ಅಮಾನಿಕೆರೆ ಮಂಜಣ್ಣ ಅವರಿಗೆ ಸನ್ಮಾನ..!!

ತುರುವೇಕೆರೆ:

        ತಾಲ್ಲೋಕಿನಲ್ಲಿ ಅಮಾನಿಕೆರೆ ಮಂಜಣ್ಣ ಎಂಬ ಹೆಸರನ್ನು ಕೇಳದವರೇ ಅಪರೂಪ. ಎಲ್ಲಾ ರಂಗಗಳಲ್ಲೂ ಇವರು ಮಾಡಿರುವ ಸಾಧನೆ ಸಾಮಾನ್ಯವೇನಲ್ಲ. ಪರಿಸರ ವಾದಿ, ಸಮಾಜಸೇವಕ, ಉತ್ತಮ ಭಾಷಣಕಾರ ಕೂಡ. ಜೊತೆಗೆ ಪ್ರಗತಿಪರ ಕೃಷಿಕನೂ ಹೌದು. ಇವರ ಸಾಧನೆ ಒಂದೇ ಎರಡೇ, ಎಲ್ಲ ರಂಗಗಳಲ್ಲಿಯೂ ಅದ್ವಿತೀಯ ಸೇವೆಗೈದಿದ್ದಾರೆ. ಧಾರ್ಮಿಕ ರಂಗದಲ್ಲಿಯೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದಕ್ಕೆ ಕುಗ್ರಾಮವೊಂದರಲ್ಲಿ ಸ್ಥಳೀಯರ ಸಹಕಾರ ಪಡೆದು ಶ್ರೀ ಶನಿದೇವರ ದೇವಸ್ಥಾನ ನಿರ್ಮಾಣ ಮಾಡಿ ಸಾವಿರಾರು ಭಕ್ತರನ್ನು ಆಕರ್ಷಿಸುವಂತೆ ಮಾಡಿರುವುದಲ್ಲದೆ, ಸರ್ಕಾರವೂ ಸಹ ಮಾಡದ ಅದೆಷ್ಟೋ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಆ ಗ್ರಾಮವನ್ನು ಸುಗ್ರಾಮವಾಗಿಸುವಲ್ಲಿ ಇವರ ಪಾತ್ರ ಅಪಾರ.

         ಎಲ್ಲಕ್ಕಿಂತ ಮಿಗಿಲಾಗಿ ರಂಗಭೂಮಿ ಕಲಾವಿದ ಹಾಗು ಪೋಷಕರಾಗಿ ಅವರದ್ದು ಬಹುಮುಖ ಪ್ರತಿಭೆ. ಟಿ.ಎನ್.ಮಂಜುನಾಥ್ (ಅಮಾನಿಕೆರೆ)ರವರು ತಾಲೂಕಿನಲ್ಲಿ ಮೂಲೆಗುಂಪಾಗಿದ್ದ ರಂಗಕಲೆಯನ್ನು ಜೀವಂತಗೊಳಿಸಲು ತಾಲ್ಲೂಕು ಕಲಾವಿದರ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ಅಷ್ಟಿಷ್ಟಲ್ಲ. 

          ಇವರು 43 ಬಾರಿ ವೀರ ಅಭಿಮನ್ಯುವಿನ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಲ್ಲದೆ, ರಾಜ್ಯಾದ್ಯಂತ 100 ರಂಗಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈಗಾಗಲೇ 43 ರಂಗಸೌರಭ ಕಾರ್ಯಕ್ರಮಗಳನ್ನು ನಾನಾ ಭಾಗಗಳಲ್ಲಿ ನೀಡಿದ್ದು ಇನ್ನು 57 ರಂಗಸೌರಭ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಇವರ ಕಲಾಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳು ರಂಗಕಲಾ ಚತುರ ಮತ್ತು ಗಂಗಕೌಸ್ತುಭ ಎಂಬ ಬಿರುದುಗಳನ್ನೂ ಸಹ ದಯಪಾಲಿಸಿವೆ.

         ಮಂಜುನಾಥ್ ರವರು ಕೇವಲ ಕಲೆಗೆ ಮಾತ್ರ ಪ್ರೋತ್ಸಾಹ ನೀಡಿರುವುದಲ್ಲದೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಅಮಾನಿಕೆರೆ ಮಂಜುನಾಥ್ ಅಭಿಮಾನಿ ಸಂಘ ಹಾಗು ಇವರ ಧಾರ್ಮಿಕ ಸೇವೆಯನ್ನು ಗುರ್ತಿಸಿ ಹತ್ತಿಕುಳ್ಳೆಪಾಳ್ಯದ ಗ್ರಾಮಸ್ಥರು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಂಜುನಾಥ್ ಅವರನ್ನು ಗೌರವಿಸಿವೆ. ಕಲಾ ಕೇತ್ರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಮಾನಿಕೆರೆ ಮಂಜುನಾಥ್ ರವರಿಗೆ ಇತ್ತೀಚೆಗಷ್ಟೆ “ಅಮಾನಿಕೆರೆ ಮಂಜುನಾಥ್ ಅಭಿಮಾನಿ” ಬಳಗದ ವತಿಯಿಂದ “ಬೆಳ್ಳಿ ಕಿರೀಟ ಧಾರಣೆ” ಸಮರ್ಪಣೆ ಮಾಡಿ ಗೌರವಿಸಿತು.

          ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಇವರು ವೃತ್ತಿಯಲ್ಲಿ ಎಲ್.ಐ.ಸಿ. ಛೇರ್ಮನ್ ಲೈಫ್ ಮೆಂಬರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು 2018-19 ನೇ ಆರ್ಥಿಕ ವರ್ಷದಲ್ಲಿ ಒಂದೇ ಪಾಲಸಿಯ ಮೆಲೆ ಒಂದು ಕೋಟಿಗೂ ಮೀರಿದ ವಿಮಾ ಮೊತ್ತದ ವ್ಯವಹಾರ ಮಾಡಿ ತುರುವೇಕೆರೆ ಉಪಶಾಖೆಯಲ್ಲಿ ಅಧ್ಬುತ ಸಾದನೆ ಮಾಡಿದ್ದು ಅವರ ಮತ್ತೊಂದು ಮೈಲಿಗಲ್ಲಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರ ಸಾಧನೆಗಳಿಗೆ ಮೆಚ್ಚಿ ತಾಲ್ಲೋಕಿನ ಶಾಸಕರಾದಿಯಾಗಿ, ಹಿರಿಯ ರಂಗಕಲಾವಿದರು, ಅಧಿಕಾರಿ ವರ್ಗ, ಬಂಧುಮಿತ್ರರಾದಿಯಾಗಿ ಎಲ್ಲರೂ ಇವರನ್ನು ಅಭಿನಂದಿಸಿರುವುದು ನಿಜಕ್ಕೂ ಶ್ಲಾಘನೀಯ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link