ಕಂಚಿಕೊಪ್ಪ ಗ್ರಾ.ಪಂ.ಗೆ ಜೀನಹಳ್ಳಿ ಸೇರ್ಪಡೆಗೆ ವಿರೋಧ

ದಾವಣಗೆರೆ:

      ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಕಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬಾರದು ಎಂದು ಆಗ್ರಹಿಸಿ ಆರುಂಡಿ ಹಾಗೂ ಕಂಚಿಕೊಪ್ಪ ಗ್ರಾಮಸ್ಥರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಕಂಚಿಕೊಪ್ಪ ಗ್ರಾಪಂ ಅಧ್ಯಕ್ಷೆ ಪಿ.ಬಿ.ಸೌಮ್ಯರಾಣಿ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮ ಪಂಚಾಯಿತಿ ಸದಸ್ಯರು, ಆರುಂಡಿ, ಕಂಚಿಕೊಪ್ಪ ಗ್ರಾಮಸ್ಥರು ಕಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಂಚಿಕೊಪ್ಪ, ಆರುಂಡಿಗಳ ಜೊತೆಗೆ ಹೆಚ್ಚುವರಿಯಾಗಿ ಜೀನಹಳ್ಳಿ ಗ್ರಾಮವನ್ನು ಗ್ರಾಪಂಗೆ ಸೇರಿಸುವ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತಕ್ಷಣವೇ ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಪೂಜಾರಿ ವೀರಮಲ್ಲಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕಂಚಿಕೊಪ್ಪ ಗ್ರಾಪಂ ಅಧ್ಯಕ್ಷೆ ಪಿ.ಬಿ.ಸೌಮ್ಯರಾಣಿ, ಜೀನಹಳ್ಳಿ ಗ್ರಾಮವನ್ನು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆ ಜಿಲ್ಲಾಡಳಿತದ ಮುಂದಿದೆಯೆಂಬ ವಿಚಾರ ಗೊತ್ತಾಗಿದೆ. ಆರುಂಡಿಯಲ್ಲಿ 6 ಜನ ಹಾಗೂ ಕಂಚಿಕೊಪ್ಪದಲ್ಲಿ ಐದು ಗ್ರಾ.ಪಂ. ಸದಸ್ಯರು ಸೇರಿ ಒಟ್ಟು 11 ಜನ ಸದಸ್ಯರ ಬಲವನ್ನು ನಮ್ಮ ಗ್ರಾಪಂ ಹೊಂದಿದೆ.

   ಕಂಚಿಕೊಪ್ಪ, ಆರುಂಡಿ ಎರಡೂ ದೊಡ್ಡ ಗ್ರಾಮಗಳಾಗಿವೆ. ಇವುಗಳ ಜೊತೆಗೆ ಹೆಚ್ಚುವರಿಯಾಗಿ ಜೀನಹಳ್ಳಿ ಗ್ರಾಮವನ್ನೂ ಕಂಚಿಕೊಪ್ಪ ಗ್ರಾಪಂಗೆ ಸೇರ್ಪಡೆ ಮಾಡುವುದರಿಂದ ಮೂರೂ ಗ್ರಾಮಗಳ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಆರೋಪಿಸಿದರು.

    ಕಂಚಿಕೊಪ್ಪ, ಆರುಂಡಿ ಗ್ರಾಮಗಳಲ್ಲಿ ಈ ವರೆಗೂ ಯಾವುದೇ ತೊಂದರೆಯಾಗದಂತೆ ನಮ್ಮ ಗ್ರಾಮ ಪಂಚಾಯಿತಿ ಸುಗಮ ಆಡಳಿತ ನಡೆಸಿಕೊಂಡು ಹೋಗುತ್ತಿದೆ. ಆದರೆ, ಇದೀಗÀ ಹೆಚ್ಚುವರಿಯಾಗಿ ಜೀನಹಳ್ಳಿ ಗ್ರಾಮವನ್ನು ಕಂಚಿಕೊಪ್ಪ ಗ್ರಾಪಂಗೆ ಸೇರ್ಪಡೆ ಮಾಡಿದರೆ ಗ್ರಾಪಂ ವ್ಯಾಪ್ತಿಯ ಮೂಲ ಗ್ರಾಮಗಳಾದ ಕಂಚಿಕೊಪ್ಪ, ಆರುಂಡಿ ಗ್ರಾಮಗಳ ಅಭಿವೃದ್ಧಿಯೂ ಕುಂಠಿತವಾಗುತ್ತದೆ. ಹೆಚ್ಚುವರಿಯಾಗಿ ತಮ್ಮ ಗ್ರಾಪಂಗೆ ಜೀನಹಳ್ಳಿ ಸೇರ್ಪಡೆಗೆ ತಮ್ಮೆಲ್ಲರ ತೀವ್ರ ವಿರೋಧವೂ ಇದೆ. ಈ ಹಿನ್ನೆಲೆಯಲ್ಲಿ ಜೀನಹಳ್ಳಿ ಸೇರ್ಪಡೆ ವಿಚಾರವನ್ನು ತಕ್ಷಣವೇ ಜಿಲ್ಲಾಡಳಿತ ಕೈಬಿಡಬೇಕೆಂದು ಒತ್ತಾಯಿಸಿದರು.

     ಏಕಾಏಕಿ ಜೀನಹಳ್ಳಿಯನ್ನು ಕಂಚಿಕೊಪ್ಪ ಗ್ರಾಪಂಗೆ ಸೇರ್ಪಡೆ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮುಂದಿರುವ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕು. ಉಭಯ ಗ್ರಾಮಸ್ಥರ ವಿರೋಧದ ಮಧ್ಯೆಯೂ ಜೀನಹಳ್ಳಿ ಗ್ರಾಮವನ್ನು ಕಂಚಿಕೊಪ್ಪ ಗ್ರಾಪಂಗೆ ಸೇರ್ಪಡೆ ಮಾಡುವ ಪ್ರಯತ್ನ ಮಾಡಬಾರದು ಎಂದು ಒತ್ತಾಯಿಸಿದ ಗ್ರಾಮಸ್ಥರು, ನಮ್ಮ ವಿರೋಧದ ಮಧ್ಯೆಯೂ ಜೀನಹಳ್ಳಿಯನ್ನು ಸೇರಿಸಿದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಕಂಚಿಕೊಪ್ಪ ಗ್ರಾಪಂ ಸದಸ್ಯರಾದ ಟಿ.ಶಿವರಾಜ, ಹಾಲಮ್ಮ, ರತ್ನಮ್ಮ, ಬಿ.ನಾಗರಾಜ, ಚಂದ್ರಪ್ಪ, ಜಿ.ಪಿ.ಮಲ್ಲಿಕಾರ್ಜುನ, ಪಿ.ಬಿ.ಪ್ರಕಾಶ, ಸುರೇಶ, ಶ್ರೀನಿವಾಸ, ಎಂ.ಶಿವರಾಜ, ಜಿ.ಚನ್ನೇಶ, ವಿ.ಪಿ. ಮಹೇಶ್ವರಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link