ಚಳ್ಳಕೆರೆ
ಕಳೆದ ನೂರಾರು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಬಡ ಜನರ,ದೀನ ದಲಿತರ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಎಲ್ಲಾ ಸಮುದಾಯಗಳ ಹಿತವನ್ನು ಕಾಯುವುದರಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸಿಯಾಗಿ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲೂ ಸಹ ಎಲ್ಲಾ ಸವಾಲುಗಳನ್ನು ನಿವಾರಿಸಿ ರಾಜ್ಯದ ಆಡಳಿತದಲ್ಲಿ ಪಕ್ಷ ಯಶಸ್ಸಿಯಾಗಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಇಲ್ಲಿಗೆ ಆಗಮಿಸಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ತೊಂದರೆ ಉಂಟಾಗಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಳೆದ ಮೇ-2018ರಿಂದ ರಾಜ್ಯದಲ್ಲಿ ಈ ಸರ್ಕಾರ ಅಸ್ಥಿತ್ವದಲ್ಲಿದ್ದು, ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಯಾವಾಗಲು ಒಳ್ಳೆಯದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಕೆಲವೊಂದು ಸಂದರ್ಭದಲ್ಲಿ ಪಕ್ಷದ ಹಿರಿಯ ಶಾಸಕರೇ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವುದರಿಂದ ಪಕ್ಷಕ್ಕೆ ಸ್ವಲ್ಪ ಮುಜುಗರವಾಗುವುದು ಸಹಜ. ಆದರೆ, ಪಕ್ಷದ ಹಿರಿಯ ಮುಖಂಡರು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರು ಸಂಬಂಧಪಟ್ಟ ಶಾಸಕರೊಡನೆ ಚರ್ಚೆ ನಡೆಸಿದ ಸಮಸ್ಯೆಯನ್ನು ನಿವಾರಿಸುವರು ಎಂಬ ಭರವಸೆ ನನಗೆ ಇದೆ ಎಂದು ತಿಳಿಸಿದರು.
ಯಾವುದೇ ಹಂತದಲ್ಲೂ ರಮೇಶ್ ಜಾರಕಿಹೊಳಿ ಹೆಸರನ್ನು ಹೇಳದೆ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿದ ಹಿರಿಯರಿದ್ದು ಅವರಿಗೆ ಪಕ್ಷದ ನೀತಿ, ನಿಯಮಗಳ ಬಗ್ಗೆ ಹೆಚ್ಚು ತಿಳಿದಿದೆ. ಈ ಬಗ್ಗೆ ಪಕ್ಷದ ನೇತಾರರು ಅವರನ್ನು ಸಂಪರ್ಕಿಸುವ ಯತ್ನದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಈ ಸರ್ಕಾರ ತನ್ನ ಅವಧಿಯನ್ನು ಪೂರೈಸಲಿದೆ ಎಂಬ ವಿಶ್ವಾಸವನ್ನು ಟಿ.ರಘುಮೂರ್ತಿ ವ್ಯಕ್ತ ಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಚುನಾವಣೆ ಮುಗಿದು ಈಗಾಗಲೇ 15 ದಿನಗಳು ಆಗುತ್ತಾ ಬಂದಿದ್ದು, ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಎಲ್ಲಾ ವಿಧಾನಸಭಾ ವ್ಯಾಪ್ತಿಗಳಲ್ಲಿ ಶೇ> 70ಕ್ಕೂ ಹೆಚ್ಚು ಮತದಾನವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಜಯಸಾಧಿಸಲಿದೆ. ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಮುಖಂಡರು ಹಾಗೂ ಕಾರ್ಯಕರ್ತರ ಮೂಲಕ ಸಂಪೂರ್ಣ ಮಾಹಿತಿ ಪಡೆದಿದ್ದು, ಕಾಂಗ್ರೆಸ್ ಪಕ್ಷ ನಿಸ್ಸಂದೇಹವಾಗಿ ಗೆಲುವು ಸಾಧಿಸಲಿದೆ. ಈ ಚುನಾವಣೆಯಲ್ಲೂ ಸಹ ನಾನು ಮತ್ತೊಮ್ಮೆ ಈ ಕ್ಷೇತ್ರದ ಸಂಸತ್ ಸದಸ್ಯನಾಗಿ ಪುನರಾಯ್ಕೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದರು.