ಕ್ಷೀಣಿಸುತ್ತಿರುವ ಹೋಟೆಲ್ ಉದ್ಯಮ: ಅವಕಾಶವಿದ್ದರೂ ಆರಂಭಿಸುವವರಿಲ್ಲ

ತುಮಕೂರು:

    ಉದ್ಯೋಗ ಸಿಗದವರು, ಹೆಚ್ಚು ಓದದವರು, ಈಗಾಗಲೇ ಹೋಟೆಲ್‍ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ ಅನುಭವ ಇರುವವರು ಹೀಗೆ ಅನೇಕರಿಗೆ ಬೀದಿ ಬದಿಯ ಆಹಾರ ಪೂರೈಸುವ ಈ ಉದ್ಯಮ ಮಾರ್ಗ ತೋರಿಸಿಕೊಟ್ಟಿದೆ. ಹಲವರ ಬದುಕಿಗೆ ಇದು ದಾರಿದೀಪವಾಗಿದೆ.

    ಆದರೆ ಅವರಿಗಷ್ಟೇ ಅನುಕೂಲವಾದರೆ ಸಾಕೆ? ಶುಚಿತ್ವ ಮತ್ತಿತರ ಅಂಶಗಳ ಕಡೆಗೆ ಗಮನ ಹರಿಸಬೇಕಲ್ಲವೆ? ಇವರ್ಯಾರೂ ಕೌಶಲ್ಯಭರಿತ, ಅನುಭವಿ ವೃತ್ತಿಪರತೆ ಹೊಂದಿದವರಲ್ಲ. ಆ ಕ್ಷಣಕ್ಕೆ ಬದುಕಿನ ಮಾರ್ಗ ಕಂಡುಕೊಳ್ಳಲು ಒಂದೊಂದು ಗಾಡಿ ಹೊಂಚಿಕೊಂಡವರು. ಇವರಲ್ಲಿ ಅದೆಷ್ಟೋ ಮಂದಿ ಕುಟುಂಬದ ಯಜಮಾನ ಮರಣಿಸಿದ ಮಹಿಳೆಯರೂ ಸೇರಿದ್ದಾರೆ. ಇವರೆಲ್ಲರ ಮುಖ್ಯ ಗುರಿ ಜೀವನ ಸಾಗಿಸುವುದು. ಆ ಮೂಲಕ ಸಂಪಾದನೆ. ತನ್ನ ಬದುಕು ಕಟ್ಟಿಕೊಳ್ಳುವುದು.

    ಸ್ಥಳೀಯರಷ್ಟೇ ಅಲ್ಲ, ಎಲ್ಲಿಂದಲೋ ಬಂದು ಇದೇ ಕಾಯಕದಲ್ಲಿ ಇಲ್ಲಿಯೇ ತಳವೂರಿರುವ ಅದೆಷ್ಟೋ ಮಂದಿ ಸಿಗುತ್ತಾರೆ. ಯಾವುದೋ ಕೆಲಸಕ್ಕೆ ಬಂದು ಸಣ್ಣ ಅಂಗಡಿ ತೆರೆದು ದೊಡ್ಡ ವ್ಯವಹಾರ ಮಾಡಿಕೊಂಡವರೂ ಇದ್ದಾರೆ. ಇದೆಲ್ಲವೂ ಅವರವರ ವ್ಯವಹಾರ ಜ್ಞಾನಕ್ಕೆ ತಕ್ಕಂತೆ ಮುಖ್ಯ ರಸ್ತೆಗಳಲ್ಲಿ, ರಸ್ತೆಯ ಬದಿಗಳಲ್ಲಿ ಇಟ್ಟುಕೊಂಡಿರುವ ಅಂಗಡಿ, ಗುಡಾರಗಳನ್ನು ಗಮನಿಸಿದರೆ ಅವರ ಅಲ್ಲಿನ ಚಿತ್ರಣಗಳು ಗೋಚರಿಸುತ್ತವೆ.

    ಬೀದಿ ಬದಿಯಲ್ಲಿ ಅಥವಾ ಮೋರಿಗಳ ಪಕ್ಕದಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಆಹಾರ ತಯಾರಿಸಿ ಗ್ರಾಹಕರಿಗೆ ನೀಡಲು ಎಷ್ಟು ಬೇಕೋ ಆ ಎಲ್ಲ ಸಿದ್ಧತೆಗಳನ್ನೂ ಇವರು ಮಾಡಿಕೊಳ್ಳುತ್ತಾರೆ. ರುಚಿ ರುಚಿಯಾದ ತಿಂಡಿ, ಪದಾರ್ಥಗಳನ್ನು ನೀಡುತ್ತಾರೆ. ಅವರಿಗೆ ಅಷ್ಟು ಮಾತ್ರ ಗೊತ್ತು. ಆದರೆ ಆ ತಿಂಡಿಗೆ ಬಳಸುವ ಪೂರಕ ವಸ್ತುಗಳು ಎಷ್ಟು ಸೇಫ್ ಎಂಬ ಬಗ್ಗೆ ಅವರಿಗೇನು ಗೊತ್ತು? ಯಾವುದು ಹಾನಿಕಾರಕ, ಹಾನಿಕಾರಕವಲ್ಲದ ಉತ್ಪನ್ನ ಯಾವುದು… ಈ ಯಾವ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲಾರರು.

    ಕಡಿಮೆ ದರಕ್ಕೆ ಯಾವುದು ಸಿಗುವುದೋ ಅದನ್ನೆಲ್ಲ ತರುತ್ತಾರೆ. ಅಡುಗೆ ರುಚಿಯಾಗಿರಲು ಯಾವುದು ಬೇಕೋ ಅದನ್ನು ಬಳಸುತ್ತಾರೆ. ನೀವು ಯಾವುದೇ ರಸ್ತೆ ಬದಿಯ ತಿಂಡಿ ಗಾಡಿಗಳನ್ನು ಗಮನಿಸಿ. ಅದರ ಹಿಂದೆ -ಸುತ್ತಮುತ್ತ ಕಣ್ಣಾಡಿಸಿದರೆ ಅಲ್ಲೆಲ್ಲೂ ಶುಚಿತ್ವದ ಲಕ್ಷಣಗಳು ಕಂಡುಬರುವುದಿಲ್ಲ. ಗಾಡಿಗಳ ಹಿಂದೆ ಚರಂಡಿ, ಮೋರಿ ಸಾಮಾನ್ಯವಾಗಿ ಇರುತ್ತವೆ. ಕೆಲವು ಕಡೆ ಚರಂಡಿ ಕಟ್ಟಿಕೊಂಡು ನೊಣಗಳು ಮುತ್ತಿಗೆ ಹಾಕಿರುತ್ತವೆ. ಅಲ್ಲೆಲ್ಲಾ ಸೊಳ್ಳೆಗಳ ಆವಾಸ ಸ್ಥಾನ. ಒತ್ತಡದ ಬದುಕಿನಲ್ಲಿ ಇದನ್ನೆಲ್ಲ ಗಮನಿಸುವವರಿಲ್ಲ. ತುತ್ತಿನ ಚೀಲ ತುಂಬಿಸಿಕೊಂಡರೆ ಸಾಕು ಎನ್ನುವ ಧಾವಂತದಲ್ಲಿ ಗಾಡಿಯ ಮುಂಭಾಗದಲ್ಲಿ ಕುಳಿತೋ ಅಥವಾ ನಿಂತುಕೊಂಡೇ ಗಬಗಬನೆ ತಿಂದು ಅಲ್ಲಿಂದ ಜಾಗ ಖಾಲಿ ಮಾಡುವುದಷ್ಟೇ ನಮ್ಮ ಕೆಲಸ.

    ಬಯಲು ಬದಿ, ಮೈದಾನಗಳಲ್ಲಿ ಎಲ್ಲ ತರಹದ ತಿಂಡಿ ತಿನಿಸುಗಳು ಲಭ್ಯವಾಗುತ್ತವೆ. ಇಡ್ಲಿ, ವಡೆ, ಚಿತ್ರಾನ್ನ, ಪಲಾವ್, ದೋಸೆ, ರೊಟ್ಟಿ, ಪರೋಟ, ಎಗ್ ರೈಸ್, ಆಮ್ಲೇಟ್, ಚಿಕನ್ ಬಿರಿಯಾನಿ, ಕಬಾಬ್, ಪಾನಿಪೂರಿ, ಮಸಾಲಪೂರಿ, ಬೇಲ್‍ಪುರಿ, ಜಿಲೇಬಿ, ಪಕೋಡ ಹೀಗೆ ತರಾವರಿ ತಿಂಡಿತಿನಿಸುಗಳೆಲ್ಲಾ ಇಲ್ಲಿ ಲಭ್ಯವಿರುತ್ತವೆ. ಕೆಲವರು ಅಲ್ಲಿಯೇ ತಯಾರಿಸಿ ಕೊಟ್ಟರೆ ಮತ್ತೆ ಕೆಲವರು ಮನೆಯಿಂದಲೇ ಸಿದ್ಧಪಡಿಸಿಕೊಂಡು ಬಂದಿರುತ್ತಾರೆ.

    ಮನೆಗಳಲ್ಲಿಯೇ ಆಹಾರ ಸಿದ್ಧಪಡಿಸಿಕೊಂಡು ವಾಹನದಲ್ಲಿ ತಂದು ಮಾರಾಟ ಮಾಡುವ ಒಂದು ವರ್ಗವೂ ಇದೆ. ಊಟದ ಸಮಯಕ್ಕೆ, ತಿಂಡಿಯ ಸಮಯಕ್ಕೆ ವಾಹನ ಆಗಮಿಸುತ್ತದೆ. ನಿಗದಿತ ಸ್ಥಳದಲ್ಲಿ ಆಹಾರ ವಿತರಿಸಿ ಹೊರಟು ಹೋಗುತ್ತದೆ. ಇದೇ ಆಹಾರಕ್ಕೆ ಕೆಲವರು ಕಾಯುತ್ತಿರುತ್ತಾರೆ. ಇಂತಹ ದೃಶ್ಯಗಳೂ ಸಹ ಅಲ್ಲಲ್ಲಿ ಕಂಡುಬರುತ್ತವೆ. ಹೆಚ್ಚಿನ ಜನರು ಇದನ್ನು ನಿರೀಕ್ಷಿಸುತ್ತಾರೆ. ಮನೆಯ ಊಟ, ಇಲ್ಲಿ ತಂದು ಮಾರುತ್ತಾರೆ ಎಂಬ ನಂಬಿಕೆ ಬಹಳಷ್ಟು ಜನರಲ್ಲಿ ಇರುತ್ತದೆ. ಈ ನಂಬಿಕೆಯನ್ನು ಹುಸಿಗೊಳಿಸುವ ಯಾವುದೇ ಪ್ರಯತ್ನಗಳಾಗಬಾರದು ಎಂಬುದು ಹಲವರ ಕಳಕಳಿ.

    ಬೀದಿಬದಿಯಲ್ಲಿ ಸಿಗುವ ಆಹಾರ ಪದಾರ್ಥಗಳಲ್ಲಿ ರುಚಿಗೆ ಕೊರತೆ ಇಲ್ಲ. ರುಚಿ ಬರಲು ಏನು ಬೇಕೋ ಅವೆಲ್ಲವನ್ನೂ ಅವರು ಸಿದ್ಧಪಡಿಸಿರುತ್ತಾರೆ. ಟೇಸ್ಟ್ ಪುಡಿ ಹಾಕುತ್ತಾರೆಂಬುದು ಎಲ್ಲರಿಗೂ ಗೊತ್ತು. ಆದರೆ ಇನ್ನೂ ಉಳಿದ ವಿಷಯಗಳ ಕಡೆಗೆ ಗಮನಹರಿಸಿದರೆ ಕೆಲವು ಆತಂಕಗಳು ಎದುರಾಗುತ್ತವೆ.

    ಅಲ್ಲಿನ ಶುಚಿತ್ವ, ಆಹಾರ ತಯಾರಿಸಲು ಬಳಸುವ ಎಣ್ಣೆ, ಪಾತ್ರೆಗಳು, ಆಹಾರ ಪದಾರ್ಥ ಹಾಕಿಕೊಡುವ ಪ್ಲೇಟ್‍ಗಳು, ಪಾರ್ಸೆಲ್‍ಗೆ ಬಳಸುವ ಪೇಪರ್, ಕುಡಿಯಲು ಕೊಡುವ ನೀರು ಇವೆಲ್ಲವೂ ಕೆಲ ಕಾಲ ಯೋಚಿಸುವಂತಹ ವಿಷಯಗಳು. ಕೆಲವೆ ಪ್ಲೇಟುಗಳು ಅಲ್ಲಿರುತ್ತವೆ. ಬಂದರಿಗೆಲ್ಲ ಅವುಗಳನ್ನೇ ವಾಶ್ ಮಾಡಿ ಕೊಡಲಾಗುತ್ತದೆ. ಪಕ್ಕದಲ್ಲೇ ಇರುವ ಟಬ್‍ಗೆ ಹಾಕಿ ಪ್ಲೇಟ್ ಎತ್ತಿ ಕೊಡುತ್ತಾರೆ. ಪ್ಲೇಟ್ ತೊಳೆಯಲು ಬಳಸುವ ನೀರು ಯಾವುದು? ಆ ನೀರನ್ನು ಎಲ್ಲಿಂದ ತರುತ್ತಾರೆ? ಪಕ್ಕದಲ್ಲೇ ಇರುವ ವಾಟರ್ ಕ್ಯಾನ್ ಎಷ್ಟು ಸುರಕ್ಷಿತ? ಆ ನೀರು ಕುಡಿಯಲು ಯೋಗ್ಯವೆ? ಗ್ರಾಹಕರಿಗೆ ಕೊಡುವ ನೀರು ಶುದ್ಧ ಮತ್ತು ಸತ್ವಯುತ ನೀರೆ ಎಂಬುದು ಮಾತ್ರ ನಿಗೂಢ ! ಇದನ್ನು ಪ್ರಶ್ನಿಸುವವರು ಇಲ್ಲ.

     ತಳ್ಳುವ ಗಾಡಿಗಳಲ್ಲಿ, ರಸ್ತೆ ಬದಿಯಲ್ಲಿ ವಿತರಿಸುವ ಆಹಾರ ವ್ಯವಸ್ಥೆ ಎಷ್ಟು ಸುರಕ್ಷಿತ ಎಂಬುದು ಪ್ರಶ್ನಾರ್ಹ. ಆಹಾರದ ಮೇಲೆ ನೊಣಗಳ ಹಾವಳಿ, ಧೂಳಿನ ಕಣಗಳು ಆಹಾರ ಪದಾರ್ಥ ಸೇರುವುದು, ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು, ಬಳಸುವ ಎಣ್ಣೆ ಯಾವ ಗುಣಮಟ್ಟದ್ದು? ಈ ಎಲ್ಲ ವಿಷಯಗಳು ಕೆಲವೊಮ್ಮೆ ಆತಂಕ ಹುಟ್ಟಿಸುತ್ತವೆ. ಹೊಟ್ಟೆ ತುಂಬಿಸಿಕೊಳ್ಳಲು ಗ್ರಾಹಕರು ಆತುರದಲ್ಲಿ ತಿಂದು ಹೋದರೆ ವ್ಯಾಪಾರಸ್ಥರು ಆತುರದಲ್ಲಿ ವ್ಯಾಪಾರ ಮುಗಿಸಿ ಅಂದಿನ ಅದಾಯದ ಲೆಕ್ಕ ಹಾಕಿಕೊಂಡು ಮನೆಗೆ ಹೋಗುತ್ತಾರೆ. ಶುಚಿತ್ವದ ಕಡೆಗೆ ಗಮನ ಕೊಡಬೇಕೆನ್ನುವವರು ಈ ಬಗ್ಗೆ ಎಚ್ಚರಿಕೆ ನೀಡುವವರು ಯಾರು?

    ತುಮಕೂರು ಈಗ ತುಂಬಾ ಬೆಳೆದಿದೆ. ಜನಸಂಖ್ಯೆಯೂ ಹೆಚ್ಚಿದೆ. ಇದಕ್ಕೆ ತಕ್ಕಂತೆ ಹೋಟೆಲ್ ಉದ್ಯಮ ಅಭಿವೃದ್ಧಿಯಾಗಬೇಕಿತ್ತು. ಆದರೆ ಕ್ಷೀಣಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಡಾವಣೆಗಳು ಹೆಚ್ಚಿದಂತೆ ಪುಟ್‍ಪಾತ್‍ಗಳು ಹೆಚ್ಚುತ್ತಿವೆ. ಅಲ್ಲೆಲ್ಲ ಅಂಗಡಿಗಳು ತೆರೆದುಕೊಳ್ಳುತ್ತವೆ. ನಿರುದ್ಯೋಗಿಗಳ ಉದ್ಯೋಗದ ಹೆಸರಿನಲ್ಲಿ ಎಲ್ಲರೂ ಅಸಹಾಯಕರಾಗಿ ಅಂಗಡಿ ತೆರೆದುಕೊಳ್ಳಲು ಅವಕಾಶ ಮಾಡುತ್ತಾರೆ. ಹೀಗಾಗಿ ಜನತೆಯು ಇವರನ್ನೇ ಅವಲಂಬಿಸುತ್ತಿದ್ದಾರೆ. ಇದು ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ನೀಡುತ್ತಿದೆ ಎನ್ನುತ್ತಾರೆ ನಗರದ ಪ್ರಮುಖ ಹೋಟೆಲ್ ಉದ್ಯಮಿಯೊಬ್ಬರು.

    ಸಸ್ಯಹಾರಿ ಊಟದ ಜೊತೆಗೆ ಮಾಂಸಹಾರಿ ಊಟ ಒದಗಿಸುವ ವಾಹನಗಳು ಈಗ ಹೆಚ್ಚುತ್ತಿವೆ. ಮಧ್ಯಾಹ್ನದ ಊಟದ ವೇಳೆಗೆ ಕೆಲವು ಕಡೆ ವಾಹನಗಳಲ್ಲಿ ತಂದು ಊಟ ಬಡಿಸಿ ಹೋಗುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಚಿಕನ್, ಮಟನ್, ಕಬಾಬ್, ಬಿರಿಯಾನಿ ಇತ್ಯಾದಿ ಹೆಸರುಗಳು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇವೆಲ್ಲವೂ ರಸ್ತೆ ಬದಿಯಲ್ಲಿಯೇ ಸಿಗುವಂತಾ ದರೆ, ಹೋಟೆಲ್‍ಗಳ ಗತಿ ಏನು ಎಂದು ಪ್ರಶ್ನಿಸುವವರೂ ಇದ್ದಾರೆ. ಅಲ್ಲದೆ, ಹೀಗೆ ವಾಹನಗಳಲ್ಲಿ ತಂದು ಬಡಿಸಿ ಹೋಗುವ ನಾನ್‍ವೆಜ್ ಯಾವ ರೀತಿ ಇರುತ್ತದೆ? ಎಲ್ಲಿಂದ ತರುತ್ತಾರೆ? ಅದರ ಗುಣಮಟ್ಟ ಹೇಗೆ ಎಂದು ಯಾರಾದರೂ ಪ್ರಶ್ನಿಸುತ್ತಾರ ಎಂದು ಕೇಳುವವರೂ ಇದ್ದಾರೆ. ಆದರೆ ಈ ಪ್ರಶ್ನೆಯನ್ನು ತಮ್ಮೊಳಗೆ ಹಾಕಿಕೊಳ್ಳುತ್ತಾರೆಯೇ ಹೊರತು ಎದುರಿಗೆ ನಿಂತು ಪರಿಶೀಲಿಸುವ ಮಂದಿ ಕಡಿಮೆಯೇ. ಇವೆಲ್ಲವೂ ನಂಬಿಕೆ ಮತ್ತು ವಿಶ್ವಾಸಗಳಿಂದಲೇ ನಡೆದು ಹೋಗುತ್ತಿವೆ.

     ಹಿಂದೆ ತುಮಕೂರಿನಲ್ಲಿ 200ಕ್ಕೂ ಹೆಚ್ಚು ಹೋಟೆಲ್‍ಗಳಿದ್ದವು. ಕ್ರಮೇಣ 170ಕ್ಕೂ ಕಡಿಮೆ ಸಂಖ್ಯೆಗೆ ಇಳಿದಿವೆ. ಹೊಸದಾಗಿ ಹೋಟೆಲ್ ಉದ್ಯಮ ಮಾಡಲು ಯಾರೂ ಆಸಕ್ತಿ ವಹಿಸುತ್ತಿಲ್ಲ. ಏಕೆಂದರೆ, ಬಂಡವಾಳ ಹಾಕಿ ಅದರಲ್ಲಿ ಲಾಭ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿಯ ಆಹಾರಕ್ಕೆ ಜನತೆಯೂ ಹೊಂದಿಕೊಂಡಿರುವುದರಿಂದ ಹೋಟೆಲ್ ಉದ್ಯಮ ನಷ್ಟಕ್ಕೆ ಸಿಲುಕಿದೆ. ಬೆಂಗಳೂರಿನಲ್ಲಿ ಇರುವಂತಹ ದೊಡ್ಡ ಹೋಟೆಲ್‍ಗಳು ತುಮಕೂರಿನಲ್ಲಿ ಎಲ್ಲಿವೆ? ಇತ್ತೀಚೆಗೆ ಯಾರಾದರೂ ಈ ಉದ್ಯಮ ನಡೆಸಲು ಮುಂದೆ ಬರುತ್ತಿದ್ದಾರೆಯೇ? ಇವೆಲ್ಲವೂ ಯೋಚಿಸಬೇಕಾದಂತಹ ಸಂಗತಿ.

 ಸುರೇಶ್ ಹೊಳ್ಳ, ಮಾಜಿ ಅಧ್ಯಕ್ಷರು, ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘ, ತುಮಕೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap