ದಾವಣಗೆರೆ:
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಹಾಗೂ ಜಿಲ್ಲೆಯ ಕೊರಟಿಕೆರೆಗೆ ಬಸ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಡಿ.25ರಂದು ರಾಷ್ಟ್ರೀಯ ಕಿಸಾನ್ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಚನ್ನಗಿರಿ ತಾಲೂಕಿನ ದುಮ್ಮಿ ಮತ್ತು ಕೊರಟಿಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ-13ರಲಿ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ರೈತರ ಸರಣಿ ಆತ್ಮಹತ್ಯೆ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಈ ವರೆಗೂ ಸರ್ಕಾರ ಬ್ಯಾಂಕ್ ಅಧಿಕಾರಿಗಳಿಗೆ ಈ ವರೆಗೂ ಸುತ್ತೋಲೆ ಕಳುಹಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯು ಕೇವಲ ಕಣ್ಣೀರು ಒರೆಸುವ ತಂತ್ರವಾಗಿದೆ ಎಂದು ಹೇಳಿದರು.
ಫೋರ್‍ಟ್ವೆಂಟಿ ಸರ್ಕಾರ:
ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಅದರಂತೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಆದರೆ, ಈ ಎರಡೂ ಪಕ್ಷಗಳು ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೀಗಾಗಿ ಈ ಎರಡೂ ಸರ್ಕಾರಗಳು ಫೋರ್ ಟ್ವೆಂಟಿ ಸರ್ಕಾರಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎರಡೂ ಸರ್ಕಾರಗಳ ಯೋಜನೆಗಳು ಐಸ್ಕ್ಯಾಂಡಿ ಯೋಜನೆಗಳಾಗಿದ್ದು, ರೈತರಿಗೆ ಈ ಯೋಜನೆಗಳು ತಲುಪುವಷ್ಟೊತ್ತಿಗೆ ಐಸ್‍ಕ್ಯಾಂಡಿ ಕರಗಿ ಹೋಗಿ, ಕಡ್ಡಿ ಮಾತ್ರ ಉಳಿದುಕೊಳ್ಳಲಿದೆ ಎಂದರು.ರಾಜ್ಯ ಸರ್ಕಾರ ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕು. ಕೊರಟಕೆರೆಯಲ್ಲಿ ಬ್ಯಾಂಕ್ ಶಾಖೆ ಆರಂಭಿಸಬೇಕು. ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿ ಜಾರಿಗೆತರಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಶಿವಕುಮಾರ್ ಎಣ್ಣೇರ್, ಚಂದ್ರಕಲಾ, ಬಿ.ಎಂ.ವೀರಭದ್ರಪ್ಪ, ಬಿ.ಜಿ.ಸೋಮಶೇಖರ್, ಜಿ.ಎಸ್.ಚಂದ್ರಪ್ಪ, ಹೆಚ್.ಎನ್.ಮಲ್ಲಿಕಾರ್ಜುನಪ್ಪ, ಎಸ್.ಕೆ.ಶಿವಕುಮಾರ್, ಮಲ್ಲೇಶಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








