35 ಕುಟುಂಬಗಳ ನಷ್ಟದ ಮಾಹಿತಿ ಪಡೆದ ನಂತರ ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ : ವಿಜಯಕುಮಾರ್

ಚಳ್ಳಕೆರೆ

         ನಗರದ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅನಾಹುತ ಹಿನ್ನೆಲೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳು ನಷ್ಟ ಅನುಭವಿಸಿದ್ದು, ಪ್ರತಿಯೊಂದು ಕುಟುಂಬದ ನಷ್ಟದ ಅಂದಾಜಿನ ವಿವರವನ್ನು ಸಂಗ್ರಹಿಸಲಾಗುತ್ತಿದೆ. ನಷ್ಟದ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಕೂಡಲೇ ವರದಿ ನೀಡುವಂತೆ ತಹಶೀಲ್ದಾರ್‍ಗೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ವಿಜಯಕುಮಾರ್ ತಿಳಿಸಿದರು.

         ಅವರು ಗುರುವಾರ ಕರೇಕಲ್ ಕೆರೆಯಂಗಳದ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸುಟ್ಟು ಕರಕಲಾಗಿದ್ದ ಮನೆಯ ವಸ್ತುಗಳು, ಬಟ್ಟೆ ಬರೆಗಳು, ಪಾತ್ರೆಗಳು ಇತರೆ ಪೀಠೋಪಕರಣಗಳನ್ನು ವೀಕ್ಷಿಸಿದರು. ಅಗ್ನಿ ಆಕಸ್ಮಿಕದಲ್ಲಿ ಎಲ್ಲವನ್ನೂ ಕಳೆದುಕೊಂಡ ಕುಟುಂಬದ ಸದಸ್ಯರೊಡನೆ ಮಾತನಾಡಿದ ಅವರು, ಸರ್ಕಾರಕ್ಕೆ ಈ ಅನಾಹುತದ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ವಿವರವನ್ನು ನೀಡಲಾಗುವುದು. ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿಯಮದ ಪ್ರಕಾರ ತಹಶೀಲ್ದಾರ್‍ರವರಿಗೆ ಪರಿಹಾರದ ಚೆಕನ್ನು ನೀಡುವರು.

          ಇಂತಹ ಘಟನೆಗಳು ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಕಾರಣ ಇಲ್ಲಿರುವ ಎಲ್ಲಾ ಕುಟುಂಬಗಳು ಕೂಲಿಯಿಂದ ಜೀವನ ನಿರ್ವಹಿಸುವ ಕಡುಬಡವರಾಗಿದ್ಧಾರೆ. ಚಿಕ್ಕ, ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದಕುನ್ನು ಸವಾಲಾಗಿ ಎದುರಿಸುತ್ತಿದ್ಧಾರೆ. ಆದರೆ, ಇಂತಹ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, 35 ಕುಟುಂಬಗಳು ಅಕ್ಷರ ಸಹ ಬೀದಿಪಾಲಾಗಿದ್ದು, ತಾತ್ಕಾಲಿಕವಾಗಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಹಶೀಲ್ದಾರ್ ಮತ್ತು ನಗರಸಭಾ ಆಯುಕ್ತರು ಹಲವು ಉಪಯುಕ್ತ ಕ್ರಮಗಳನ್ನು ಕೈಗೊಂಡಿದ್ಧಾರೆ.

         ಮುಂದಿನ ದಿನಗಳಲ್ಲಾದರೂ ಜಾಗೃತೆ ವಹಿಸುವತೆ ಅವರು ಜನತೆಗೆ ಸೂಚನೆ ನೀಡಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ಕರೆಸಿ ರೇಷನ್ ಕಾರ್ಡ್, ಗುರುತಿನ ಚೀಟಿ ಗಳನ್ನು ಸಿದ್ದಪಡಿಸುವಂತೆ ಸೂಚನೆ ನೀಡಿದರು. ಸದ್ಯದ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ಊಟದ ವ್ಯವಸ್ಥೆ, ಅಗತ್ಯ ವಸ್ತುಗಳನ್ನು ನೀಡುವಂತೆ ತಿಳಿಸಿದರು.

           ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಅಗ್ನಿ ಅನಾಹುತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಭೇಟಿ ನೀಡಿ ಬೆಂಕಿ ಹೆಚ್ಚು ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ. ಆದರೂ ಪರಿಸ್ಥಿತಿ ಕೈಮೀರಿ ಹೋಗಿದ್ದು ಸಿಲೆಂಡರ್ ಸ್ಪೋಟದಿಂದ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಸಹ ಅಗ್ನಿ ಶಾಮಕ ಪಡೆ ಸುಮಾರು 3 ಗಂಟೆಗಳ ಕಾರ್ಯಚರಣೆಯಿಂದ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿತು. ನೊಂದ ಕುಟುಂಬಗಳಿಗೆ ಯಾವ ರೀತಿ ಪರಿಹಾರ ನೀಡಬೇಕು, ಎಷ್ಟು ನೀಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿ ಅಲ್ಲಿಂದ ನಿರ್ದೇಶನ ಬಂದ ಕೂಡಲೇ ಅಗತ್ಯವಿರುವ ಸೌಲಭ್ಯ ನೀಡಲಾಗುವುದು ಎಂದರು.

          ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಈಗ 35ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ ಮಠ ಹಾಗೂ ವಸ್ತುಗಳನ್ನು ಕಳೆದುಕೊಂಡು ನಿಶ್ರಿತರಾಗಿದ್ದಾರೆ. ಅವರಿಗೆ ನಗರಸಭೆಯ ಪಂಪ್ ಹೌಸ್ ಬಳಿ ತಾತ್ಕಾಲಿಕ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕುಟುಂಬಗಳಿಗೂ ಕೆಲವು ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಈ ವ್ಯವಸ್ಥೆ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದರು.

         ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಮಾತನಾಡಿ, ಅಗ್ನಿ ಆಕಸ್ಮಿಕ ಸಂಭವಿಸಿದ ಕೂಡಲೇ ಗುಡಿಸಲಿನಲ್ಲಿದ್ದ ಬಹುತೇಕ ಜನ ತಮ್ಮ ಪ್ರಾಣ ರಕ್ಷಣೆಗಾಗಿ ಮನೆಯಿಂದ ಹೊರ ಬಂದಿದ್ಧಾರೆ. ಇನ್ನೂ ಕೆಲವರು ಆ ಸಂದರ್ಭದಲ್ಲಿ ಮನೆಯಲ್ಲಿರದೆ ಕಾರ್ಯನಿಮಿತ್ತ ಹೊರ ಹೋಗಿದ್ಧಾರೆ. ಪೊಲೀಸ್ ಇಲಾಖೆ ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಮತ್ತು ನಷ್ಟದ ಅಂದಾಜು ಸಿದ್ದಪಡಿಸುವ ಸಂದರ್ಭದಲ್ಲಿ 17 ಕುಟುಂಬಗಳ ಬದಲಾಗಿ ಒಟ್ಟು 35 ಕುಟುಂಬಗಳು ನಷ್ಟದ ವ್ಯಾಪ್ತಿಗೆ ಬಂದಿವೆ. ಮನೆಗಳಲ್ಲಿ ದಾಖಲಾತಿಗಳನ್ನು ಕಳೆದುಕೊಂಡರು ಪೊಲೀಸ್ ಇಲಾಖೆ ಪ್ರಥಮ ವರ್ತಮಾನ ವರದಿ ಪಡೆದು ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಿ ಮತಚೀಟಿ, ರೇಷನ್, ಆಧಾರ ಕಾರ್ಡ್, ಮಾಕ್ಸ್ಕಾರ್ಡ್, ವಾಹನ ಪರಾವನಿಗೆ, ಪಾಲಿಸಿ ಮತ್ತು ಬ್ಯಾಂಕ್‍ನ ಖಾತೆಯ ಪುಸ್ತಕವನ್ನು ಪಡೆದುಕೊಳ್ಳಲು ತಿಳಿಸಿದರು.

         ಪಿಎಸ್‍ಐ ಕೆ.ಸತೀಶ್‍ನಾಯ್ಕ, ಆಹಾರ ಇಲಾಖೆ ಅಧಿಕಾರಿ ರಂಗಸ್ವಾಮಿ, ಕಂದಾಯ ಇಲಾಖೆಯ ರಾಜೇಶ್, ರಾಘವೇಂದ್ರ, ಲಿಂಗೇಗೌಡ, ಕಂದಾಯಾಧಿಕಾರಿ ವಿ.ಈರಮ್ಮ, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap