ವರಮಹಾಲಕ್ಷ್ಮೀ: ಮನೆ ಮನೆಗೆ ತೆರಳಲು ಕೊರೊನಾ ಭಯ

ತುಮಕೂರು

    ಎಲ್ಲ ಹಬ್ಬ ಹರಿದಿನಗಳಿಗೆ ಕೊರೊನಾ ಅಂಟಿಬಿಟ್ಟಿದೆ. ಯಾವ ಕಾರ್ಯಕ್ರಮಗಳೂ ಈಗ ಅದ್ಧೂರಿಯಾಗಿ ನಡೆಯುತ್ತಿಲ್ಲ. ವರಮಹಾಲಕ್ಷ್ಮೀ ಪೂಜೆ ಅವರವರ ಮನೆಯಲ್ಲಿಯೇ ಆಚರಿಸಿಕೊಳ್ಳುವುದರಿಂದ ಈ ಆಚರಣೆಗೆ ಯಾವುದೇ ಬಾಧಕ ಆಗಲಿಲ್ಲ. ಆದರೆ ಹಿಂದಿನ ವರ್ಷಗಳ ಅದ್ಧೂರಿ ಅಲಂಕಾರ, ಆಚರಣೆ ಈ ಬಾರಿ ಕಂಡುಬರಲಿಲ್ಲ.

    ತಮ್ಮ ಮನೆಗಳಲ್ಲಿ ತಮ್ಮ ಶಕ್ತಾನುಸಾರ ಲಕ್ಷ್ಮೀಪೂಜೆ ನೆರವೇರಿಸಿಕೊಂಡಿದ್ದಾರೆ. ಕೆಲವರು ಎಂದಿನ ಅಲಂಕಾರ ಮಾಡಿದರೆ ಮತ್ತೆ ಕೆಲವರು ಸರಳವಾಗಿ ಪೂಜೆ ಮುಗಿಸಿದ್ದಾರೆ. ಆದರೆ ಈ ಬಾರಿ ಬಹುತೇಕ ಮಂದಿಗೆ ಎದುರಾದ ವಿಷಯವೆಂದರೆ ಮನೆ ಮನೆಗೆ ತೆರಳಿ ಲಕ್ಷ್ಮೀ ದರ್ಶನ ಮಾಡಿಕೊಂಡು ಬರುತ್ತಿದ್ದ ಸಂದರ್ಭಕ್ಕೆ ಬ್ರೇಕ್ ಬಿದ್ದಿರುವುದು.

    ಮನೆಯಲ್ಲಿ ಪೂಜೆ ಮಾಡಿದರೂ ಸಹ ಹೆಣ್ಣು ಮಕ್ಕಳು ಇತರೆ ಮನೆಗಳಿಗೆ ತೆರಳಿ ಬರುತ್ತಿದ್ದ ದೃಶ್ಯಗಳು ಈ ಬಾರಿ ಕಂಡುಬರಲಿಲ್ಲ. ತಮ್ಮ ಸುತ್ತಮುತ್ತಲ ಒಂದೆರಡು ಮನೆಗಳಿಗೆ ಭೇಟಿ ನೀಡಿರುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನ ಮನೆಗಳಿಗೆ ತೆರಳಲು ಹಿಂದೇಟು ಹಾಕಿದ್ದಾರೆ. ಮನೆಗೆ ಕರೆಯಲೂ ಸಹ ಹಿಂಜರಿದಿದ್ದಾರೆ. ಹೇಳಿಕೇಳಿ ಇದು ಅದ್ಧೂರಿ ಆಚರಣೆ ಸಮಯವಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮನೆಗಳಿಗೆ ಸೀಮಿತವಾಗುವಂತೆ ಹಬ್ಬ ಆಚರಿಸಿಕೊಂಡಿರುವ ಮಂದಿಯೇ ಹೆಚ್ಚು.

    ತುಮಕೂರು ನಗರದ ಲಕ್ಷ್ಮೀದೇವಾಲಯಗಳಲ್ಲಿ ಪೂಜೆ ನಡೆದರೂ ಸಹ ಭಕ್ತರ ಸಂಖ್ಯೆ ವಿರಳವಾಗಿತ್ತು. ಪ್ರತಿವರ್ಷ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಭಕ್ತಗಣ ಹೆಚ್ಚಿನ ಸಂಖ್ಯೆಯಲ್ಲಿ ದೇವರ ಗುಡಿಗಳಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಿದ್ದರು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಬೆರಳೆಣಿಕೆಯ ಮಂದಿ ದೇವರ ದರ್ಶನ ಪಡೆದಿದ್ದಾರೆ.

   ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೇ ಮಹಿಳೆಯರು ಒಂದು ವಾರದಿಂದ ಸಿದ್ಧತೆಗಳನ್ನು ನಡೆಸುತ್ತಾರೆ. ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಲಕ್ಷ್ಮೀಪೂಜೆಗೆ ಹೊಸ ಸೀರೆಯಿಂದ ಹಿಡಿದು ವಿವಿಧ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ಅಂತಹ ಕಳೆ ಕಂಡುಬರಲಿಲ್ಲ. ಶಾಸ್ತ್ರಕ್ಕೆ ಎಂಬಂತೆ ಪೂಜೆ ಪುನಸ್ಕಾರಗಳನ್ನು ಮಾಡಿರುವ ಸಂದರ್ಭಗಳೇ ಹೆಚ್ಚು. ಆದರೆ ಹಬ್ಬದ ಹಿನ್ನೆಲೆಯಲ್ಲಿ ಒಂದೆರಡು ದಿನ ಅಂಗಡಿಗಳಿಗೆ, ಮಾರುಕಟ್ಟೆಗೆ ಜನ ಮುಗಿಬಿದ್ದದ್ದಂತೂ ಸತ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link