ಜಗಳೂರು
ತಾಲ್ಲೂಕಿನ ಬರ ನಿಭಾಯಿಸಿ ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ. ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಸೂಚಿಸಿದರು.
ತಾಲೂಕಿನ ನಿಬಗೂರು, ಅರಿಶಿನಗುಂಡಿ ಹಾಗೂ ಜಮ್ಮಾಪುರ ಗ್ರಾಮಗಳ ಬೆಳೆ ಹಾಗೂ ನರೇಗಾ ಯೋಜನೆ ಕಾಮಗಾರಿ ವೀಕ್ಷಿಸಲು ಭಾನುವಾರ ಆಗಮಿಸಿದ್ದ ರಾಜ್ಯ ಬರ ಅಧ್ಯಯನ ಉಪಸಮಿತಿ ತಂಡದೊಂದಿಗೆ ಆಗಮಿಸಿದ ಅವರು ಬೆಳೆ ವೀಕ್ಷಿಸಿ ಮಾತನಾಡಿದರು.
ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಒದಗಿಸಲು ಬೇಕಾದ ಅನುದಾನವನ್ನು ಸರ್ಕಾರ ನೀಡುತ್ತಿದ್ದು, ಜಿಲ್ಲಾಧಿಕಾರಿಗಳೊಂದಿಗೆ ತಹಶೀಲ್ದಾರ್ ನಿರಂತರ ಸಂಪರ್ಕದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಈ ಭಾಗದ ಜನರಿಗೆ ಬಹುದಿನಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಜಲಸಂಪನ್ಮೂಲ ಸಚಿವರೊಂದಿಗೆ ಮೂರ್ನಾಲ್ಕು ಭಾರಿ ಸಭೆ ಸೇರಿ ರೂಪರೇಷೆ ಸಿದ್ದಪಡಿಸಲಾಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಇದನ್ನು ಸಕಾರಗೊಳಿಸಲು ಚಿಂತನೆ ನಡೆಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಶ್ರೀನಿವಾಸ್ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾದ ಜಗಳೂರು ತಾಲೂಕಿಗೆ ಬರ ಪರಿಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಉಪ ಸಮಿತಿಯ ಬರ ಅಧ್ಯಯನ ವರದಿ ಆಧರಿಸಿ ಇನ್ನು ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ ಈ ಭಾರಿ ಜಗಳೂರು ತಾಲೂಕಿನ ಹಿಂಗಾರು ಮತ್ತು ಮುಂಗಾರಿನ ಬೆಳೆಗಳು ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಕಳೆದ ವರ್ಷಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ಫಸಲ್ ಭೀಮ ಯೋಜನೆಯಡಿಯಲ್ಲಿ ವಿಮಾ ಕಂತನ್ನು ಕಟ್ಟಿದ್ದರೂ ಸಹ ರೈತರ ಖಾತೆಗೆ ಹಣ ಜಮಾ ಮಾಡದೆ ವಿಮಾ ಕಂಪನಿಯವರು ನಿರ್ಲಕ್ಷೆ ವಹಿಸಿದ್ದಾರೆ ಎಂದು ಇಲ್ಲಿನ ರೈತರು ಆಗಮಿಸಿದ್ದ ಕೃಷಿ ಸಚಿವರಿಗೆ ನೇರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಕೃಷಿ ಸಚಿವರು ಪ್ರತಿಕ್ರಿಯಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಂಡು ಬಾಕಿ ಇರುವ ವಿಮೆಯನ್ನು ಕೇಂದ್ರ.ಮತ್ತು ರಾಜ್ಯ ಸರ್ಕಾರದ ನೆರವಿನಿಂದ ವಿಮೆಯನ್ನು ರೈತರಿಗೆ ನೀಡಲು ಕ್ರಮಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ ರೈತರಿಗೆ ವಿಮೆ ನೀಡದೆ ಹೋದರೆ ರಾಜ್ಯ ಸರ್ಕಾರದ ಅನುಧಾನದಲ್ಲಿ ವಿಮೆ ಭರಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಸ್ಪಷ್ಟ ಪಡಿಸಿದರು.
ರಾಜ್ಯದ ಬರ ಅಧ್ಯಯನ ತಂಡದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲಾ ಪಂಚಾಯ್ತಿ ಪ್ರಭಾರಿ ಅಧ್ಯಕ್ಷೆ ಸವಿತಾಕಲ್ಲೇಶಪ್ಪ, ಸದಸ್ಯೆ ಶಾಂತಕುಮಾರಿ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಅಶ್ವತಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ತಹಶೀಲ್ದಾರ್ ಶ್ರೀಧರ್‍ಮೂರ್ತಿ, ಇಒ ಜಾನಕಿರಾಮ್, ಜಿ.ಪಂ.ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಸ್ವಾಮಿ, ಸಿಪಿಐ ಬಿ.ಕೆ.ಲತಾ, ಪಿಎಸ್‍ಐ ಇಮ್ರಾನ್‍ಬೇಗ್, ಜೆಡಿಎಸ್ ಮುಖಂಡ ದೇವೇಂದ್ರಪ್ಪ, ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ , ಗ್ರಾ.ಪಂ ಅಧ್ಯಕ್ಷರಾದ ಬಡಪ್ಪ, ಗ್ರಾಪಂ ಅಭಿವೃದ್ಧಿಅಧಿಕಾರಿ ಮರಳುಸಿದ್ದಪ್ಪ, ಕಾರ್ಯದರ್ಶಿ ಹನುಮಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.