ ತಲುಪಿಸುವ ಯೋಜನೆಗೆ ಚಾಲನೆ ಮಾಡಲಾಗಿದ್ದು, ನಾಗರೀಕರು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

    ಮುಂದೆ ಜಿಲ್ಲೆಯಾದ್ಯಂತ ಈ ಸೇವೆ ವಿಸ್ತರಿಸುವ ಉದ್ದೇಶವಿದೆ. ಮಧ್ಯವರ್ತಿಗಳಿಲ್ಲದೆ ರೈತರಿಂದ ಹಣ್ಣು, ತರಕಾರಿ ಖರೀದಿ ಮಾಡಿ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ಈ ಯೋಜನೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವ್ಯಕ್ತಪಡಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಮೊಬೈಲ್ ವೆಂಡಿಂಗ್ ವ್ಯಾನ್‍ಗಳು ಈ ಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತವೆ.

     ಹನುಮಂತಪುರ, ಕುವೆಂಪು ನಗರ ವೃತ್ತ, ವಿದ್ಯಾನಗರದ ವಿವೇಕಾನಂದ ವೃತ್ತ, ಶಿವಕುಮಾರಸ್ವಾಮೀಜಿ ವೃತ್ತ, ಬಟವಾಡಿ ಪೆಟ್ರೋಲ್ ಬಂಕ್ ಬಳಿ, ಮಹಾಲಕ್ಷ್ಮಿ ನಗರ, ಜಯನಗರದ ಸಂಕ್ರಾಂತಿ ಸ್ಟೋರ್ಸ್ ಬಳಿ, ಜಯನಗರ ಅನ್ನಪೂಣೇಶ್ವರಿ ಬೇಕರಿ ಬಳಿ, ಶೆಟ್ಟಿಹಳ್ಳಿ ವೃತ್ತ, ಗೋಕುಲ ಬಡಾವಣೆ, ಬಡ್ಡಿಹಳ್ಳಿ ವೃತ್ತ, ಗೋಕುಲ ವೃತ್ತ, ಎಸ್‍ಎಸ್ ಪುರಂನ ನಮ್ಮೂರ ಆಹಾರ್ ಬಳಿ, ಕೆಂಪಣ್ಣ ಅಂಗಡಿ ವೃತ್ತ, ಸಿದ್ದೇಶ್ವರ ಕಲ್ಯಾಣ ಮಂಟಪ ಬಳಿ, ಎಸ್‍ಐಟಿ ಬ್ಯಾಕ್ ಗೇಟ್, ಬಿ.ಹೆಚ್. ರಸ್ತೆ ವೃತ್ತ ಇಲ್ಲಿ ಮೊಬೈಲ್ ವೆಂಡಿಂಗ್ ವ್ಯಾನ್‍ಗಳು ನಿಲ್ಲಲಿದ್ದು ನಾಗರೀಕರು ಹಣ್ಣು, ತರಕಾರಿ ಕೊಳ್ಳಬಹುದು.

      ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಬಡಾವಣೆಗಳಿಗೂ ಹೆಚ್ಚುವರು ಮೊಬೈಲ್ ವೆಂಡಿಂಗ್ ವ್ಯಾನ್‍ಗಳ ಸೇವೆ ಒದಗಿಸಿ ನಿಗಧಿತ ಸ್ಥಳ ಹಾಗೂ ಸಮಯ ನಿಗಧಿ ಮಾಡಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಬಿ. ರಘು ಹೇಳಿದರು.
ಗ್ರಾಹಕರು ತಮಗೆ ಬೇಕಾದ ಹಣ್ಣು, ತರಕಾರಿ ಕಾಯ್ದಿರಿಸಲು ಈ ಸಿಬ್ಬಂದಿಯನ್ನು ಸಂಪರ್ಕಿಸಿ, ಪಡೆಯಬಹುದು: ಮಾರೇಗೌಡ-9620465588, ಚೆಲುವರಾಜು-9611351424, ಜಗದೀಶ್-9611442080, ಬಸವರಾಜು-8105106967.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap