ಬರೀ ಘೋಷಣೆಯಿಂದ ನೀರು-ಮೇವು ಸಿಗಲ್ಲ

ದಾವಣಗೆರೆ:

         ಬರೀ ಘೋಷಣೆಯಿಂದ ನೀರು, ಮೇವು ಸಿಗಲ್ಲ. ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಲ-ಗದ್ದೆಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಅರಿತು ಸರ್ಕಾರದಿಂದ ಬರ ಪರಿಹಾರಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವತ್ತ ಗಮನ ಹರಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ.

          ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರತಿ ಕ್ಷೇತ್ರವಾರು 50 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನೂ 50 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ, ವಾಸ್ತವದಲ್ಲಿ 25 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ಆರೋಪಿಸಿದರು.

          ಮಣ್ಣಿನ ಮಗ ಎಂಬುದಾಗಿ ಹೇಳಿಕೊಳ್ಳುವ ಹೆಚ್.ಡಿ.ದೇವೇಗೌಡ ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯ ಇವರಿಬ್ಬರೂ ಸಹ ಮಣ್ಣಿನ ಮಕ್ಕಳ ಸಮಸ್ಯೆಯನ್ನು ಅರಿಯಲು ಒಂದೇವೊಂದು ಹೊಲ-ಗದ್ದೆಗೆ ಹೋಗಿ ಬರ ಅಧ್ಯಯನ ನಡೆಸಿಲ್ಲ. ಮೊದಲು ಇವರು ರೈತರ ಜಮೀನುಗಳಿಗೆ ಹೋಗಿ ಬರ ಅಧ್ಯಯನ ಮಾಡಿದರೆ, ಜಿಲ್ಲಾ ಮಂತ್ರಿಗಳು, ನಂತರ ಅಧಿಕಾರಿಗಳು ಸಹ ಹೊಲ-ಗದ್ದೆಗಳಿಗೆ ಹೋಗಿ ರೈತರ ಸಮಸ್ಯೆ ಅರಿತು, ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ದೇವೇಗೌಡ ಹಾಗೂ ಸಿದ್ದರಾಮಯ್ಯ ರೈತರ ಹೊಲಗಳಿಗೆ ಭೇಟಿ ನೀಡಿ, ಆಗಿರುವ ಬೆಳೆ ನಷ್ಟ, ನೀರಿನ ಹಾಹಾಕಾರ, ಮೇವಿನ ಬವಣೆಯನ್ನು ಅರಿಯುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

          ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಈಗ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡದೇ, ಈಗ ವಿರೋಧ ಪಕ್ಷವಾಗಿರುವ ಬಿಜೆಪಿಯ ಕಡೆಗೆ ಬೊಟ್ಟು ಮಾಡುತ್ತಿರುವುದು ನಿಜಕ್ಕೂ ಹಾಸ್ಯಸ್ಪದವಾಗಿದೆ ಎಂದ ಅವರು, ನಿಮ್ಮ ಸರ್ಕಾರ ಎಷ್ಟು ದಿನ ಇರುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಮೊದಲು ಘೋಷಣೆ ಮಾಡಿದಂತೆ ರೈತರ ಸಾಲ ಮನ್ನಾ ಮಾಡಿ, ರೈತರಲ್ಲಿ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

        ಬಿಜೆಪಿ ನಾಲ್ಕು ತಂಡಗಳನ್ನು ಮಾಡಿಕೊಂಡು ರಾಜ್ಯದ 100 ತಾಲೂಕುಗಳಲ್ಲಿ ಬರ ಅಧ್ಯಯನ ನಡೆಸಿದ ಸಂದರ್ಭದಲ್ಲಿ ರೈತರ ಬೆಳೆ ನಷ್ಟವಾಗಿರುವುದು, ಕುಡಿಯುವ ನೀರಿಲ್ಲದಿರುವುದು, ಜಾನುವಾರುಗಳಿಗೆ ಮೇವಿಲ್ಲದಿರುವುದು ಗಮನಕ್ಕೆ ಬಂದಿದ್ದು, ಮೇವಿಲ್ಲದ ಕಾರಣಕ್ಕೆ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಕಾಂಗ್ರೆಸ್-ಬಿಜೆಪಿ ಜನರ ಸಮಸ್ಯೆ ಬಗೆಹರಿಸಲು ಸರ್ಕಾರ ರಚಿಸಿಲ್ಲ. ಬದಲಿಗೆ ಅಧಿಕಾರಕ್ಕಾಗಿ ಮಾತ್ರ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ನಾವು ಎಲ್ಲೂ ಸರ್ಕಾರ ರಚನೆ ಮಾಡುವುದಾಗಿ ಹೇಳಿಲ್ಲ. ಸರ್ಕಾರ ಬೀಳಿಸಲು ಸಹ ಹೊಗಲ್ಲ. ಆದರೆ, ಸಮ್ಮಿಶ್ರ ಸರ್ಕಾರ ಬಿದ್ದ ಮೇಲೆ ಸರ್ಕಾರ ರಚನೆ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಪ್ರೊ.ಎನ್.ಲಿಂಗಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಜಶೇಖರ್, ಬಿ.ರಮೇಶ್ ನಾಯ್ಕ, ಮುಖಂಡರಾದ ಬಿ.ಎಂ.ಸತೀಶ್, ಮುಕುಂದಪ್ಪ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap