ಚಿತ್ರದುರ್ಗ:
ಮಕ್ಕಳಿಗೆ ಹಾಗೂ ವಯಸ್ಕರಿಗೆ ಪ್ರಾಥಮಿಕ ಹಂತದಲ್ಲಿಯೇ ಶ್ರವಣ ದೋಷ ಪತ್ತೆಹಚ್ಚಿ ಚಿಕಿತ್ಸೆ ನೀಡಿದಲ್ಲಿ, ಕಿವುಡುತನ ನಿವಾರಿಸಿ ಅವರನ್ನು ಮುಖ್ಯವಾಹಿನಿಗೆ ತರಬಹುದು ಎಂದು ಜಿಲ್ಲಾಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ರವೀಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್ 3 ದಿನವನ್ನು ‘ವಿಶ್ವ ಶ್ರವಣ ದಿನ’ ಎಂದು ಘೋಷಿಸಿದೆ. ಕಿವುಡುತನ ನಿಯಂತ್ರಣ ಹಾಗೂ ಶ್ರವಣ ದೋಷ ಮಿತಿಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಿವುಡುತನದಿಂದ ಆತಂಕ ಪಡುವ ಅಗತ್ಯವಿಲ್ಲ .ಭ್ರೂಣವಸ್ಥೆಯಲ್ಲಿ (3 ರಿಂದ 4 ತಿಂಗಳು) ಮಗು ಕೇಳಿಸಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತದೆ. ಜನನವಾದ ಎಲ್ಲ ಮಕ್ಕಳಿಗೂ ಒಂದು ತಿಂಗಳೊಳಗೆ ಕಿವಿ ಪರೀಕ್ಷೆ ಆಗಬೇಕು ಎಂದರು
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಶ್ರವಣ ದೋಷ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶ್ರವಣ ದೋಷ ನಿಯಂತ್ರಣಕ್ಕೆ ಮೂಢನಂಬಿಕೆಯಿಂದ ಹೊರಬರಬೇಕು. ಕಿವಿಗೆ ಕಾಯಿಸಿದ ಎಣ್ಣೆ ಬಿಡುವುದು, ದೇವರ ಮೊರೆ ಹೋಗುವುದು, ಕಿವಿಯಲ್ಲಿ ಕಡ್ಡಿ ಇಡುವುದನ್ನು ನಿಲ್ಲಿಸಬೇಕು ಎಂದರು.
ಅನುವಂಶಿಯತೆ, ಡಿಜೆ ಸೌಂಡ್, ತೀವ್ರತರ ಶಬ್ದ ಆಲಿಸುವುದು, ಪಟಾಕಿ ಸಿಡಿಸುವುದು, ಹೆಚ್ಚಾಗಿ ಇಯರ್ ಫೋನ್ ಬಳಕೆ ಮಾಡುವುದರಿಂದ ಶ್ರವಣ ದೋಷ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರಪಂಚದಲ್ಲಿ 46 ದಶಲಕ್ಷ ಜನ ಶ್ರವಣದೋಷದಿಂದ ಬಳಲುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ, 2050 ರ ವೇಳೆಗೆ ಪ್ರತಿ 10 ಜನರಿಗೆ ಒಬ್ಬರಂತೆ ಕಿವುಡುತನ ಉಂಟಾಗಲಿದೆ ಎಂದರು
ಭಾರತದಲ್ಲಿ ಶೇ 6.3 ರಷ್ಟು ಜನ ಶ್ರವಣ ದೋಷವುಳ್ಳವರಿದ್ದಾರೆ. ಇದರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು. ಶ್ರವಣ ಯಂತ್ರ ಬಳಸಲು ನಾಚಿಕೆ ಬೇಡ. ಸರ್ಕಾರದಿಂದ ಉಚಿತವಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಶ್ರವಣ ದೋಷ ನಿವಾರಣೆ ಚಿಕಿತ್ಸೆಗೆ ಯಾವುದೇ ಆಲಸ್ಯ ಬೇಡ ಎಂದು ಡಾ. ರವೀಂದ್ರ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಿವಿ ಅತಿಮುಖ್ಯವಾದದ್ದು. ಕಣ್ಣು ಪ್ರಪಂಚವನ್ನು ನೋಡಿದರೆ, ಕಿವಿ ಜನರ ಆಲಿಕೆಯನ್ನು ಕೇಳುತ್ತದೆ. ಕಿವಿ ಸೋರುವುದು, ತಲೆ ನೋವು, ಜ್ವರ ಹಾಗೂ ಕಿವಿಯಲ್ಲಿ ಶಬ್ದ ಕಂಡಕೊಡಲೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ, ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಶ್ರವಣದೋಷ ನಿವಾರಿಸಬಹುದು.
‘ಜೀವನಕ್ಕಾಗಿ ಶ್ರವಣ-ಶ್ರವಣ ದೋಷವು ನಿಮ್ಮನ್ನು ಮಿತಿಗೊಳಿಸಲು ಬಿಡಬೇಡಿ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಜಿಲ್ಲೆಯ ಪ್ರತಿ ಹಳ್ಳಿಗಳಲ್ಲೂ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರವಣ ತಜ್ಞೆ ಚಂದನ್ ಕುಮಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಕಾರ್ಯಕ್ರಮದ ನೋಡಲ್ ಅಧಿಕಾರಿ ಸಿ.ಓ.ಸುಧಾ, ನಿವೃತ್ತ ವೈದ್ಯ ಡಾ.ತಿಪ್ಪೇಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವಿಶ್ವ ಶ್ರವಣ ದಿನದ ಅಂಗವಾಗಿ ನಗರದ ಚಿನ್ಮೂಲಾದ್ರಿ ಪ್ರೌಢಶಾಲೆಯ 564 ವಿದ್ಯಾರ್ಥಿಗಳಿಗೆ ಶ್ರವಣ ದೋಷ ತಪಾಸಣಾ ನಡೆಸಿ, ಶ್ರವಣ ದೋಷ ನಿವಾರಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








