ಶುದ್ಧಕುಡಿಯುವ ನೀರು ಘಟಕಕ್ಕೆ ಬೀಗ: ಸಾರ್ವಜನಿಕರ ಪರದಾಟ

ತುಮಕೂರು:

    ನಗರದ ಸರಸ್ವತಿಪುರಂನ ದೇವರಾಜ ಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ ಭಾಗದ ನಾಗರೀಕರು ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ.

    ಕಳೆದ ಡಿಸೆಂಬರ್‍ನಲ್ಲಿ ಉದ್ಘಾಟನೆಯಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯಡಿ ಇದ್ದು, ಈ ಶುದ್ಧಕುಡಿಯುವ ನೀರಿನ ಘಟಕವನ್ನು ಬೆಂಗಳೂರಿನ ಗುತ್ತಿಗೆದಾರ ರಾಮಾಂಜಿ ಎಂಬುವರು ನಿರ್ವಹಣೆಗೆ ಪಡೆದುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಪಾಲಿಕೆಯಲ್ಲಿಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.
ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿರುವವರೇ,

     ವಿದ್ಯುತ್ ಬಿಲ್ ಭರಿಸಬೇಕು ಎಂದು ಪಾಲಿಕೆ ಆಯುಕ್ತ ಭೂಪಾಲನ್ ಆದೇಶ ನೀಡಿರುವುದರಿಂದ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗಿದೆ. ದೇವರಾಜ ಅರಸು ರಸ್ತೆಯಲ್ಲಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯ ಕೆಳಗೆ ಇರುವುದರಿಂದ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ.

     ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡದೇ ಇದ್ದರೂ? ಕಳೆದ ಡಿಸೆಂಬರ್‍ನಿಂದ ಕಾರ್ಯನಿರ್ವಹಿಸುತ್ತಿದ್ದ ಘಟಕದ ಮುಂದೆ ವಿದ್ಯುತ್ ಸಂಪರ್ಕದ ತೊಂದರೆಯಿಂದ ಎರಡು ಮೂರು ದಿನ ನೀರು ಸಿಗುವುದಿಲ್ಲ ಎಂದು ಬೋರ್ಡ್ ಹಾಕಲಾಗಿದ್ದು, ಜನರಿಗೆ ಅನುಕೂಲವಾಗಿದ್ದ ಘಟಕಕ್ಕೆ ಬೀಗ ಹಾಕಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ.


       ಸರಸ್ವತಿಪುರಂ, ಅಮರಜ್ಯೋತಿನಗರ, ಮರಳೂರು ದಿಣ್ಣೆ ಸೇರಿದಂತೆ ಸುತ್ತಮುತ್ತಲಿನ ಕುಟುಂಬಗಳು ಕುಡಿಯುವ ನೀರಿಗೆ ಈ ಶುದ್ಧಕುಡಿಯುವ ನೀರಿನ ಘಟಕವನ್ನೇ ಅವಲಂಬಿಸಿದ್ದೇವೆ. ಆದರೆ ಏಕಾಏಕಿ ವಿದ್ಯುತ್ ಇಲ್ಲ, ಮೂರು ದಿನಗಳ ಕಾಲ ಬಂದ್ ಮಾಡಲಾಗುವುದು ಎಂದು ನಾಮಫಲಕವನ್ನು ನೇತು ಹಾಕಿದ್ದು, ಇದೀಗ ಕುಡಿಯುವ ನೀರಿಗೆ ನೀರಿನ ಕ್ಯಾನ್‍ಗಳನ್ನೇ ಅವಲಂಬಿಸಬೇಕಾಗಿದೆ. ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಅನುಕೂಲ ಮಾಡಿಕೊಡಬೇಕು.

ನಾರಾಯಣ್, ಸ್ಥಳೀಯ ನಿವಾಸಿ


       ಶುದ್ಧ ಕುಡಿಯುವ ನೀರಿನ ಘಟಕಗಳು ಕೆಇಡಬ್ಯೂಎಸ್‍ನ ವ್ಯಾಪ್ತಿಯಲ್ಲಿದೆ. ಈ ಮುಂಚೆಯಿಂದ ಯಾರು ಅದರ ನಿರ್ವಹಣೆ ಮಾಡುತ್ತಿದ್ದಾರೋ ಅವರೇ ಅದರ ವಿದ್ಯುತ್ ಬಿಲ್ ಪಾವತಿ ಮಾಡಿ ಅದರ ನಿರ್ವಹಣೆ ಮಾಡಬೇಕು. ಅದು ಪಾಲಿಕೆ ಆಡಳಿತ ವ್ಯಾಪ್ತಿಗೆ ಒಳಪಟ್ಟ ಮೇಲೆ ಪಾಲಿಕೆಯಿಂದ ವಿದ್ಯುತ್ ಬಿಲ್‍ನ್ನು ಪಾವತಿಸಿ ಅದರ ನಿರ್ವಹಣೆ ನೋಡಿಕೊಳ್ಳಲಾಗುತ್ತದೆ.

ಟಿ.ಭೂಪಾಲನ್, ಪಾಲಿಕೆ ಆಯುಕ್ತರು


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap