ಹೊಸದುರ್ಗ:
ಇಲ್ಲಿನ ರಾಜಕೀಯ ನಾಯಕರು ಭದ್ರಾ ನೀರು ಹರಿಸುತ್ತೇವೆಂದುಬೊಗಳೆ ಬಿಡುತ್ತಲೇಚುನಾವಣೆ ಮುಗಿಸಿದ್ದಾರೆ. ಹೊಸದುರ್ಗ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಜಲ ಕಂಟಕವಾಗಿಬಿಟ್ಟಿದೆ. ಪ್ರತಿನಿತ್ಯವೂ ಕೂಡ ಕುಡಿಯುವ ನೀರು ಜನರ ನೆಮ್ಮದಿ ಕಸಿಯುತ್ತಿದೆ . ಬಿಸ್ಲೆರಿ ನೀರು ಕುಡಿಯುವ ಅಧಿಕಾರಿಗಳು ನೀರಿನ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ.
ಪಟ್ಟಣವು ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹಿಂದೆಂದೂ ಸಹ ಕಂಡರಿಯದಂತಹ ಭೀಕರ ಜಲಕ್ಷಾಮ ಉಂಟಾಗಿದೆ . ಬಿಸಿಲಿನ ತಾಪಕ್ಕೆ ಜನರು ಬಸವಳಿದು ಹೋಗುತ್ತಿದ್ದಾರೆ . ಹಾಗೆಯೇ ಹನಿ ಹನಿ ನೀರಿಗೂಸಹ ಬಾಯಿ ಬಿಡುವ ದುಸ್ದಿತಿ ಉಂಟಾಗಿದೆ .ಒಟ್ಟೂಟ್ಟಿಗೆ ಎರಡೆರಡು ಸಮಸ್ಯೆಗಳು ರಾಹುಕೇತುವಿನಂತೆ ಎದುರಾಗಿವೆ . ಒಂದೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದರೆ ಮತ್ತೊಂದೆಡೆ ಭೀಕರ ನೀರಿನ ಸಮಸ್ಯೆ ಈ ಎರಡೂ ವಿಚಾರದಲ್ಲಿ ತಾಲ್ಲೂಕಿನ ಜನತೆಯ ಮೇಲೆ ಶನಿ ಹೆಗಲೇರಿದ್ದಾನೆ.
ತಾಲ್ಲೂಕಿನ ಬಹು ಕಡೆ ಕೊಳವೆ ಭಾವಿಗಳು ಬತ್ತಿ ಹೋಗಿವೆ.800 ರಿಂದ 900 ಅಡಿಯಷ್ಟು ಕೊಳವೆ ಭಾವಿ ಕೊರೆಸಿದರೂ ನೀರು ಬೀಳುತ್ತಿಲ್ಲ. ಕೆರೆ, ಕಟ್ಟೆ, ಚೆಕ್‍ಡ್ಯಾಂಗಳು ನೀರಿಲ್ಲದೆ ಬತ್ತಿಹೋಗಿವೆ.ಇಂತಹ ದುಸ್ದಿತಿಯಿಂದ ಜಲಚರ ಪ್ರಾಣಿಗಳು ಸತ್ತು ಹೋಗುತ್ತಿವೆ. ಆಮೆ, ಮೀನು, ಏಡಿಗಳು ಗುರುತಿಸದಂತೆ ನಾಶವಾಗಿವೆ. ಕಳೆದ 60 ವರ್ಷಗಳಿಂದಲೂ ಇಂತಹ ಜಲಕ್ಷಾಮವನ್ನ ಹೊಸದುರ್ಗ ತಾಲ್ಲೂಕಿನ ನಾಗರೀಕರು ಕಂಡಿಲ್ಲ.
ತಾಲ್ಲೂಕಿಗೆ ಏಕೈಕ ಜಲಮೂಲವಾದ ಕೆಲ್ಲೋಡು ಬಳಿಯ ವೇದಾವತಿ ನದಿ ಬತ್ತಿಹೋಗಿ ಒಂದು ವರ್ಷ ಕಳೆಯಿತು.ನೀರಿನ ದುರ್ಗತಿ ವಿಕೋಪಕ್ಕೆ ಹೋಗಿದೆ.ಜನರು ಕುಡಿಯುವ ನೀರಿಗಾಗಿ ಪರದಾಡುವಂತ ಸ್ಥಿತಿಗೆ ನಿರ್ಮಾಣವಾಗಿದೆ. ಪಟ್ಟಣದ ಎಲ್ಲಾ ವಾರ್ಡುಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ.ಪ್ರತಿದಿನ ಪುರಸಭೆ ವತಿಯಿಂದ 35 ನೀರಿನ ಟ್ಯಾಂಕರ್ ವಾರ್ಡ್‍ಗಳಿಗೆ ಸರಬರಾಜು ಆಗುತ್ತಿವೆ. ಒಂದು ಟ್ಯಾಂಕರ್ ನೀರು ತುಂಬಿಸಲು ಕನಿಷ್ಠ ಪಕ್ಷ ಅರ್ಧಗಂಟೆ ತೆಗೆದು ಕೊಳ್ಳುತ್ತದೆ.ಆದ್ದರಿಂದ ಪ್ರತಿನಿತ್ಯವೂ ಪುರಸಭೆ ಪೌರಾಡಳಿತ ನೀರು ಸರಬರಾಜು ಮಾಡಲು ಹರಸಾಹಸ ಮಾಡುತ್ತಿವೆ.
ತಾಲ್ಲೂಕಿನ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಗ್ರಾಮ ಪಂಚಾಯಿತಿಯ ಆಡಳಿತ ನೀರು ಸರಬರಾಜು ಮಾಡುತ್ತಿದೆ. ಆದರೆ ಇದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿಲ್ಲ . ಕಳೆದ ವರ್ಷ ಖಾಸಗಿ ಮಿನಿ ನೀರಿನ ಟ್ಯಾಂಕರ್ ಬೆಲೆ 250 ಇತ್ತು.ಈಗ 300 ರಿಂದ 350 ರೂಗೆ ಹೆಚ್ಚಿಸಲಾಗಿದೆ.ದೊಡ್ಡ ಟ್ಯಾಂಕರ್ 400ರೂ ಇತ್ತು ಈಗ 500 ರಿಂದ 600 ರೂಗೆ ಹೆಚ್ಚಿಸಲಾಗಿದೆ.
ಬಹು ಗ್ರಾಮ ಕುಡಿಯುವ ನೀರಿಗಾಗಿ 350 ಕೋಟಿ ಬಿಡುಗಡೆಯಾಗಿದ್ದು ಅಧಿಕಾರಿಗಳ ಬೇಜಾವಾಬ್ದಾರಿ ತನದಿಂದ ಕುಡಿಯುವ ನೀರಿನ ಯೋಜನೆ ಕುಂಟುತ್ತಾ ಸಾಗಿದೆ. ಅನುಷ್ಠಾನ ಕನ್ನಡಿಯೊಳಗಿನ ಗಂಟಾಗಿದೆ.ಶೀಘ್ರವೇ ವಾಣಿ ವಿಲಾಸಕ್ಕೆ ಭದ್ರಾ ನೀರು ಹರಿಸುತ್ತೇವೆ ಎಂದವರು ಕಾಣೆಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಭದ್ರಾ ನೀರು ಬರದ ನಾಡಿಗೆ ಹರಿಯುವ ಬಗ್ಗೆ ನಾನಾ ರೀತಿಯ ವದಂತಿಗಳು ಹಬ್ಬುತ್ತಿದ್ದಾವೆ.
ಬರದ ನಾಡಿಗೆ ಮಳೆ ಬರುತ್ತ ?
ಬರದ ನಾಡಿಗೆ ಮಳೆ ಬರುತ್ತೆಂದು ಪ್ರತಿನಿತ್ಯ ರೈತ ಕಾದು ಕುಳಿತ್ತಿದ್ದಾನೆ. ರೈತ ಕಂಗಲಾಗಿದ್ದಾನೆ . ದಿನೇ-ದಿನೇ ಬೇಸಿಗೆಯ ಬಿಸಿಲು ಝಳ ಅಧಿಕವಾಗುತ್ತಿದೆ.ಈಗ 38 ಡಿಗ್ರಿ ತಾಪಮಾನ ಉಂಟಾಗಿದೆ. ಮಾರ್ಚ್ ಅಂತ್ಯದಿಂದ ಏಪ್ರಿಲ್‍ವರೆಗೆ ಮುಂಗಾರು ಪೂರ್ವ ಭರಣಿಮಳೆ ಬರುತಿತ್ತು . ಆ ಮಳೆಗೆ ಎಳ್ಳು,ಜೋಳ ಬಿತ್ತನೆಯಾಗುತಿತ್ತು ನಂತರಮೇನಿಂದ ಮುಂಗಾರು ಸೋನೆ ಮಳೆ ಬೀಳುತಿತ್ತು.ಆದರೆ ಈಗ ಯಾರು ಸಹತಮ್ಮ ಜಮೀನುಗಳಲ್ಲಿ ಬೇಸಾಯವನ್ನೆ ಹೂಡಿಲ್ಲ.ಇದರಿಂದ ಆಹಾರ ಧಾನ್ಯಗಳಿಗೆ ಕೊರತೆಯಾಗುವುದು ಖಚಿತ.
ಇನ್ನು ಜಾನುವಾರುಗಳ ಮೇವಿಗೂ ಭಂಗ ಉಂಟಾಗಿದೆ.ಬಹುತೇಕ ರೈತರು ಮೇವಿಲ್ಲದಿರುವುದರಿಂದ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.ಅಗ್ಗದ ಬೆಲೆಗೆ ಜಾನುವಾರುಗಳು ಖರೀದಿಯಾಗಿತ್ತಿವೆ. ಬ್ಯಾಂಕಿನಲ್ಲಿ ಬೆಳೆಗಾಗಿ ಸಾಲ ತೆಗೆದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.ಒಟ್ಟಾರೆ ರಾವಣಾಸೂರನ ಹೊಟ್ಟೆಗೆ ಆರು ಕಾಸಿನ ಕಡಲೆ ಎಂಬಂತೆ ರೈತನ ಜೀವನವಾಗಿ ಬಿಟ್ಟಿದೆ.
ಒಟ್ಟಾರೆ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹೆಚ್ಚಿನ ಆಸಕ್ತಿಯನ್ನು ತೋರುತ್ತಿಲ್ಲ ಎಂಬ ವದಂತಿ.ರೈತರಿಗೆ ಸಮರ್ಪಕ ನೀರನ್ನು ಒದಗಿಸುತ್ತಿಲ್ಲ. ನೀರಿನ ಸಮಸ್ಯೆ ಪರಿಹಾರ ಅಧಿಕಾರಿಗಳ ಕಡತಗಳಲ್ಲೆ ತೃಪ್ತಿ ಪಡಬೇಕಾಗಿದೆ.