ಬೆಂಗಳೂರು
ರೈತರಿಗೆ ಗುಣಮಟ್ಟದ ಸಸಿ ಹಾಗೂ ಪರಿಕರಗಳ ಪೂರೈಕೆಗೆ ರಾಜ್ಯದ ಎಲ್ಲ ಜೈವಿಕ ಕೇಂದ್ರಗಳ ಉನ್ನತೀಕರಣ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಅವರು ಹುಳಿಮಾವು ಜೈವಿಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ, ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಜೈವಿಕ ಕೇಂದ್ರ, ಜೈವಿಕ ಸಂಪನ್ಮೂಲಗಳು, ಸೇವೆಗಳು, ನಿಖರ ಹಾಗೂ ಸಾವಯವ ಬೇಸಾಯಕ್ಕೆ ಉತ್ತೇಜನ ನೀಡುವ ಕೇಂದ್ರ ಇದಾಗಿದೆ. ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಅಂಗಾಂಶ ಕೃಷಿ ಯಿಂದ ಬಾಳೆ ಬೇಸಾಯ ಮಾಡುವ ಪ್ರಯೋಗಾಲಯ ಹಾಗೂ ಸೌಲಭ್ಯವನ್ನು ವೀಕ್ಷಿಸಿದರು. ಸದರಿ ಕೇಂದ್ರದಲ್ಲಿ ಬಾಳೆ ಬೆಳೆಯ ಜೊತೆಗೆ ಇತರ ಅಲಂಕಾರಿಕ ಗಿಡಗಳ ಬೇಸಾಯವನ್ನೂ ಮಾಡಲಾಗುತ್ತಿದೆ. ಎರೆಹುಳು ಉತ್ಪಾದನ ಘಟಕ, ಜೈವಿಕ ಗೊಬ್ಬರ, ಪರಿಕರಗಳ ಉತ್ಪಾದನೆ, ಅಣಬೆ ಸ್ಪಾನ್ ಉತ್ಪಾದನೆ, ವಿವಿಧ ತೋಟಗಾರಿಕೆ ಗಿಡಗಳ ನರ್ಸರಿಗಳನ್ನ ವಿಕ್ಷಿಸಿದರು.
ಇಲ್ಲಿನ ಗುಣಮಟ್ಟದ ಸಸಿಗಳು, ಪರಿಕರಗಳು ಎಲ್ಲ ರೈತರಿಗೂ ಲಭ್ಯವಾಗಬೇಕು. ಆಗ ರೈತರಿಗೆ ನಷ್ಟದ ಪ್ರಮಾಣ ಕಡಿಮೆಯಾಗುತ್ತೆ. ಜೊತೆಗೆ ಇಳುವರಿ ಪ್ರಮಾಣವೂ ಹೆಚ್ಚಾಗುತ್ತೆ. ಹಾಗಾಗಿ ರಾಜ್ಯದ ಇತರ ಸ್ಥಳಗಳಲ್ಲಿ ಸ್ಥಾಪಿಸಿರುವ ಜೈವಿಕ ಕೇಂದ್ರಗಳನ್ನ ಇದೇ ಮಾದರಿಯಲ್ಲಿ ಉನ್ನತೀಕರಿಸಿ, ರೈತರಿಗೆ ಉತ್ತಮ ಗುಣಮಟ್ಟದ ಸಸ್ಯ, ಪರಿಕರ ದೊರೆಯುವಂತಾಗಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕು ಮುನ್ನ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ವಿಲೇವಾರಿ ಹಾಗೂ ಅದಕ್ಕೆ ಸಂಬಂಧಿಸಿದ ಸ್ವಚ್ಚ ಭಾರತ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ವಿಡಿಯೊ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಕಸ ವಿಂಗಡನೆ ಕೆಲಸ ಕಡ್ಡಾಯವಾಗಿ ಆಗಬೇಕು. ಹಸಿ ಕಸ, ಒಣ ಕಸ ಬೇರ್ಪಡಿಸಲೆಬೇಕು. ಇದಕ್ಕೆ ಬೇಕಾದ ವ್ಯವಸ್ಥೆಯನ್ನ ಸ್ಥಳಿಯ ಸಂಸ್ಥೆಯಿಂದ ಮಾಡಬೇಕು.
ಯಾವುದೆ ಯೋಜನೆ ಕಾರ್ಯ ರೂಪಕ್ಕೆ ಬರಲು ಅಧಿಕಾರಿಗಳ ಇಚ್ಚಾಶಕ್ತಿ ಅವಶ್ಯಕ. ಯೋಜನೆ ಜಾರಿಗೆ ಅನುದಾನದ ಅವಶ್ಯಕತೆ ಇದ್ದಲ್ಲಿ, ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವರು ಹೇಳಿದರು. ವಿಕಾಸ ಸೌಧದಿಂದ ನಡೆಸಿದ ವಿಡಿಯೊ ಸಂವಾದ ಸಭೆಯಲ್ಲಿ ಪೌರಾಡಳಿತ ಇಲಾಖೆ ನಿರ್ದೇಶಕಿ ಎಂ. ಕಾವೇರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ