ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ…! ನಿರ್ವಹಣೆಯ ಲೋಪ

ಚಿತ್ರದುರ್ಗ;

     ನಗರದಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರಿತಪಿಸುವ ದುಸ್ಥಿತಿ ನಿರ್ಮಾಣವಾಗಲಿದೆ. ಕಳೆದೆರಡು ವರ್ಷಗಳಿಂದ ಮಳೆಯ ಕೊರತೆ ಕಾರಣದಿಂದಾಗಿ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸಂಜೆ-ಮುಂಜಾನೆ ನೀರಿನದೇ ಯೋಚನೆ ಮಾಡುವಂತಾಗಿದೆ.

     ಇಡೀ ನಗರ ಕುಡಿಯುವ ನೀರಿನ ಸಮಸ್ಯೆ ಕಾರಣ ಸಂಕಷ್ಟಕ್ಕೆ ಸಿಲುಕಿದೆ. ನಾಗರೀಕರಲ್ಲಿ ಒಂದು ರೀತಿಯ ಆತಂಕವೂ ಶುರುವಾಗಿದೆ. ಚಿತ್ರದುರ್ಗ ನಗರಕ್ಕೆ ನೀರು ಪೂರೈಸುವ ವಾಣಿವಿಲಾಸ ಸಾಗರ ಮತ್ತು ಶಾಂತಿಸಾಗರ ಯೋಜನೆಯೇ ಶಾಶ್ವತ ಕುಡಿಯುವ ನೀರಿನ ಆಸರೆಯಾಗಿದ್ದು, ಈ ವರ್ಷವೂ ಸಮರ್ಪಕವಾಗಿ ಮಳೆಯಾಗದಿದ್ದರೆ ಈ ಎರಡೂ ಜಲಮೂಲಗಳು ಬತ್ತಿ ಹೋಗಲಿವೆ.

     ಸದ್ಯಕ್ಕೆ ಶಾಂತಿಸಾಗ ಮತ್ತು ವಾಣಿವಿಲಾಸ ಸಾಗರದಿಂದ ಬರುವ ನೀರನ್ನೆ ಹಂಚಿಕೆ ಮಾಡಲಾಗುತ್ತಿದೆ. ಈ ನೀರು ಸಹ ಸಾಕಾಗುತ್ತಿಲ್ಲ. ಉಳಿದ ಬೆರಳೆಣಿಕೆಷ್ಟು ಇರುವ ಕೊಳವೆ ಬಾವಿಗಳಿಂದ ಕೆಲವು ಪ್ರದೇಶಗಳಿಗೆ ಮಾತ್ರ ನೀರು ಸಬರಾಜು ಮಾಡಲಾಗುತ್ತಿದೆ. ಬಹುತೇಕ ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

      ನಗರದ ವೆಂಕಟೇಶ್ವರ ಬಡಾವಣೆ, ಜೋಗಿಮಟ್ಟಿ ರಸ್ತೆ, ಬುರುಜನಹಟ್ಟಿ, ಕೆಳಗೋಟೆ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿತ್ಯವೂ ಚುನಾಯಿತ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿಕ್ಕೆ ನೀರಿಗಾಗಿ ಮನವಿ ಸಲ್ಲಿಸಲಾಗುತ್ತಿದೆ.

       ಇದು ಕೇವಲ ನಗರ ಪ್ರದೇಶದ ಸಮಸ್ಯೆ ಅಲ್ಲ, ಹಳ್ಳಿಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚುತ್ತಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಹಳ್ಳಿಗಳಲ್ಲಿ ಪ್ರತಿ ನಿತ್ಯ ಮೂರು-ನಾಲ್ಕು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.

ನೀರಿನ ಘಟಕಗಳಿಗೆ ಬೀಗ;

      ಚಿತ್ರದುರ್ಗ ನಗರದ ವಿವಿಧ ಕಡೆ ಲೋಕಸಭಾ ಸದಸ್ಯರು ಹಾಗೂ ನಗರಸಭೆಯ ಅನುದಾನದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರಿನ ಲಬ್ಯತೆ ಇಲ್ಲದ ಕಾರಣ ಬೀಗ ಜಡಿಯಲಾಗಿದೆ.

       ಕೆಳಗೋಟೆಯ ಮುನ್ಸಿಪಲ್ ಕಾಲೋನಿಯಲ್ಲಿ ಚುನಾವಣೆ ಘೋಷಣೆಯ ವೇಳೆ ಹಿಂದಿನ ಸಂಸದ ಬಿ.ಎನ್.ಚಂದ್ರಪ್ಪ ಅವರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಉದ್ಘಾಟನೆಯಾದ ಮರು ದಿನವೇ ಇದು ಸ್ಥಗಿತಗೊಂಡಿದೆ.
ಈ ಭಾಗದ ಜನರ ಒತ್ತಾಯದ ಹಿನ್ನಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಮತ್ತು ನೀರಿನ ಲಬ್ಯತೆಯನ್ನು ಮನಗಾಣದೆ ತರಾತುರಿಯಲ್ಲಿ ನಿರ್ಮಿಸಲಾಗಿದೆ. ಸಂಸದರು ಉದ್ಘಾಟನೆ ಮಾಡಿ ಹಿಂತಿರುಗಿದ ಕೆಲವು ಗಂಟೆಗಳ ಕಾಲ ಮಾತ್ರ ಈ ಘಟಕದಿಂದ ನೀರು ವಿತರಣೆಯಾಗಿದೆ. ಮರುದಿನವೇ ಬೀಗ ಜಡಿಯಲಾಗಿದ್ದು, ಇದುವರೆಗೂ ಬಾಗಿಲು ತೆರೆದಿಲ್ಲ.

        ಹಾಗೆಯೇ ಪೊಲೀಸ್ ವಸತಿ ಗೃಹದಲ್ಲಿ ನಿರ್ಮಿಸಲಾಗಿರುವ ನೀರಿನ ಘಟಕದ ಪರಿಸ್ಥಿತಿಯೂ ಇದೇ ಆಗಿದೆ. ಇಲ್ಲಿಯೂ ಸಂಸದರ ನಿಧಿಯಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ರೂಪಾಯಿಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಮಾಡಲಾಗಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಇದಕ್ಕೂ ಬೀಗ ಜಡಿಯಲಾಗಿದೆ.

       ಇನ್ನೂ ಸ್ಟೇಡಿಯಂ ಮುಂಭಾಗದಲ್ಲಿ ಚಿತ್ರದುರ್ಗ ನಗರಸಭೆ ಮತ್ತು ಕರ್ನಾಟಕ ಜಲಮಂಡಳಿಯ 2016-17ನೇ ಸಾಲಿನ ವಿಶೇಷ ಘಟಕ ಯೋಜನೆಯ ಮರು ಹಂಚಿಕೆ ಅನುದಾನದ ಅಡಿಯಲ್ಲಿ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕಕ್ಕೆ ಕಳೆದ ಮೂರು ತಿಂಗಳಿಂದ ಇದೇ ಕಾರಣಕ್ಕಾಗಿ ಬೀಗ ಜಡಿಯಲಾಗಿದೆ.

    ನಗರದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಿತ್ತು. ಇದೀಗ ಬಹುತೇಕ ಘಟಕಗಳಿಗೆ ಬೀಗ ಜಡಿದಿರುವ ಕಾರಣದಿಂದಾಗಿ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap