ಹುಳಿಯಾರು
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜಿನ ಗ್ರಂಥಾಲಯಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣ ಮಾಡಿ 1 ಕೋಟಿ ಪುಸ್ತಕಗಳನ್ನು ಅಪ್ ಲೋಡ್ ಮಾಡುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಈ ಹಿಂದೆ ಬುದ್ಧಿವಂತರು ಬಿಎ ಓದಲೂ, ಉದ್ಯೋಗ ಅಗತ್ಯ ಉಳ್ಳವರು ತಾಂತ್ರಿಕ ಶಿಕ್ಷಣ ಓದಲು ಹೋಗುತ್ತಿದ್ದರು. ಈಗ ಎಲ್ಲರಲ್ಲೂ ತಾಂತ್ರಿಕ ಶಿಕ್ಷಣ ಓದುವ ಆಸಕ್ತಿ ಬೆಳೆದಿದ್ದು ಇಲ್ಲಿ ಅವಕಾಶ ಸಿಗದವರು ಬಿಎ, ಎಎಸ್‍ಸಿ, ಬಿಕಾಂ ಓದುವುದು ಅನಿವಾರ್ಯವಾಗಿದೆ. ಇಂತಹವರ ಶೈಕ್ಷಣಿಕ ಪ್ರಗತಿಗೆ ನೆರವಾಗಲೆಂದು ಉಚಿತವಾಗಿ ಲ್ಯಾಪ್ ಟಾಪ್ ನೀಡಲಾಗುತ್ತಿದ್ದು ಇದರಲ್ಲಿ ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಮಾತೃಭಾಷೆಯಲ್ಲಿ ವಿಷಯ ಅರ್ಥವಾಗುವಂತೆ ಸುಲಭವಾಗಿ ಬೇರೆ ಭಾಷೆಯಲ್ಲಿ ವಿಷಯಗಳು ಅರ್ಥವಾಗುವುದಿಲ್ಲ. ಹಾಗಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಒಳ್ಳೆಯದು. ಆದರೆ ವ್ಯವಹಾರಕ್ಕೆ ಇತರೆ ಭಾಷೆಗಳ ಪಾಂಡಿತ್ಯ ಇಂದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲ್ಯದಲ್ಲೇ ಇಂಗ್ಲೀಷ್, ಹಿಂದಿ ಕಲಿಯುವುದು ಒಳ್ಳೆಯದು. ಬೇರೆ ಬೇರೆ ಭಾಷೆಗಳ ಭಾಷ್ಯ ಜ್ಞಾನ ನಿಮ್ಮ ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸಹಕಾರಿಯಾಗುತ್ತದೆ ಎಂದರು.
ಯೌವನಾವಸ್ಥಯಲ್ಲಿ ಉದಾಸೀನ ಮತ್ತು ಕಾಲಹರಣ ಮಾಡಿದರೆ ಮುಂದಿನ ಬದುಕು ಕಷ್ಟಕರವಾಗುತ್ತದೆ. ಹಾಗಾಗಿ ಗುರುಹಿರಿಯರು ಹೇಳುವ ಅನುಭವದ ಮಾತುಗಳನ್ನು ಅರ್ಥ ಮಾಡಿಕೊಂಡು ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಅಂಕಗಳಿಕೆಗಿಂತ ಆರ್ಥ ಮಾಡಿಕೊಳ್ಳುವುದು ಶ್ರೇಷ್ಠ ಶಿಕ್ಷಣ ಎಂಬು ಭಾವಿಸಿ ಶಿಕ್ಷಕರು ಕೊಡುವ ನೋಟ್ಸ್ ಮಾತ್ರ ಓದದೆ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಂಡು ತಾವೇ ನೋಟ್ಸ್ ಮಾಡಿಕೊಳ್ಳುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ