ಜಿ.ಪಂ.ನಿಂದ ಸಾವಿರ ಕರೆ ಕಟ್ಟೆಗಳ ಅಭಿವೃದ್ದಿ;ಸತ್ಯಭಾಮ

ಚಿತ್ರದುರ್ಗ:

     ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಉದ್ಯೋಗಖಾತ್ರಿ ಯೋಜನೆಯನ್ನು ಬಳಸಿಕೊಂಡು ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಸುಮಾರು 1000 ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಮುಂದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದ್ದಾರೆ.

     ಜಿಲ್ಲೆಯಲ್ಲಿ ಈ ವರ್ಷ ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಆಂದೋಲನವನ್ನಾಗಿ ಕೈಗೊಳ್ಳಲಾಗುತ್ತಿರುವ ಕುರಿತು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅವರು ಮಾಹಿತಿ ನೀಡಿದರು

     ಚಿತ್ರದುರ್ಗ ಜಿಲ್ಲೆ ಪದೇ ಪದೇ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಇದರಿಂದ ಜನ, ಜಾನುವಾರುಗಳು ವರ್ಷದಿಂದ ವರ್ಷಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜಿಲ್ಲೆಯಲ್ಲಿ ಜಲದ ಮೂಲಗಳು ಕಡಿಮೆಯಾಗುತ್ತಿದ್ದು, ಕೆರೆ, ಕಟ್ಟೆಗಳಿಗೆ ಹರಿದು ಬರುವ ನೀರಿನ ಮಾರ್ಗಗಳು, ಕಾಲುವೆಗಳು ಹೂಳು ಹಾಗೂ ಗಿಡಗಂಟೆಗಳಿಂದ ಮುಚ್ಚಿಹೋಗಿವೆ. ಇದರಿಂದಾಗಿ ಜಿಲ್ಲೆಯ ಕೆರೆ, ಕಟ್ಟೆಗಳಲ್ಲಿ ನೀರು ಕಾಣದಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಹೇಳಿದರು

     ಇದರ ಜೊತೆ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿನ ಕೂಲಿಕಾರರು ಉದ್ಯೋಗವನ್ನು ಅರಸಿಕೊಂಡು, ಬೇರೆ, ಬೇರೆ ನಗರ, ಪಟ್ಟಣಗಳಿಗೆ ವಲಸೆ ಹೋಗುವುದು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದು, ಕೆರೆ, ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನೀರು ನಿಲ್ಲುವಂತೆ ಮಾಡುವುದು ಅತಿ ಅವಶ್ಯಕವೆನಿಸಿದೆ. ಹೀಗಾಗಿ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ಜಿಲ್ಲಾ ಪಂಚಾಯತ್ ನಿರ್ಧರಿಸಿದ್ದು, ಇದರಿಂದ ಎರಡು ಬಗೆಯ ಪ್ರಯೋಜನ ಆಗಲಿದೆ ಎಂದರು

       ಒಂದು, ಜಿಲ್ಲೆಯಲ್ಲಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವುದಾದರೆ, ಮತ್ತೊಂದು, ಹೆಚ್ಚು, ಹೆಚ್ಚು ಜನರಿಗೆ ಉದ್ಯೋಗಖಾತ್ರಿಯಡಿ ಕೂಲಿ ಕೆಲಸ ಕೊಟ್ಟಂತಾಗಲಿದ್ದು, ಕೂಲಿಕಾರರು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವುದನ್ನು ತಪ್ಪಿಸಿದಂತಾಗಲಿದೆ. ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಕುವಂತೆ ಮಾಡಲು ಜಿಲ್ಲಾ ಪಂಚಾಯತ್ ಬದ್ಧವಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯತ್‍ಗಳಲ್ಲಿಯೂ ಸಾಮೂಹಿಕವಾಗಿ ಹೆಚ್ಚು, ಹೆಚ್ಚು ಕೂಲಿಕಾರರು ಪಾಲ್ಗೊಳ್ಳುವಂತಹ ಕಾಮಗಾರಿಗಳನ್ನು, ಪ್ರಾರಂಭಿಸಲು ಸೂಚನೆ ನೀಡಲಾಗಿದೆ.

       ಈಗಾಗಲೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವುದು, ಗೋಕಟ್ಟೆಗಳ ಅಭಿವೃದ್ಧಿ, ಕೃಷಿಹೊಂಡ, ಬದುನಿರ್ಮಾಣ, ಕಲ್ಯಾಣಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಸರಿ ಸುಮಾರು ಒಂದು ಸಾವಿರ ಕೆರೆ ಕಾಲುವೆಗಳು, ಕೆರೆಗಳ ಹೂಳೆತ್ತುವುದು, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದ್ದು, ಇದರಲ್ಲಿ ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಸೇರಿದಂತೆ ಬೇರೆ ಇಲಾಖೆಗಳ ಜಲಮೂಲಗಳೂ ಒಳಗೊಂಡಿವೆ ಎಂದು ಸತ್ಯಭಾಮ ತಿಳಿಸಿದರು

     ಚಳ್ಳಕೆರೆ ತಾಲ್ಲೂಕಿನಲ್ಲಿ 184, ಚಿತ್ರದುರ್ಗ- 187, ಹಿರಿಯೂರು-99, ಹೊಳಲ್ಕೆರೆ-225, ಹೊಸದುರ್ಗ- 238, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 57 ಸೇರಿದಂತೆ 990 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ನೂತನ ಆರ್ಥಿಕ ವರ್ಷ ಪ್ರಾರಂಭವಾಗಿದ್ದು, ಏಪ್ರಿಲ್ ತಿಂಗಳು ಒಂದರಲ್ಲೇ ಈಗಾಗಲೆ 26 ದಿನಗಳಲ್ಲಿ ಜಿಲ್ಲೆಯಲ್ಲಿ 11390 ಕೂಲಿಕಾರರಿಗೆ ಉದ್ಯೋಗ ನೀಡುವ ಮೂಲಕ 91920 ಮಾನವದಿನಗಳನ್ನು ಸೃಜಿಸಲಾಗಿದೆ.

    ಈ ಪೈಕಿ ಚಳ್ಳಕೆರೆ ತಾಲ್ಲೂಕಿನಲ್ಲಿ 2695 ಜನರಿಗೆ ಉದ್ಯೋಗ ನೀಡಿ 19775 ಮಾನವ ದಿನ ಸೃಜಿಸಿದೆ. ಚಿತ್ರದುರ್ಗ- 1374 ಜನರಿಗೆ ಉದ್ಯೋಗ ನೀಡಿ 11660 ಮಾನವ ದಿನಗಳ ಸೃಜನೆ. ಹಿರಿಯೂರು- 1541 ಜನರಿಗೆ ಉದ್ಯೋಗ, 11192 ಮಾನವದಿನಗಳು. ಹೊಳಲ್ಕೆರೆ- 1658 ಜನರಿಗೆ ಉದ್ಯೋಗ, 12991 ಮಾನವ ದಿನಗಳು. ಹೊಸದುರ್ಗ- 2292 ಜನರಿಗೆ ಉದ್ಯೋಗ, 21171 ಮಾನವದಿನಗಳು ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1830 ಜನರಿಗೆ ಉದ್ಯೋಗ ನೀಡಿ, 15131 ಮಾನವ ದಿನಗಳನ್ನು ಸೃಜಿಸಲಾಗಿದೆ.

     ಕಳೆದ 2018-19 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಒಟ್ಟು 2.02 ಲಕ್ಷ ಜನರಿಗೆ ಉದ್ಯೋಗ ನೀಡಿ, 63. 46 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು. ಈ ವರ್ಷ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಜಾಗೃತಿ ಮೂಡಿಸಲಾಗುತ್ತಿದ್ದು, ಕೂಲಿ ಕೆಲಸ ಕೇಳಿ ಬರುವ ಎಲ್ಲರಿಗೂ ಉದ್ಯೋಗ ನೀಡಲಾಗುವುದು, ಯಾರೂ ಗುಳೆ ಹೋಗುವ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದರು.

      ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಜಾಗೃತಿ ಮೂಡಿಸುತ್ತಿರುವ ಬಗೆಯನ್ನು ವಿವರಿಸಿದ ಐಇಸಿ ಜಿಲ್ಲಾ ಸಂಯೋಜಕ ರವೀಂದ್ರನಾಥ್ ಅವರು, ಈಗಾಗಲೆ ಗ್ರಾಮಗಳಲ್ಲಿ ಮನೆ, ಮನೆಗಳಿಗೆ ಭೇಟಿ ನೀಡಿ, ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

       ಉದ್ಯೋಗಖಾತ್ರಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ರೋಜಗಾರ್ ದಿವಸ್ ಆಚರಿಸಿ, ಯೋಜನೆ ಕುರಿತು ಹಾಗೂ ಫಲಾನುಭವಿಗಳಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಬಿಪಿಎಲ್ ಪಟ್ಟಿಯಲ್ಲಿದ್ದು, ಇದುವರೆಗೂ ಜಾಬ್ ಕಾರ್ಡ್ ಹೊಂದದೇ ಇರುವವರಿಗೆ ಹೊಸದಾಗಿ ಜಾಬ್ ಕಾರ್ಡ್ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು

      ಒಟ್ಟಾರೆ ಜಿಲ್ಲೆಯಲ್ಲಿ ಈ ವರ್ಷ ಜಿಲ್ಲಾ ಪಂಚಾಯತ್ ನೈಸರ್ಗಿಕ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಬರ ಪೀಡಿತ ಚಿತ್ರದುರ್ಗ ಜಿಲ್ಲೆಯ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದ್ದು, ಇದರೊಟ್ಟಿಗೆ ವರುಣನೂ ಸಹಕರಿಸಿ, ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾದಲ್ಲಿ, ನೀರಿನ ಸಂಕಷ್ಟ ಬಗೆಹರಿಯುವುದರಲ್ಲಿ ಅನುಮಾನವಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap