ಚಿತ್ರದುರ್ಗ:
ಶಾಂತಿ ಪ್ರಿಯ ಬುದ್ಧನ ಉಪದೇಶಗಳು ಸಾರ್ವಕಾಲಿಕವಾದಗಳು ಎಂದು ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು.ಇಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ಬುದ್ಧ ಪೂರ್ಣಿಮೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬುದ್ಧನ ತತ್ವಗಳು ಕೇವಲ ನಮ್ಮ ದೇಶಕ್ಕೆ ಸೀಮಿತವಾಗದೆ ಇಡೀ ವಿಶ್ವಕ್ಕೆ ಅನ್ವಯವಾಗುವಂತಹವುಗಳು. ಮಾನವ ಧರ್ಮ ಮತ್ತು ಮಾನವ ಪ್ರೀತಿ ಮುಖ್ಯವಾಗಿರುವ ಆತನ ಮಾರ್ಗ ನಮ್ಮೆಲ್ಲರ ಮಾರ್ಗವಾಗಬೇಕಾಗಿದೆ ಎಂದರು.
ರಾಜ ಮನೆತನದಲ್ಲಿ ಹುಟ್ಟಿದ್ದರೂ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸಿದ ಆ ಮೂಲಕ ಆ ನೋವುಗಳ ಬಿಡುಗಡೆಗೆ ದಾರಿ ತೋರಿದ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದರು.ಹುಟ್ಟು ಮತ್ತು ಸಾವುಗಳ ಮಧ್ಯದ ಬದುಕನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕಾಯ, ವಾಚ, ಮನಸ, ಒಳ್ಳೆಯ ನೋಟ, ನಡೆ, ಮಾತು, ಅಲೋಚನೆ, ಮನಸ್ಸುಗಳು ಬೇಕು. ಅಂತಹ ಚಾರಿತ್ರ್ಯವನ್ನು ಭಗವಾನ್ ಬುದ್ಧರು ಸಾರಿದ್ದಾರೆ ಎಂದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, 2500 ವರ್ಷಗಳ ಹಿಂದೆ ಆವತರಿಸಿದ ಭಗವಾನ್ ಬುದ್ಧರು ಅಂದಿನಿಂದ ಇಂದಿನವರೆಗೂ ಜನರ ಕಣ್ತೆರೆಸಿದ ಮಹಾಜ್ಞಾನಿ ಎಂದು ಹೇಳಿದರು.
ಅಧಿಕಾರದಲ್ಲಿದ್ದು, ಅಧಿಕಾರ ಬಿಟ್ಟು, ಬಡವರ, ಶೋಷಿತರ, ಮಹಿಳೆಯರ, ಕಾರ್ಮಿಕರ, ರೋಗಿಗಳ ಸೇವೆ ಮಾಡಿ ಮನುಷ್ಯ ಪ್ರೀತಿ ಕಂಡು ಕಂಡವರು. ಅವರ ಸ್ಮರಣೆಯೇ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸುತ್ತವೆ ಎಂದರು.
ಹುಣ್ಣೆಮೆಯ ಬೆಳದಿಂಗಳು ಮನಸ್ಸಿನ ಪರಿಶುದ್ಧತೆಯ ಸಂಕೇತ. ಅಂತಹ ಬೆಳದಿಂಗಳು ಹೇಗೆ ಭಗವಾನ್ ಬುದ್ಧರಿಗೆ ಪರಿವರ್ತನೆಯನ್ನು ನೀಡಿತೋ ನಾವೆಲ್ಲರೂ ಸಹ ಅಂತಹ ಬೆಳದಿಂಗಳಂತಹ ಮನಸ್ಸುಗಳನ್ನು ಹೊಂದಿ ನಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಹೊಂದಿಕೊಂಡಾಗ ನಮ್ಮ ಬದುಕು ಬೆಳದಿಂಗಳಂತೆ ತಂಪೆರೆಯುತ್ತದೆ ಎಂದರು.
ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕರಾದ ಡಾ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಜಾಗತೀಕರಣ, ಆಧುನಿಕರಣ ಪ್ರಭಾವದಿಂದ ಮನುಷ್ಯ ಪ್ರೀತಿ ಕಣ್ಮರೆಯಾಗುತ್ತಿದ್ದು, ಮಾನವೀಯ ಸಂಬಂಧಗಳು ಇಲ್ಲವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬುದ್ಧನ ಬದುಕು ಹಾಗೂ ಆತನ ಉಪದೇಶಗಳು ಇಡೀ ಮನುಕುಲಕ್ಕೆ ಅನಿವಾರ್ಯವಾಗಿವೆ. ಹಣ, ಅಧಿಕಾರ, ಅಂತಸ್ತುಗಳ ಬಂಧನದಿಂದ ಬಿಡುಗಡೆಯಾದಾಗ ಮಾತ್ರ ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿ ಕಾಣಲು ಸಾಧ್ಯ ಎಂದರು.
ಆತನ ಬೋಧಿಸಿದ ಪಂಚತತ್ವಗಳು ಮತ್ತು ಅಷ್ಠಾಂಗ ಮಾರ್ಗಗಳ ದಾರಿ ಸರ್ವರಿಗೂ ಅನ್ವಯವಾಗುವಂತಹದು. ದುಃಖದ ಅಡಗುವಿಕೆ ಮತ್ತು ದುಃಖದ ನಿವಾರಣೆಗೆ ಬುದ್ಧನ ಧ್ಯಾನ ಮಾರ್ಗವು ನಮ್ಮಗಳ ಪಾಪ ಕರ್ಮಗಳಿಂದ ಮುಕ್ತವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬುದ್ಧನ ಮಧ್ಯಮ ಮಾರ್ಗ ನಮ್ಮೆಲ್ಲರ ಮಾರ್ಗವಾಗಬೇಕು. ಸಿದ್ದಾರ್ಥ ಬುದ್ಧನಾದದ್ದು ಎಂದರೆ ಮಾನವ ವಿಶ್ವ ಮಾನವನಾದ ಎಂದರ್ಥ. ವಿಶ್ವ ಮಾನವನ ಪ್ರಜ್ಞೆ, ವಿಶ್ವ ಮಾನವ ಮೈತ್ರಿ, ವಿಶ್ವ ಮಾನವ ವಿದ್ಯೆಗಳು ಜೀವ ಕಾರುಣ್ಯವನ್ನು ಕಲಿಸುತ್ತವೆ. ಇಲ್ಲಿ ಯಾವುದೇ ಜಾತಿ,ಮತ, ಮೇಲುಕೀಳು ಧರ್ಮ ದೇವರುಗಳು ಇಲ್ಲದ ಸ್ವಚ್ಛಂದ ಮಾನವ ಪ್ರೀತಿಯಿಂದ ಇಡೀ ಮನು ಕುಲಕ್ಕೆ ಬದುಕಿನ ಭರವಸೆವನ್ನು, ಬದುಕಿನ ಸಾಮರಸ್ಯವನ್ನು ಪ್ರೇರಿಪಿಸುತ್ತವೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಜಿ.ಟಿ.ಬಾಬುರೆಡ್ಡಿ ಅವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ